Site icon Vistara News

BBMP Property Tax: ಆಸ್ತಿ ತೆರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ಗೆ ಮತ್ತೆ 1 ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಿದ ಬಿಬಿಎಂಪಿ

BBMP Property Tax

ಬೆಂಗಳೂರು: ಆಸ್ತಿ ತೆರಿಗೆ ಬಾಕಿ (BBMP Property Tax) ಉಳಿಸಿಕೊಂಡವರಿಗೆ ಬಿಬಿಎಂಪಿ ಗುಡ್‌ ನ್ಯೂಸ್‌ ನೀಡಿದೆ. ‘ಒಂದು ಬಾರಿ ಪರಿಹಾರ ಯೋಜನೆʼಯಡಿ (ಒಟಿಎಸ್) ಆಸ್ತಿ ತೆರಿಗೆಗೆ ಶೇ.5 ರಿಯಾಯಿತಿ ಪಡೆಯಲು ಜುಲೈ 31 ಅಂತಿಮ ದಿನವಾಗಿತ್ತು. ಆದರೆ, ಇದೀಗ ʼಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆʼ ಕಾಲಾವಕಾಶವನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು(ಒಟಿಎಸ್) ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯಿಂದ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಒಟಿಎಸ್ ಯೋಜನೆಯಡಿ ದಂಡಗಳ ಮೇಲೆ ಶೇ. 50 ರಿಯಾಯಿತಿ ಮತ್ತು ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಬಡ್ಡಿ ಪಾವತಿಗಳ ಮೇಲೆ ಶೇ. 100ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಒಟಿಎಸ್‌ ಕಾಲಾವಧಿ ಆ. 31ರವರೆಗೆ ವಿಸ್ತರಣೆ: ಡಿಕೆಶಿ

ಈ ಬಗ್ಗೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. “ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ಪರಿಹಾರ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜುಲೈ 31) ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಡದ ಮೇರೆಗೆ ಇದನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

11ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು, “ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತೆ ಕೆಲವರು ಚೆಕ್ ನೀಡಿದ್ದು, ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು.

“ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ” ಎಂದು ಹೇಳಿದರು.

ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.

ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏಪ್ರಿಲ್ 30ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಜುಲೈ 31 ರೊಳಗೆ ಬಾಕಿ ಪಾವತಿಸಲು ವಿಫಲರಾದವರನ್ನು ಆಗಸ್ಟ್ 1ರಿಂದ ಸುಸ್ತಿದಾರರೆಂದು ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಇದೀಗ ಮತ್ತೊಂದು ತಿಂಗಳು ʼಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆʼ ವಿಸ್ತರಿಸಲಾಗಿದೆ.

ಇದನ್ನೂ ಓದಿ | Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

ಬೆಂಗಳೂರಿನ (bengaluru) ಎಂಟು ವಲಯಗಳ ಸುಮಾರು 2.88 ಲಕ್ಷ ಆಸ್ತಿಗಳ 548.94 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ (Property Tax) ಬಾಕಿ ಪಾವತಿಯಾಗದೆ ಉಳಿದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.

Exit mobile version