ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನಗಳನ್ನು ಕಾಡುವ ಟ್ರಾಫಿಕ್ (Bangalore Traffic) ಸಂಕಟ ಈಗಾಗಲೇ ಕುಖ್ಯಾತವಾಗಿದೆ. ಇದು ಇನ್ನು ಮುಂದಿನ ಹಲವು ವರ್ಷಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆಯಂತೆ. ಎಷ್ಟರ ಮಟ್ಟಿಗೆ ಎಂದರೆ, ಪ್ರತಿ ಸಿಗ್ನಲ್‌ನಲ್ಲಿಯೂ (Traffic Signal) 10-12 ನಿಮಿಷ ಕಾಯುವ ಸ್ಥಿತಿ ಶೀಘ್ರದಲ್ಲೇ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ!
ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆ (Traffic management) ಭಾರೀ ಕಷ್ಟಕರವಾಗಲಿದೆ ಎಂದು ಬಿಬಿಎಂಪಿ (BBMP), ಸಾರಿಗೆ ಇಲಾಖೆ (Transport Department), ಟ್ರಾಫಿಕ್ ಪೊಲೀಸ್ (Traffic Police), ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದೆ.
ಹಾಲಿ ಬೆಂಗಳೂರಿನ ರಸ್ತೆಗಳು ಕೇವಲ 50 ಲಕ್ಷ ವಾಹನಗಳ ಓಡಾಟಕ್ಕೆ ಯೋಗ್ಯವಾಗಿವೆ. ಆದರೆ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಈ ಮಿತಿಯನ್ನು ಎಂದೋ ಮೀರಿದೆ. ಬೆಂಗಳೂರಿನ ರಸ್ತೆಗೆ ಪ್ರತಿ ದಿನ 2000 ಹೊಸ ವಾಹನಗಳು ಇಳಿಯುತ್ತಿವೆ. ಸದ್ಯ ರಾಜಧಾನಿಯಲ್ಲಿ ಸುಮಾರು 1.18 ಕೋಟಿ ವಾಹನಗಳು ಇವೆ.
ಮುಂದಿನ ನಾಲ್ಕು ತಿಂಗಳಲ್ಲಿ 2 ಲಕ್ಷ ಹೊಸ ವಾಹನಗಳು ನಗರಕ್ಕೆ ಸೇರ್ಪಡೆಯಾಗಲಿವೆ. 2024ರ ಅಂತ್ಯಕ್ಕೆ 1 ಕೋಟಿ 21 ಲಕ್ಷ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗಿರಲಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೊಸದಾಗಿ ನೋಂದಣಿಯಾಗಿ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ನಿತ್ಯ ಸುಮಾರು 1000. ನಿತ್ಯ ಹೊರ ರಾಜ್ಯದಿಂದ, ಜಿಲ್ಲೆಯಿಂದ ಬೆಂಗಳೂರಿಗೆ ಬಂದು ಹೋಗುವ ವಾಹನಗಳ ಸಂಖ್ಯೆ 1 ಲಕ್ಷ ಮೀರಬಹುದು.
ಇದೆಲ್ಲ ಲೆಕ್ಕಾಚಾರ ಗಮನಿಸಿದರೆ 2025ರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರಲಿದೆ. ಬೆಂಗಳೂರಿನ 162 ಜಂಕ್ಷನ್‌ಗಳಲ್ಲಿ ಕನಿಷ್ಠ 10-11 ನಿಮಿಷ ಕಾಯುವ ಸಂಕಷ್ಟದ ಸ್ಥಿತಿ ತಲೆದೋರಲಿದೆ. ಕೆ.ಆರ್ ಸರ್ಕಲ್, ಸಿಲ್ಕ್ ಬೋರ್ಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಚಾಲುಕ್ಯ, ಎಲೆಕ್ಟ್ರಾನಿಕ್ ಸಿಟಿ, ಟೌನ್‌ಹಾಲ್ ಸೇರಿದಂತೆ 162 ಜಂಕ್ಷನ್‌ಗಳು ಈ ಕಂಟಕ ಎದುರಿಸಲಿವೆ. ಒಂದು ಜಂಕ್ಷನ್ ದಾಟಲು ಕನಿಷ್ಠ 10 ನಿಮಿಷವಾದರೂ ತೆಗೆದುಕೊಳ್ಳಬಹುದು. ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲಿ ಈಗಾಗಲೇ ಐದರಿಂದ ಎಂಟು ನಿಮಿಷ ಕಾಯಬೇಕಾಗಿ ಬರುತ್ತಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯದ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆದರೆ ರಸ್ತೆ ಅಗಲೀಕರಣದ ಮೂಲಕ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡೋಣ ಅಂದರೆ, ಅದಕ್ಕೆ ಅವಕಾಶವೇ ಇಲ್ಲದ ಸ್ಥಿತಿ ಇದೆ. ಬಿಬಿಎಂಪಿಯಿಂದ ರಸ್ತೆ ಅಗಲೀಕರಣದ ಬಗ್ಗೆ ಸರ್ವೆ ನಡೆಯುತ್ತಿದೆ. ಆದರೆ ಇದು ದೊಡ್ಡ ಮಟ್ಟದಲ್ಲಿ ಕಾನೂನಾತ್ಮಕ ಸಮರಕ್ಕೆ ಹಾದಿ ಮಾಡಿಕೊಡಲಿದೆ. ಇದಕ್ಕಾಗಿ ಸರ್ಕಾರ ಸುರಂಗ ಮಾರ್ಗ, ಫ್ಲೈಓವರ್, ಅಂಡರ್‌ಪಾಸ್, ಮ್ಯಾಜಿಕ್ ಬಾಕ್ಸ್ ಇತ್ಯಾದಿಗಳ ಮೊರೆ ಹೋಗುತ್ತಿದೆ.
ಇದರೊಂದಿಗೆ ಪಾರ್ಕಿಂಗ್ ಕೂಡ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಈಗಾಗಲೇ ಇಕ್ಕಟ್ಟಿನ ಪ್ರಶ್ನೆಯಾಗಿದೆ. ಸಾಕಷ್ಟು ಸಾರ್ವಜನಿಕ ಪಾರ್ಕಿಂಗ್ ತಾಣಗಳಿಲ್ಲ. ಮನೆಗಳನ್ನು ಕಟ್ಟುತ್ತಿರುವವರು ಕೂಡ ಮನೆಯೊಳಗೆ ಪಾರ್ಕಿಂಗ್ ಸ್ಪೇಸ್ ಬಿಡುತ್ತಿಲ್ಲ. ಹೀಗಾಗಿ ರಸ್ತೆಯ ಪಕ್ಕದಲ್ಲೇ ವಾಹನಗಳನ್ನು ಪಾರ್ಕ್ ಮಾಡುತ್ತಿರುವುದರಿಂದ ರಸ್ತೆಗಳು ಕೂಡ ವಾಹನಗಳ ಓಡಾಟಕ್ಕೆ ಇಕ್ಕಟ್ಟಾಗುತ್ತಿವೆ. ಬಿಬಿಎಂಪಿ ಇದನ್ನು ಬಗೆಹರಿಸಲು ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದರೂ ಅದು ಫಲ ನೀಡಿಲ್ಲ.
ಇದನ್ನೂ ಓದಿ: Bangalore Traffic: ಬೆಂಗಳೂರಿಗೆ ಪ್ರತಿ ತಿಂಗಳು 50 ಸಾವಿರ ಹೊಸ ವಾಹನ ಸೇರ್ಪಡೆ; ಟ್ರಾಫಿಕ್ ನರಕ ಆಗೋದು ಗ್ಯಾರಂಟಿ