Site icon Vistara News

ವಿಸ್ತಾರ ಸಂಪಾದಕೀಯ: ಪಿಎಫ್‌ಐ ಜತೆ ಬಜರಂಗ ದಳ ಹೋಲಿಕೆ ಸರಿಯಲ್ಲ

Bajrang Dal's comparison with PFI is not right

#image_title

ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಯಾವ ಹೊಸ ಯೋಜನೆಗಳನ್ನು ನೀಡುತ್ತೇವೆ ಎಂದು ಘೋಷಿಸುವುದು ಸಾಮಾನ್ಯ. ಆದರೆ ಹಿಂದಿನ ಸರ್ಕಾರದ ಯಾವುದೋ ಕ್ರಮಕ್ಕೆ ಪ್ರತೀಕಾರದಂತೆ ಇನ್ನೊಂದು ಕ್ರಮವನ್ನು ತೆಗೆದುಕೊಳ್ಳುವುದು, ಇನ್ಯಾವುದೋ ಒಂದು ಸಂಘಟನೆಯನ್ನು ನಿಷೇಧಿಸುತ್ತೇವೆ ಎನ್ನುವುದು ವಿಚಿತ್ರ ರೂಢಿ. ಇಂಥದೊಂದು ವಿಲಕ್ಷಣ ಸಂಪ್ರದಾಯಕ್ಕೆ ಕಾಂಗ್ರೆಸ್ ನಾಂದಿ ಹಾಡಿದೆ.

ಬಜರಂಗ ದಳವನ್ನು ನಿಷೇಧಿಸುವ ಮಾತಿನ‌ ಜತೆಗೆ, ದೇಶ ವಿರೋಧಿ ಸಂಘಟನೆಯಾದ ಪಿಎಫ್‌‌ಐ ಜತೆ ಅದನ್ನು ಕಾಂಗ್ರೆಸ್ ಹೋಲಿಸಿದೆ. ಇದು ಸರಿಯಲ್ಲ. ಹಲವಾರು ದೇಶ ವಿರೋಧಿ ಕೃತ್ಯ, ಪಾಕ್ ಜತೆ ನಂಟು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಸುಪ್ರೀಂ ಕೋರ್ಟ್ ಕೂಡ ಈ ನಿಷೇಧವನ್ನು ಎತ್ತಿ ಹಿಡಿದಿದೆ. ಅಂದರೆ ಪಿಎಫ್‌ಐ ನಿಷೇಧದ ಹಿಂದೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳ ತನಿಖಾ ಪ್ರಕ್ರಿಯೆ ಇದೆ; ಅತ್ಯುಚ್ಚ ನ್ಯಾಯಾಲಯದ ಸಮ್ಮತಿಯ ಮುದ್ರೆಯೂ ಇದೆ.

ಆದರೆ ಬಜರಂಗ ದಳದ ವಿರುದ್ಧ ಇಂಥ ಯಾವುದೇ ಪ್ರಕರಣಗಳಿಲ್ಲ. ದೇಶ ವಿರೋಧಿ ಕೃತ್ಯಗಳಲ್ಲಿ ಬಜರಂಗ ದಳ ಭಾಗಿಯಾದ ಉದಾಹರಣೆ ಇಲ್ಲ. ಹಾಗಿರುವಾಗ ಯಾವ ಆಧಾರದ ಮೇಲೆ ಬಜರಂಗ ದಳವನ್ನು ನಿಷೇಧಿಸುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ? ತನ್ನ ನಿಲುವನ್ನು ಸಾಬೀತುಪಡಿಸಲು ಬೇಕಾದ ಪೂರಕ ಸಾಕ್ಷ್ಯಗಳು ಕಾಂಗ್ರೆಸ್ ಬಳಿ ಇದೆಯೇ? ಯಾವುದಾದರೂ ಸಂಘಟಿತ ಅಪರಾಧ ಪ್ರಕರಣದಲ್ಲಿ, ಭಯೋತ್ಪಾದಕ ಕೃತ್ಯಗಳಲ್ಲಿ ಬಜರಂಗ ದಳ ಭಾಗಿಯಾದುದು ಖಚಿತವಾಗಿದೆಯೇ? ಇದ್ಯಾವುದೂ ಇಲ್ಲದೆ ನಿಷೇಧ ಮಾಡಲು ಹೇಗೆ ಸಾಧ್ಯ?

