ಗದಗ: ಕುರಿ ಮಾಂಸದ (Mutton) ಹೆಸರಿನಲ್ಲಿ ಕಳೆದ 15 ವರ್ಷಗಳಿಂದ ಅಬ್ದುಲ್ ರಜಾಕ್ ಬೆಂಗಳೂರಿಗರಿಗೆ ನಾಯಿ ಮಾಂಸ (Dog meat) ತಿನ್ನಿಸುತ್ತಿದ್ದಾನೆ ಎಂದು ಶ್ರೀರಾಮಸೇನೆ (Sri Rama Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಕಿಡಿ ಕಾರಿದ್ದಾರೆ. ಗದಗದಲ್ಲಿ (Gadag news) ಅವರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಶಂಕಿತ ನಾಯಿ ಮಾಂಸ ಮಾರಾಟ ಪ್ರಕರಣದ ಬಗ್ಗೆ ಮಾತನಾಡಿದ ಅವರು, “ಹಿಂದೂಗಳೇ ರುಚಿ-ರುಚಿಯಾದ ಹಂದಿ, ನಾಯಿ, ನರಿ, ಬೆಕ್ಕಿನ ಮಾಂಸ ತಿನ್ನಿರಿ” ಎಂದು ಹಿಂದೂಗಳ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ʼʼರೈಲ್ವೆ ಸ್ಟೇಷನ್‌ನಲ್ಲಿ 90 ಮಾಂಸದ ಬಾಕ್ಸ್‌ಗಳು ಸಿಕ್ಕಿವೆ. ಅವು ನಾಯಿ ಮಾಂಸ ಇರುವ ಬಾಕ್ಸ್‌ಗಳು. ಕಳೆದ 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿಯ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ? ಅಬ್ದುಲ್ ರಜಾಕ್ ದೇಶದ್ರೋಹಿ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆʼʼ ಎಂದು ಮುತಾಲಿಕ್ ಹೇಳಿದ್ದಾರೆ.
“ಅಬ್ದುಲ್ ರಜಾಕ್ ಬೆನ್ನಿಗೆ ಸಚಿವ ಜಮೀರ್ ಅಹ್ಮದ್ ನಿಂತಿದ್ದಾರೆ. ಜಮೀರ್ ಅಹ್ಮದ್ ಉತ್ತರ ಕೊಡಬೇಕು. ಹಿಂದೂಗಳು ಈಗಲಾದರೂ ಎಚ್ಚರಗೊಳ್ಳಬೇಕು. ನಾಯಿ ಮಾಂಸದ ಬಾಕ್ಸ್ ಮೇಲೆ ಮೀನಿನ ಮಾಂಸ ಎಂದು ಬರೆದು ಮೋಸ ಮಾಡುತ್ತಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದಿದ್ದಾರೆ.
ರಾಮನಗರದ ಹೆಸರು ಬದಲಾವಣೆ
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮಾಡಿದ್ದಕ್ಕೆ ನಮ್ಮ ವಿರೋಧ ಇದೆ. ರಾಮನಗರ ಹೆಸರು ಇರುವುದಕ್ಕೆ ನಿಮಗೆ ತೊಂದರೆ ಏನು? ರಾಮನಗರ ಜಿಲ್ಲೆಯ ಹೆಸರು ಪರಿವರ್ತನೆ ಮಾಡಿದ್ದು ಹಿಂದೂ ದ್ರೋಹಿ ಕೆಲಸ. ಕಾಂಗ್ರೆಸ್ ಮೊದಲಿನಿಂದಲೂ ಇದೇ ಕೆಲಸ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಬಾಬರ್‌ನನ್ನು ಕೂಡ ಬೆಂಬಲಿಸಿದೆ ಎಂದು ಅವರು ಟೀಕಿಸಿದರು.
ರಾಮನಗರವನ್ನು ಬದಲಾವಣೆ ಮಾಡುವುದಾದರೆ ಮಾಡಲಿ. ಹಾಗೇ ಬೆಂಗಳೂರಿನಲ್ಲಿ 32 ಕಡೆಗಳಲ್ಲಿ ಬ್ರಿಟೀಷರ ಹೆಸರು ಇವೆ. ಮೊದಲು ಅವುಗಳನ್ನು ಬದಲಾವಣೆ ಮಾಡಲಿ. ನಿಮಗೆ ನಿಜವಾಗಲೂ ಸ್ವಾಭಿಮಾನ ಇದ್ದರೆ ಬ್ರಿಟಿಷರ ಹೆಸರು ಬದಲಾಯಿಸಿ. ರಾಮನಗರಕ್ಕೆ ತನ್ನದೇ ಆದ ಇತಿಹಾಸ ಇದೆ. ನಾಳೆ ಕಲಬುರಗಿಯಲ್ಲಿ ಇದರ ಬಗ್ಗೆ ಸಭೆ ನಡೆಸಿ ಇಡೀ ರಾಜ್ಯಾದ್ಯಂತ ಹೋರಾಟದ ಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದರು.
ಅಬ್ದುಲ್ ರಜಾಕ್ ಹೇಳಿಕೆ
ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೀತಿದೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ. ಪುನೀತ್ ಕೆರೆಹಳ್ಳಿ ಅದನ್ನು ನಾಯಿ ಅಂತಿದ್ದಾರೆ. ಹಣ ವಸೂಲಿ ಮಾಡೋಕೆ ಈ ರೀತಿ ಮಾಡ್ತಾ ಇದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಈ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡುತ್ತೇವೆ ಎಂದು ಮಾಂಸ ಸಾಗಾಟಗಾರ ಅಬ್ದುಲ್ ರಜಾಕ್ ಹೇಳಿದ್ದಾರೆ.
ಇದನ್ನೂ ಓದಿ: Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!