ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಬ್ರಿಟನ್ ಮೂಲದ ಸುದ್ದಿ ಸಂಸ್ಥೆ ಬಿಬಿಸಿ, ಒಂದು ಸಾಕ್ಷ್ಯಚಿತ್ರ ಸರಣಿಯನ್ನು ಸಿದ್ಧಪಡಿಸಿದೆ. 20 ವರ್ಷಗಳ ಹಿಂದಿನ ಗೋಧ್ರಾ ಘಟನೆ, ಅದರ ನಂತರದ ಗುಜರಾತ್ ಹತ್ಯಾಕಾಂಡವನ್ನಿಟ್ಟುಕೊಂಡು ಈ ಡಾಕ್ಯುಮೆಂಟರಿ ಸಿದ್ಧಪಡಿಸಲಾಗಿದೆ. ಮೋದಿಯವರನ್ನು ಗುಜರಾತ್ ಗಲಭೆಯ, ಮುಸ್ಲಿಂ ಹತ್ಯಾಕಾಂಡದ ರೂವಾರಿ ಎಂದು ಬಿಬಿಸಿ ಏಕಪಕ್ಷೀಯವಾಗಿ ತಾನೇ ತೀರ್ಮಾನಿಸಿ, ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಬಿಬಿಸಿ ಡಾಕ್ಯುಮೆಂಟರಿ ಕುರಿತು ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಇದು ದುರುದ್ದೇಶಪೂರಿತ ಸಾಕ್ಷ್ಯಚಿತ್ರ ಎಂದು ತಿರುಗೇಟು ನೀಡಿದೆ. ಯುಟ್ಯೂಬ್‌ನಿಂದ ಡಾಕ್ಯುಮೆಂಟರಿಯ ಎಪಿಸೋಡನ್ನು ಡಿಲೀಟ್ ಮಾಡಲಾಗಿದೆ. ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್, ಇನ್ನೊಬ್ಬ ಸಂಸದ ಲಾರ್ಡ್ ರಾಮಿ ರೇಂಜರ್ ಅವರು ಬಿಬಿಸಿಯನ್ನು ಖಂಡಿಸಿ, ಮೋದಿಯವರನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು, ಭಾರತದಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ರಾ ಮಾಜಿ ಮುಖ್ಯಸ್ಥರು, ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳು ಸೇರಿದಂತೆ 300 ಗಣ್ಯರು ಮೋದಿ ವಿರುದ್ಧದ ಬಿಬಿಸಿ ನಡೆಯನ್ನು ಖಂಡಿಸಿ ಬಹಿರಂಗ ಪತ್ರ ಬರೆದಿದ್ದಾರೆ.
ಗುಜರಾತ್ ಗಲಭೆ ನಡೆದು 20 ವರ್ಷಗಳೇ ಕಳೆದಿವೆ. ಈ ಬಗ್ಗೆ ಹಲವು ವಿಚಾರಣಾ ಆಯೋಗಗಳನ್ನು ರಚಿಸಿ, ಅವು ಅಂತಿಮ ವರದಿಗಳನ್ನೂ ನೀಡಿ, ಮೋದಿಯವರಿಗೆ ಕ್ಲೀನ್ ಚಿಟ್ ನೀಡಿವೆ. ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳು ಕೂಡ ವಿಚಾರಣೆ ನಡೆಸಿ ಮೋದಿಯವರು ನಿರ್ದೋಷಿ ಎಂಬ ತೀರ್ಪು ನೀಡಿವೆ. ಹೀಗಾಗಿ ಇದು ಮುಗಿದುಹೋದ ಅಧ್ಯಾಯ. ಗುಜರಾತ್ ಗಲಭೆ ನಡೆದ ಹೊಸದರಲ್ಲಿ, ಅದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದೇ ಇದ್ದಾಗ ಅಮೆರಿಕ ಮೋದಿಯವರಿಗೆ ವೀಸಾ ನಿರಾಕರಿಸಿತ್ತು. ಆದರೆ ನಂತರ ಅದೇ ದೇಶ ರತ್ನಗಂಬಳಿ ಹಾಸಿ ಅವರನ್ನು ಸ್ವಾಗತಿಸಿತ್ತು. ʼಅಮೆರಿಕದ ಆಪ್ತ ಮಿತ್ರʼ ಎಂದು ಮೋದಿಯವರನ್ನು ಅಮೆರಿಕದ ಅಧ್ಯಕ್ಷರು ಕೊಂಡಾಡಿದ್ದರು. ಪಾಕಿಸ್ತಾನ- ಚೀನಾದಂಥ ವೈರಿ ದೇಶಗಳು ಆಗಾಗ ಈ ವಿಚಾರ ಕೆದಕಿದರೂ, ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಅರಬ್ ದೇಶಗಳು, ಮೋದಿಯವರನ್ನು ಹಾರ್ದಿಕವಾಗಿ ಅಪ್ಪಿಕೊಂಡಿವೆ. ವಾಸ್ತವಿಕವಾಗಿ, ಮೋದಿಯವರ ಆಡಳಿತದಲ್ಲಿ ಇಂಡೊನೇಷ್ಯಾ, ಮಲೇಷ್ಯಾ, ಬಾಂಗ್ಲಾ ಮುಂತಾದ ಮುಸ್ಲಿಂ ದೇಶಗಳು ಭಾರತಕ್ಕೆ ಇನ್ನಷ್ಟು ನಿಕಟವಾಗಿವೆ ಎಂದೇ ಹೇಳಬೇಕು. ಇವರ್ಯಾರಿಗೂ ಕಾಡದ ʼಹತ್ಯಾಕಾಂಡದ ಭೂತʼ ಬಿಬಿಸಿಯನ್ನು ಕಾಡುತ್ತಿರುವುದೇಕೆ?
ಬಿಬಿಸಿ ಡಾಕ್ಯುಮೆಂಟರಿ ಬಂದಿರುವ ಸಮಯವೇ ಸಂಶಯಾಸ್ಪದವಾಗಿದೆ. ಭಾರತ ಈಗ ಜಿ 20 ಶೃಂಗ ಸಭೆಯ ನೇತೃತ್ವ ವಹಿಸಿದೆ. ಅಮೆರಿಕ, ರಷ್ಯಾ, ಇಂಗ್ಲೆಂಡ್‌ಗಳಂಥ ಮುಂದುವರಿದ ದೇಶಗಳು ಭಾರತದ ನಾಯಕತ್ವವನ್ನು ಹಾರ್ದಿಕವಾಗಿ ಅಂಗೀಕರಿಸಿವೆ. ಈ ಸಂದರ್ಭದಲ್ಲೇ ಇಂಥದೊಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಕುಗ್ಗಿಸುವ ಹುನ್ನಾರವೇ ಎಂಬ ಅನುಮಾನ ಮೂಡಿಸದೇ ಇರಲಾರದು. ಹಾಗೆಯೇ ಭಾರತದಲ್ಲಿ ಹಲವು ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳು ಈ ವರ್ಷದಲ್ಲಿ ಹಾಗೂ ಲೋಕಸಭೆ ಚುನಾವಣೆ ಮುಂದಿನ ವರ್ಷ ಬರಲಿವೆ. ಈ ಹಿನ್ನೆಲೆಯಲ್ಲಿ ಮೋದಿ ಅವರ ವರ್ಚಸ್ಸನ್ನು ಕುಗ್ಗಿಸುವ ಸಂಚು ಕೂಡ ಇದರ ಹಿನ್ನೆಲೆಯಲ್ಲಿ ಇದ್ದರೆ ಆಶ್ಚರ್ಯವೇನಿಲ್ಲ.
