Site icon Vistara News

Bangladesh Protest : ಬಾಂಗ್ಲಾದೇಶ ಬಿಕ್ಕಟ್ಟು; ಸರ್ವಪಕ್ಷ ಸಭೆ ಕರೆದ ವಿದೇಶಾಂಗ ಸಚಿವ ಜೈಶಂಕರ್

Bangladesh Protest

ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಚರ್ಚಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಸರ್ವಪಕ್ಷ ಕರೆದು ಮಾತನಾಡಿದರು ಜೈಶಂಕರ್ ಅವರು ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ ಅವರೂ ಭಾಗಿಯಾಗಿದ್ದರು. ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧದ ಪ್ರತಿಭಟನೆ ಹಿಂಸಾಚಾರದ ರೂಪ ತಾಳಿದ ಬಳಿಕ, ಅವರು ನಿನ್ನೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದರು. ಅವರು ಭಾರತದಲ್ಲಿ ಬಂದು ಇಳಿದಿದ್ದಾರೆ.

ಹಸೀನಾ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಜಮಾನ್ ಅವರು “ಮಧ್ಯಂತರ ಸರ್ಕಾರವನ್ನು” ರಚಿಸಲಿದ್ದೇವೆ ಎಂದು ಹೇಳಿದ್ದಾರೆ. ಪ್ರತಿಭಟನೆಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಶೇಖ್ ಹಸೀನಾ ಅವರು ದೆಹಲಿಯಿಂದ 30 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿರುವ ಹಿಂಡನ್ ವಾಯುಪಡೆಯ ನೆಲೆಗೆ ಹಸೀನಾ ನಿನ್ನೆ ಸಂಜೆ ಬಂದಿಳಿದಿದ್ದರು. ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಾಗತಿಸಿದ್ದರು.

ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಘಟನೆಯಲ್ಲಿ ಈವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿಯಾಗುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ಹಿಂಡನ್ ವಾಯುನೆಲೆಗೆ ಬಂದಿಳಿದ ಹಸೀನಾ

ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಲಂಡನ್​​ಗೆ ಹೋಗುವುದಾಗಿ ಹೇಳಿದ್ದಾರೆ. ಈ ಮಧ್ಯೆ ಅವರು ಗಾಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ. ಜೈಶಂಕರ್ ಅವರು ನೆರೆಯ ದೇಶದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಮೋದಿಗೆ ವಿವರಿಸಿದ್ದಾರೆ. ಆದರೆ ಸಭೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ..

ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ; ಮತ್ತೊಂದು ಕಿಡಿ ಹೊತ್ತಿಸಿದ ಕಂಗನಾ ರಣಾವತ್

ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿದ್ದು, ಪ್ರಧಾನಿ ಶೇಖ್‌ ಹಸೀನಾ (Sheik Hasina) ಅವರು ರಾಜೀನಾಮೆ ನೀಡಿ ಪ್ರಾಣಭಯದಿಂದ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿದ್ದಾರೆ (Bangladesh Protest). ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್​ (Kangana Ranaut), ಯಾವ ಮುಸ್ಲಿಂ ರಾಷ್ಟ್ರವೂ ಸುರಕ್ಷಿತವಲ್ಲ ಎಂದಿದ್ದಾರೆ.

ಇದನ್ನೂ ಓದಿ: Bangladesh Protest: ರಫೇಲ್ ಯುದ್ಧ ವಿಮಾನಗಳ ಹಾರಾಟ, ರಾಡಾರ್‌ ಮೂಲಕ ಮೇಲ್ವಿಚಾರಣೆ; ಶೇಖ್‌ ಹಸೀನಾ ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳಿವು

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಂಗನಾ ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. “ಭಾರತವು ಸುತ್ತಲಿನ ಎಲ್ಲ ಇಸ್ಲಾಮಿಕ್ ಪ್ರಜಾಪ್ರಭುತ್ವ ದೇಶಗಳ ಮೂಲ ತಾಯ್ನಾಡು. ಬಾಂಗ್ಲಾದೇಶದ ಪ್ರಧಾನಿ ಭಾರತದಲ್ಲಿ ಸುರಕ್ಷಿತ ಎಂದು ಭಾವಿಸಿ ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಭಾರತದಲ್ಲೇ ವಾಸಿಸುವವರು ಹಿಂದೂ ರಾಷ್ಟ್ರ ಯಾಕೆ? ಏಕೆ ರಾಮರಾಜ್ಯ? ಎಂದು ಕೇಳುತ್ತಲೇ ಇರುತ್ತಾರೆ. ಈ ಪ್ರಶ್ನೆಗೆ ಈಗ ಸೂಕ್ತ ಉತ್ತರ ಸಿಕ್ಕಿದೆʼʼ ಎಂದು ಅವರು ಹೇಳಿದ್ದಾರೆ.

ಮುಂದುವರಿದು, “ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ, ಸ್ವತಃ ಮುಸ್ಲಿಮರು ಕೂಡ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬ್ರಿಟನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ದುರದೃಷ್ಟಕರ. ರಾಮರಾಜ್ಯದಲ್ಲಿ ಬದುಕುತ್ತಿರುವುದು ನಮ್ಮ ಅದೃಷ್ಟ. ಜೈ ಶ್ರೀ ರಾಮ್ʼʼ ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ವಿರುದ್ಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Exit mobile version