ಒಂದು ಸಂಘಟನೆಯನ್ನು ನಿಷೇಧಿಸಬೇಕಿದ್ದರೆ, ಅದು‌ ಕಾನೂನುಬಾಹಿರ ಚಟುವಟಿಗಳ ತಡೆ ಕಾಯಿದೆಯಡಿ (UAPA) ‘ಕಾನೂನುಬಾಹಿರ ಸಂಘಟನೆ’ ಎಂಬುದು ರುಜುವಾತಾಗಬೇಕು. ಇದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇರಬೇಕು. ನಿಷೇಧದ ಬಳಿಕ ಮೂವತ್ತು ದಿನಗಳ ಒಳಗೆ ಸಂಘಟನೆ ಮೇಲ್ಮನವಿ ಸಲ್ಲಿಸಿದರೆ, ಅದನ್ನು ನ್ಯಾಯಾಧೀಶರಿರುವ ಟ್ರಿಬ್ಯುನಲ್ ಕೂಡ ಸಮ್ಮತಿಸಬೇಕು. ನಮ್ಮಲ್ಲಿ ಹೀಗೆ ಹತ್ತಾರು ಭಯೋತ್ಪಾದಕ ಸಂಘಟನೆಗಳು ನಿಷೇಧಿಸಲ್ಪಟ್ಟಿವೆ. ಇವೆಲ್ಲವೂ ಮೇಲ್ನೋಟಕ್ಕೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಸ್ಪಷ್ಟವಿದೆ. ಆದರೆ ಬಜರಂಗ ದಳ ಹಾಗಲ್ಲ.

ಕಾಂಗ್ರೆಸ್‌ನ ಕೆಲವು ಮುಖಂಡರು ಆಗಾಗ ಆರ್‌ಎಸ್‌ಎಸ್ ನಿಷೇಧದ ಮಾತನ್ನು ಆಡುತ್ತಾರೆ. ಇದಕ್ಕೂ ಅವರ ಬಳಿ ಪೂರಕ ಸಾಕ್ಷಿಗಳಿಲ್ಲ. ಆರ್‌ಎಸ್‌ಎಸ್‌‌ನ ಸೇವಾ ಕಾರ್ಯಗಳು ಹಾಗೂ ಬದ್ಧತೆ ದೇಶದ ಮುಂದೆ ಸಾಬೀತಾಗಿರುವುದರಿಂದ, ಆ ಸಂಘಟನೆಯ ನಿಷೇಧದ ಮಾತು ಈಗ ತುಸು ಹಿನ್ನೆಲೆಗೆ ಸರಿದಿದೆ; ಅದರ ಬದಲು ಬಜರಂಗದಳದ ಪ್ರಸ್ತಾವ ಬಂದಂತಿದೆ. ಜತೆಗೆ ಪಿಎಫ್‌ಐಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಕೆಲವು ಮುಸ್ಲಿಮರಿಗೆ ಸಿಟ್ಟು ತಂದಿರಬಹುದು, ಬಜರಂಗ ದಳವನ್ನು ನಿಷೇಧಿಸುವ ಮಾತಾಡುವ ಮೂಲಕ ಅವರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿ ಕಾಂಗ್ರೆಸ್ ಈ ಮಾತಾಡಿರುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಉಚಿತ ಕೊಡುಗೆಗಳು ರಾಜ್ಯವನ್ನು ದಿವಾಳಿ ಮಾಡದಿರಲಿ

ಹೀಗೆ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ, ರಾಜಕೀಯ ಲಾಭಕ್ಕಾಗಿ ಬಜರಂಗ ದಳ ನಿಷೇಧ ಪ್ರಸ್ತಾಪ ಸರಿಯಲ್ಲ. ಕಾನೂನಿನ ಎದುರು ಎಲ್ಲರೂ, ಎಲ್ಲ ಸಂಘಟನೆಗಳೂ ಸಮಾನ. ಹಾಗೇ ಇಲ್ಲಿ ಎಲ್ಲರಿಗೂ ಸಂಘಟನೆಗಳನ್ನು ಕಟ್ಟಿಕೊಳ್ಳುವ, ತಮ್ಮ‌ ಚಿಂತನೆಗಳನ್ನು ಸಮಾಜವಿರೋಧಿಯಲ್ಲದ ರೀತಿಯಲ್ಲಿ ಹರಡುವ ಸ್ವಾತಂತ್ರ್ಯ ಸಂವಿಧಾನ ದತ್ತವಾಗಿಯೇ ಇದೆ. ಆದರೆ ಅದು ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರಕೂಡದು. ಕಾನೂನು ವಿರೋಧಿ ಕೃತ್ಯ ಮಾಡಿದರೆ ಬಜರಂಗ ದಳದ ಮೇಲೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಬೇಕು. ಆದರೆ ಸುಖಾಸುಮ್ಮನೆ ಬಜರಂಗದಳದಂಥ ಒಂದು ಸಂಘಟನೆಯನ್ನು ರಾಜಕೀಯ ಲಾಭಕ್ಕಾಗಿ ನಿಷೇಧಿಸಲು ಹೊರಡುವುದು ತಪ್ಪು. ಇಂಥ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿವೇಚನೆ ಬಳಸಲಿ.

Exit mobile version