ಬೆಂಗಳೂರು: ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ತೆರಿಗೆ ಬಾಕಿ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶೇ.50 ರಷ್ಟು ರಿಯಾಯಿತಿ ನೀಡಿ ತೆರಿಗೆ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
2023-24 ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ಯೋಜನೆ ರೂಪಿಸಿದ್ದು, ಹೀಗಾಗಿ ತೆರಿಗೆಯಲ್ಲಿ ರಿಯಾಯಿತಿ ನೀಡಿದೆ. ಬಾಕಿ ಇರುವ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತೆ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದ ಅರ್ಧ ತೆರಿಗೆ ಮನ್ನಾ ಮಾಡಲು ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲು ಸಲ್ಲಿಸಬೇಕು. ಸರ್ಕಾರ ಆಸ್ತಿ ತೆರಿಗೆ ಸಂಗ್ರಹದಲ್ಲಿ ತಿದ್ದುಪಡಿ ಮಾಡಿದರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ.
ಸದ್ಯ ಬಾಕಿ ಇರುವ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಈ ಹಿಂದೆ ತೆರಿಗೆ ರಿಯಾಯಿತಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಳಿವು ನೀಡಿದ್ದರು. ಸದ್ಯ ರಿಯಾಯಿತಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದು ಮಾರ್ಗದಲ್ಲಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ ಎನ್ನಲಾಗಿದೆ. ಈಗ ರಿಯಾಯಿತಿ ಆಫರ್ ಕೊಟ್ಟು ಅರ್ಧದಷ್ಟಾದರೂ ತೆರಿಗೆ ಸಂಗ್ರಹ ಮಾಡುವುದು ಪಾಲಿಕೆ ಗುರಿಯಾಗಿದೆ.
ಇದನ್ನೂ ಓದಿ | Double Decker Bus : ಮತ್ತೆ ಬರಲಿದೆ ಡಬಲ್ ಡೆಕರ್ ಬಸ್; ಓಡಾಟ ಈ ಮೂರು ರೂಟಲ್ಲಿ ಮಾತ್ರ
ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸ್ಪೇಷಲ್ ಡ್ರೈವ್
ಬಿಬಿಎಂಪಿ ವಲಯಗಳಲ್ಲಿ ಹಳೆ ಬಾಕಿ ಬಿಲ್ ಉಳಿಸಿಕೊಂಡಿದ್ದ ಸಣ್ಣ ಪುಟ್ಟ ಅಂಗಡಿಗಳಿಗೆ ನೋಟಿಸ್ ನೀಡಿ ಬಿಬಿಎಂಪಿ ಬಿಸಿ ಮುಟ್ಟಿಸಿತ್ತು. ಸೋಮವಾರ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಪೆಷಲ್ ಡ್ರೈವ್ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು 2016-17 ನೇ ಸಾಲಿನಿಂದ ಪಾಲಿಕೆ ತೆರಿಗೆಯನ್ನು ಸರಿಯಾಗಿ ಕಟ್ಟದೇ ಇರುವ ಹಾಗೂ ದೊಡ್ಡ ಮೊತ್ತದಲ್ಲಿ ಹಳೆ ಬಾಕಿ ಉಳಿಸಿಕೊಂಡ ಹಲವಾರು ಕಂಪನಿಗಳಿಗೆ ನೋಟಿಸ್ ನೀಡಿ ಬೀಗ ಹಾಕಿದ್ದಾರೆ.