ಹೊಸದಿಲ್ಲಿ/ಢಾಕಾ: ದೇಶಾದ್ಯಂತ ಹಿಂಸಾಚಾರ, ಘರ್ಷಣೆಗಳು (Bangladesh Protests) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina) ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು (Dhaka) ತೊರೆದಿದ್ದಾರೆ. ಪ್ರತಿಭಟನಾಕಾರರು ಪಿಎಂ ನಿವಾಸದತ್ತ ನುಗ್ಗುತ್ತಿದ್ದಾರೆ ಹಾಗೂ ಬೀದಿಗಳಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಪ್ರಧಾನಿಯ ಅರಮನೆಗೇ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಹೆಚ್ಚು ಸುರಕ್ಷಿತ ಪ್ರದೇಶದತ್ತ ಹಸೀನಾ ತೆರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಅವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ.
ಶೇಖ್ ಹಸೀನಾ ಮತ್ತು ಅವರ ಸಹೋದರಿ ಪ್ರಧಾನಿಗಳ ಅಧಿಕೃತ ನಿವಾಸವನ್ನು ತೊರೆದು ಸುರಕ್ಷಿತ ಸ್ಥಳದತ್ತ ತೆರಳಿದ್ದಾರೆ. ಅವರು ಅಧಿಕೃತ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಶೇಖ್ ಹಸೀನಾ ರಾಜೀನಾಮೆ ನೀಡಿದರು ಎಂದು ಹೇಳಲಾಗಿದೆ.
ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಯನ್ನು ನುಗ್ಗಲು ಯತ್ನಿಸಿದರು. ಢಾಕಾದಲ್ಲಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸೈನಿಕರು ಮತ್ತು ಪೊಲೀಸರು ಪ್ರಧಾನಿ ಕಚೇರಿ ಹಾಗೂ ನಿವಾಸಕ್ಕೆ ಮುಳ್ಳುತಂತಿಯ ಬೇಲಿಗಳ ಮೂಲಕ ಬಂದೋಬಸ್ತ್ ಮಾಡಿದರಾದರೂ, ಅಪಾರ ಜನಸಮೂಹದ ಮುಂದೆ ಅವರು ನಿಸ್ಸಹಾಯಕರಾದರು. ಬೀದಿಗಳಲ್ಲಿ ಹರಿದುಬಂದ ಪ್ರತಿಭಟನಾಕಾರರ ಪ್ರವಾಹ ಅಡೆತಡೆಗಳನ್ನು ಕಿತ್ತುಹಾಕಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ ಅಂದಾಜು 400,000 ಪ್ರತಿಭಟನಾಕಾರರು ಬೀದಿಗಳಲ್ಲಿದ್ದಾರೆ.
ನಿನ್ನೆ ನಡೆದ ಭೀಕರ ಘರ್ಷಣೆಗಳಲ್ಲಿ 98 ಜನರು ಸಾವನ್ನಪ್ಪಿದ್ದರು. ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದುವರೆಗೆ ಸಾವಿನ ಸಂಖ್ಯೆ 300ನ್ನೂ ದಾಟಿ ಏರುತ್ತಿದೆ.
ರಾಜೀನಾಮೆಗೆ ಒತ್ತಾಯಿಸಿ ಹಿಂಸೆ
ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ (Bangladesh Protests) ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, ಮೃತರ ಸಂಖ್ಯೆ 98ಕ್ಕೆ ತಲುಪಿದೆ. ಈ ಪೈಕಿ 14 ಮಂದಿ ಪೊಲೀಸರು ಅಸುನೀಗಿದ್ದು, ಬಾಂಗ್ಲಾದೇಶಕ್ಕೆ ತೆರಳದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಭಾನುವಾರ (ಆಗಸ್ಟ್ 4) ನಡೆದ ಭೀಕರ ಘರ್ಷಣೆಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಜುಲೈಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮೃತರ ಸಂಖ್ಯೆ ಒಟ್ಟು 300ಕ್ಕೆ ಏರಿದೆ. ಬಾಂಗ್ಲಾದಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ಶೇಖ್ ಹಸೀನಾ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಭಾನುವಾರ ಸಾವಿರಾರು ಪ್ರತಿಭಟನಾಕಾರರು ದೇಶದ ಹಲವಾರು ಭಾಗಗಳಲ್ಲಿ ಜಮಾಯಿಸಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಈಶಾನ್ಯ ಪಟ್ಟಣ ಎನಾಯೆತ್ಪುರದ ಠಾಣೆಗೂ ಮುತ್ತಿಗೆ ಹಾಕಿದರು. ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಸಾರ್ವತ್ರಿಕ ರಜಾದಿನವನ್ನು ಘೋಷಿಸಲಾಗಿದೆ.
ಈ ಮಧ್ಯೆ ಭಾರತ ಬಾಂಗ್ಲಾದೇಶದಲ್ಲಿರುವ ತನ್ನ ಎಲ್ಲ ಪ್ರಜೆಗಳಿಗೆ ತೀವ್ರ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ತಿಳಿಸಿದೆ. ʼʼಸಿಲ್ಹೆಟ್‌ನ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಕೋರಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಸಂಖ್ಯೆ +88-01313076402 ಅನ್ನು ಸಂಪರ್ಕಿಸಿ” ಎಂದು ಸಹಾಯಕ ಹೈಕಮಿಷನ್ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಇದನ್ನೂ ಓದಿ: Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 91 ಜನ ಸಾವು