ಈ ಬಗ್ಗೆ ಅಲಿಗಢ ಮುಸ್ಲಿಂ ವಿವಿ ಉಪ ಕುಲಪತಿ ಪ್ರೊ. ತಾರೀಖ್ ಮನ್ಸೂರ್ ನೀಡಿರುವ ಪ್ರತಿಕ್ರಿಯೆ ಸಮಯೋಚಿತವಾಗಿದೆ. ಭಾರತದ ಮುಸ್ಲಿಮರು ಭೂತಕಾಲದಲ್ಲಿ ಬದುಕುತ್ತಿಲ್ಲ. ಅವರು ಮುಂದೆ ಸಾಗಿದ್ದಾರೆ. ಭರವಸೆ, ನಿರೀಕ್ಷೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಭಾರತೀಯ ಮುಸ್ಲಿಮರು ಇಲ್ಲಿನ ಸಂವಿಧಾನ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಸಂಪೂರ್ಣ ಭರವಸೆಯಿಟ್ಟಿದ್ದಾರೆ. ಬಿಬಿಸಿಯಂಥ ಪಾಶ್ಚಾತ್ಯ ಸಂಸ್ಥೆಗಳು ಮುಸ್ಲಿಮರನ್ನು ತಾವು ರಕ್ಷಿಸಬೇಕು ಎಂಬ ಪೊಳ್ಳು ಅನಿಸಿಕೆಯಿಂದ ಹೊರಬರಬೇಕು ಎಂದು ಅವರು ಹೇಳಿರುವುದು ಮಾರ್ಮಿಕವಾಗಿದೆ. ಇಂಥ ಅಭಿಪ್ರಾಯವನ್ನು ಈ ದೇಶದ ಹೆಚ್ಚಿನ ಮುಸ್ಲಿಮರಲ್ಲಿ ನಾವು ಗಮನಿಸಬಹುದು. ಹೀಗಾಗಿ ಬಿಬಿಸಿ ಸಾಕ್ಷ್ಯಚಿತ್ರ ಒಂದು ಪೊಳ್ಳು ಕಥನ ಎನ್ನುವುದು ಸ್ಪಷ್ಟವಾಗುತ್ತದೆ.
ಒಂದು ಮಾಧ್ಯಮ ಸಂಸ್ಥೆಯಾಗಿ ಯಾರ ಬಗ್ಗೆ ಬೇಕಿದ್ದರೂ ಸಾಕ್ಷ್ಯಚಿತ್ರ ರೂಪಿಸುವ, ಪ್ರಸಾರ ಮಾಡುವ ಹಕ್ಕು ಬಿಬಿಸಿಗೆ ಇದ್ದೇ ಇದೆ. ಆದರೆ ಅದರಲ್ಲಿ ಒಂದು ದೇಶದ, ದೇಶದ ಮುಖಂಡನ ಘನತೆ ಕುಗ್ಗಿಸುವ ಹುನ್ನಾರ ಇದ್ದದ್ದೇ ಆದಲ್ಲಿ ಅದನ್ನು ಸಹಿಸಲಾಗದು. ಗುಜರಾತ್ ಗಲಭೆ ನಡೆದು ಎರಡು ದಶಕ ಕಳೆದಿದ್ದು, ಗುಜರಾತ್‌ನಲ್ಲಿ ಹಿಂದೂ ಮುಸ್ಲಿಮರ ನಡುವೆ ಶಾಂತಿ ನೆಮ್ಮದಿ ನೆಲೆಸಿದೆ. ಈಗ ಮತ್ತೆ ಈ ಸಾಕ್ಷ್ಯಚಿತ್ರದಿಂದ ಹಿಂದೂ ಮುಸ್ಲಿಮರ ನಡುವೆ ಹಗೆಯ ಹೊಗೆ ಎಬ್ಬಿಸುವಂತಾಗಬಾರದು. ಇದು ಮೋದಿ ವಿರುದ್ಧದ ಸಾಕ್ಷ್ಯಚಿತ್ರ ಎನ್ನುವುದಕ್ಕಿಂತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಮಸಿ ಬಳಿಯುವ ಸಾಕ್ಷ್ಯಚಿತ್ರ ಎನ್ನಬಹುದು. ಇದರಲ್ಲಿ ಅಂತಾರಾಷ್ಟ್ರೀಯ ಸಂಚಿದೆಯೇ ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯ ಇದೆ.
ಇದನ್ನೂ ಓದಿ | ಮೋದಿ ಕುರಿತು ಬಿಬಿಸಿ ಡಾಕ್ಯುಮೆಂಟರಿ ಖಂಡಿಸಿ ದೇಶದ ನಿವೃತ್ತ ಜಡ್ಜ್‌ಗಳು, ಕನ್ನಡಿಗರು ಸೇರಿ 300 ಗಣ್ಯರಿಂದ ಪತ್ರ