ಬೆಂಗಳೂರು: ರಾಜಧಾನಿಯಲ್ಲಿ ಮಳೆ ಅವಾಂತರ (Bangalore Rain) ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಒಗ್ಗೂಡಿ ಮಳೆ ಹಾನಿ ನಿರ್ವಹಣೆ ಮಾಡಬೇಕು. ರಾಜಕಾಲುವೆ ಸರ್ಕಾರದ ಜಾಗ, ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನಲ್ಲಿ 133 ವರ್ಷದ ನಂತರ ಭಾರಿ ಮಳೆಯಾಗಿದೆ. 261 ವಿದ್ಯುತ್ ಕಂಬಗಳು ಉರುಳಿದ್ದು, ಮೂವರಿಗೆ ಗಾಯಗಳಾಗಿವೆ. ನೆಲಕ್ಕುರುಳಿದ 96 ಮರಗಳನ್ನು ತೆರವು ಮಾಡಿದ್ದು, ನಾನೇ ಖುದ್ದು ಪರಿಶೀಲನೆ ಮಾಡಿದ್ದೇನೆ. ಮಳೆ ಹಾನಿ ಬಗ್ಗೆ 695 ದೂರುಗಳು ಬಂದಿವೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಎಲ್ಲರೂ ಒಟ್ಟಾಗಿ ಮಳೆ ಹಾನಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ರಾಜಕಾಲುವೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಲು ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಹಳೆಯ ಕಟ್ಟಡಗಳು ಬೀಳದಂತೆ ನೋಡಿಕೊಳ್ಳಬೇಕು. ಶಿಥಿಲಾವಸ್ಥೆ ಇರುವ ಕಟ್ಟಡಗಳನ್ನು ತೆರವು ಮಾಡಬೇಕು. ಒಣಗಿರುವ ಮರಗಳನ್ನು ಸಹ ಗುರುತಿಸಿ ತೆಗೆದು ಹಾಕಬೇಕು. ಪ್ರತಿ ವಾರ್ಟ್‌ನಲ್ಲಿ ಮೋಟಾರ್ ಪಂಪ್ ಇಟ್ಟುಕೊಂಡು ನೀರು ತೆರವು ಮಾಡಬೇಕು. ಇದಕ್ಕೆ ದೊಡ್ಡ ಟೀಂ ಮಾಡಿ ಅಂತ ಹೇಳಿದ್ದೇನೆ. ವಿಶೇಷವಾಗಿ ಮಹದೇವಪುರ ವ್ಯಾಪ್ತಿಯಲ್ಲಿ ಸಮಸ್ಯೆ ಇದೆ. ಎನ್‌ಡಿಆರ್‌ಎಫ್ ಟೀಂ ಜತೆ ಟಚ್‌ನಲ್ಲಿ ಇರಬೇಕು. ಇನ್ನು ಮುಂದಿನ 24 ಗಂಟೆಗಳಲ್ಲಿ ದೊಡ್ಡ ಮಟ್ಟದ ಮಳೆ ಆಗುವ ಸಂಭವ ಇದೆ ಹೀಗಾಗಿ ಎಲ್ಲರೂ 24/7 ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಆಸ್ತಿ ಪಾಸ್ತಿ ಹಾನಿ, ಪ್ರಾಣಾಪಾಯ ಆಗಬಾರದು. ಮೆಟ್ರೋ ಹಳಿ ಮೇಲೆ ಮರ ಬಿದ್ದು ಹೋಗಿತ್ತು, ಈಗ ಸರಿಯಾಗಿದೆ. ಹೀಗಾಗಿ 1533 ಸಂಖ್ಯೆಗೆ ಕರೆ ಮಾಡಿ ಜನರು ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ | Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ
ಬಿಬಿಎಂಪಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಪೊರೇಟರ್ ಏನು ಕೆಲಸ ಮಾಡುತ್ತಾರೆ. ಜನ ಸೇವೆ ಅಂದಾಗ ಎಲ್ಲರೂ ಕೆಲಸ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೂ ಜನಪ್ರತಿನಿಧಿ ಬೇಕು. ಪಾರ್ಲಿಮೆಂಟ್ ಚುನಾವಣೆ ಮುಗಿಯಲಿ, ಎಲ್ಲ ರೆಡಿ ಮಾಡೋಣ, ಚುನಾವಣೆಗೆ ಶುಭ ಮುಹೂರ್ತ ಫಿಕ್ಸ್ ಮಾಡೋಣ ಎಂದು ಹೇಳಿದರು.
ಮಳೆ ಹಾನಿ ಬಗ್ಗೆ ಬೆಸ್ಕಾಂಗೆ ದೂರುಗಳ ಸುರಿಮಳೆ; 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ನೆನ್ನೆಯ ಮಳೆ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯು (Bangalore Rain) ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೀಗಾಗಿ ಬೆಸ್ಕಾಂ ಹೆಲ್ಪ್ ಲೈನ್ 1912ಗೆ ದೂರುಗಳ ಸುರಿಮಳೆಯೇ ಬಂದಿದ್ದು, ವಿದ್ಯುತ್ ಕಂಬಗಳು ಉರುಳಿರುವುದು, ಮರಗಳು ಬಿದ್ದಿರುವುದು, ವಿದ್ಯುತ್ ಕಡಿತ ಸೇರಿ ಹಲವು ಸಮಸ್ಯೆಗಳ ಬಗ್ಗೆ ಬರೋಬ್ಬರಿ 8745 ದೂರುಗಳು ದಾಖಲಾಗಿವೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಭಾನುವಾರ (ಜೂ.2) ಸುರಿದ ಮಳೆಯು (Heavy Rain) 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿರುವುದು ಕಂಡುಬಂದಿದೆ.
ಧಾರಕಾರ ಮಳೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ದೂರುಗಳು ಬಂದಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್‌ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ. ಭಾರಿ ಮಳೆಗೆ ಬೆಸ್ಕಾಂ ತತ್ತರಿಸಿದ್ದು, ತಡರಾತ್ರಿ ಸುರಿದ ಮಳೆಯಿಂದ ಬೆಸ್ಕಾಂಗೆ ಕೋಟ್ಯಂತರ ರೂ. ನಷ್ಟವಾಗಿದೆ.
ಬೆಂಗಳೂರಿನಲ್ಲಿ ಭಾನುವಾರ 111.2 ಮಿ.ಮೀ ಮಳೆ
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯು 133 ವರ್ಷಗಳ ದಾಖಲೆಯನ್ನು ಮುರಿದಿದೆ. ರಾಜಧಾನಿಯಲ್ಲಿ ಮೇ 2ರಂದು 111.2 ಮಿ.ಮೀ ಮಳೆ ಸುರಿದಿದ್ದು, ಜೂನ್ ತಿಂಗಳಲ್ಲಿ ಆದ ದಾಖಲೆಯ ಮಳೆ ಇದಾಗಿದೆ. 1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. ಆದರೆ, ನೆನ್ನೆ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ ಮುರಿದಿದೆ ಎಂದು ವಿಸ್ತಾರನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ
1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. 2013 ಜೂನ್ 1 ರಂದು 100 ಮಿ.ಮೀ ಮಳೆ ಹಾಗೂ 2009 ಜೂನ್ 11 ರಂದು 89.6 ಮಿ.ಮೀ ಮಳೆಯಾಗಿತ್ತು.