Site icon Vistara News

Lokayukta Raid: ಬಿಜೆಪಿ ಶಾಸಕನ ಪುತ್ರ ಲೋಕಾಯುಕ್ತ ಬಲೆಗೆ, ಬೊಮ್ಮಾಯಿಗೆ ಟೆನ್ಶನ್‌, ಎಡಿಜಿಪಿಯಿಂದ ಮಾಹಿತಿ ಪಡೆದ ಸಿಎಂ

Basavaraj Bommai

Basavaraj Bommai

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಅವರು ಲೋಕಾಯುಕ್ತ ಬಲೆಗೆ ಬಿದ್ದಿರುವ (Lokayukta Raid) ಪ್ರಕರಣವೀಗ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ 40 ಪರ್ಸೆಂಟ್‌ ಸರ್ಕಾರ ಎಂಬ ಬಿರುದು ಬಿಜೆಪಿ ಸರ್ಕಾರವನ್ನು ಬಾಧಿಸುತ್ತಿದೆ. ಇದರ ಬೆನ್ನಲ್ಲೇ, ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ ಹಾಂಡ್ ಆಗಿ ಸಿಕ್ಕಿಬಿದ್ದಿರುವುದು ಮುಜುಗರ ತಂದಿದೆ. ಹಾಗಾಗಿಯೇ, ಬಸವರಾಜ ಬೊಮ್ಮಾಯಿ ಅವರು ಗುಪ್ತಚರ ಇಲಾಖೆಗಳ ಅಧಿಕಾರಿಗಳಿಂದ ಲೋಕಾಯುಕ್ತ ದಾಳಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಪ್ರವಾಸ ಮುಗಿಸಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಆರ್.ಟಿ. ನಗರದ ನಿವಾಸಕ್ಕೆ ಆಗಮಿಸುತ್ತಲೇ, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್‌ ಅವರು ಬೊಮ್ಮಾಯಿ ನಿವಾಸಕ್ಕೆ ತೆರಳಿದ್ದಾರೆ. ಇದೇ ವೇಳೆ, ಲೋಕಾಯುಕ್ತ ಅಧಿಕಾರಿಗಳ ದಾಳಿ, ಅಲ್ಲಿ ಸಿಕ್ಕಿರುವ ಹಣ, ಮುಂದಿನ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮಿತ್‌ ಶಾ ಭೇಟಿ ಹಿನ್ನೆಲೆ ಸೂದ್‌ ಜತೆ ಚರ್ಚೆ

ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಒದಗಿಸುವುದು ಸೇರಿ ಹಲವು ವಿಚಾರಗಳ ಕುರಿತು ಬಸವರಾಜ ಬೊಮ್ಮಾಯಿ ಅವರು ಡಿಜಿಪಿ ಪ್ರವೀಣ್‌ ಸೂದ್‌ ಅವರೊಂದಿಗೂ ತಮ್ಮ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ.

ಪ್ರಶಾಂತ್‌ ಸೇರಿ ಒಟ್ಟು ಐವರ ಬಂಧನ

ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಮಾತ್ರವಲ್ಲ, ಒಟ್ಟು ಐದು ಜನರನ್ನು ಬಂಧಿಸಿದ್ದಾರೆ. ಪ್ರಶಾಂತ್‌, ಅವರ ಅಕೌಂಟೆಂಟ್‌ ಹಾಗೂ ಟೆಂಡರ್‌ ಪಡೆಯಲು ಲಕ್ಷಾಂತರ ರೂ. ಜತೆ ಬಂದಿದ್ದ ಮೂರು ಕಂಪನಿಯವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಮೂವರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ ಎಂದು ತಿಳಿದುಬಂದಿದೆ. ಮಾಡಾಳ್‌ ವಿರೂಪಾಕ್ಷಪ್ಪ ಒಡೆತನದ ಕೆಎಂವಿ ಮ್ಯಾನ್ಶನ್‌ನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lokayukta raid :‌ ಬಿಜೆಪಿ ನಾಯಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ, ಕಾಂಗ್ರೆಸ್‌ ಕೈಗೆ ಮತ್ತೊಂದು ಕಮಿಷನ್‌ ಅಸ್ತ್ರ

Exit mobile version