Site icon Vistara News

BBMP Property Tax Hike: ಬೆಂಗಳೂರು ಜನರಿಗೆ ಮತ್ತೊಂದು ಶಾಕ್‌; ಆಸ್ತಿ ತೆರಿಗೆ ಶೇ.6.5ರಷ್ಟು ಏರಿಕೆ, ಯಾವಾಗಿನಿಂದ ಜಾರಿ?

BBMP Property Tax

ಬೆಂಗಳೂರು: ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಬಿಬಿಎಂಪಿ (BBMP) ವ್ಯಾಪ್ತಿಯ ಸ್ಥಿರ ಆಸ್ತಿಗಳಿಗೆ 8 ವರ್ಷಗಳ ಬಳಿಕೆ ಆಸ್ತಿ ತೆರಿಗೆ ಹೆಚ್ಚಳ (property Tax hike) ಮಾಡಲಾಗುತ್ತಿದೆ. ಎಲ್ಲ ಬಗೆಯ ಆಸ್ತಿಗಳಿಗೆ ಸರಾಸರಿ ಶೇ. 6.5ರಷ್ಟು ತೆರಿಗೆ ಏರಿಕೆ ಮಾಡಲಾಗುತ್ತಿದೆ.

ಹೊಸ ಪದ್ಧತಿಯಂತೆ ಆಸ್ತಿಗಳ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಾಗಲಿದೆ. ಇದರ ಪ್ರಕಾರ ಖಾಲಿ ನಿವೇಶನದ ಆಸ್ತಿ ತೆರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕವಾಗಲಿದೆ. ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆಗ ವಸತಿ ಆಸ್ತಿಗಳಿಗೆ ಶೇ.20 ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ.25ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಹೊಸ ಪದ್ದತಿಯಂತೆ ಆಸ್ತಿ ತೆರಿಗೆ ಹೆಚ್ಚಳದ ಸರಾಸರಿ ಶೇ. 6.5ರಷ್ಟಿದ್ದು, ಎಂಟು ವರ್ಷಗಳಿಗೆ ಹೋಲಿಸಿದರೆ ವಾರ್ಷಿಕ ಶೇ.1ಕ್ಕಿಂತ ಕಡಿಮೆ ಹೆಚ್ಚಳವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಪದ್ಧತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದ ತೆರಿಗೆ ಹೊರೆಯನ್ನು ಹೆಚ್ಚಿಸುವುದಿಲ್ಲ. ಆದರೆ ವಿಧಾನವನ್ನು ಸರಳಗೊಳಿಸಲಾಗುತ್ತದೆ. ಪ್ರತಿ ಆಸ್ತಿಗೆ ತೆರಿಗೆಯ ಗರಿಷ್ಠ ಹೆಚ್ಚಳವನ್ನು ಶೇ.10ಕ್ಕೆ ಮಿತಿಗೊಳಿಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

2008ರಲ್ಲಿ ಯುನಿಟ್ ವಿಸ್ತೀರ್ಣ ಮೌಲ್ಯ (ಯುಎವಿ) ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಈ ಪದ್ಧತಿಯಲ್ಲಿ 18 ವಿವಿಧ ವರ್ಗಗಳಲ್ಲಿ ಇಡೀ ನಗರವನ್ನು ಆರು ವಲಯಗಳಾಗಿ ವಿಂಗಡಿಸಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ನಾಗರಿಕರಿಗೆ ಸ್ವಯಂಘೋಷಣೆ ಸಲ್ಲಿಸಲೂ ಗೊಂದಲವಾಗಿದೆ. ಹೀಗಾಗಿ ಹೊಸ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆರು ವರ್ಗಗಳಲ್ಲಿ ಮಾತ್ರ ಆಸ್ತಿಗಳನ್ನು ವರ್ಗೀಕರಿಸಿ, ತೆರಿಗೆ ವ್ಯವಸ್ಥೆಯನ್ನು
ಸರಳೀಕರಿಸಲಾಗಿದೆ ಎಂದಿದ್ದಾರೆ.

ವಸತಿ (ಸ್ವಂತ ಮತ್ತು ಬಾಡಿಗೆ), ವಾಣಿಜ್ಯ, ಕೈಗಾರಿಕೆ, ಸ್ಟಾರ್‌ ಹೋಟೆಲ್, ವಿನಾಯಿತಿ ಕಟ್ಟಡಗಳು, ಸಂಪೂರ್ಣ ಖಾಲಿ ನಿವೇಶನಗಳು ಎಂಬ ಆರು ವರ್ಗಗಳಲ್ಲಿ ನಿವೇಶನ ವಿಸ್ತೀರ್ಣ, ಕಟ್ಟಡ ಪ್ರದೇಶ, ಸ್ವತ್ತಿನ ಬಳಕೆ, ಸ್ವತ್ತಿಗೆ ಅನ್ವಯವಾಗುವ ಪ್ರಸ್ತುತ ಮಾರ್ಗಸೂಚಿ ದರವನ್ನು ಆಧರಿಸಿ ಆಸ್ತಿ ತೆರಿಗೆ ಲೆಕ್ಕಹಾಕಲಾಗುವುದು. ನಾಗರಿಕರು ಮಾರ್ಗಸೂಚಿ ದರ ನಮೂದಿಸಬಹುದು. ಒಂದು ವೇಳೆ ಕಡಿಮೆ ಕ್ಲೇಮ್‌ ಮಾಡಿದ್ದರೆ ಆನ್‌ಲೈನ್‌ನಲ್ಲಿಯೇ ಮೂರು ತಿಂಗಳೊಳಗೆ ಬಿಬಿಎಂಪಿ ಅದನ್ನು ಸರಿಪಡಿಸುತ್ತದೆ. ಈ ಅವಧಿಯಲ್ಲಿ ನಿರ್ಧಾರವಾಗದಿದ್ದರೆ ನಾಗರಿಕರ ಕ್ಲೇಮ್ ಸ್ವೀಕರಿಸಿ ಪರಿಗಣಿಸಲಾಗುತ್ತದೆ ಎಂದು ಡಿಕೆಶಿ ತಿಳಿಸಿದರು.

ಯಾವಾಗಿನಿಂದ ಜಾರಿ?

ಹೊಸ ಆಸ್ತಿ ತೆರಿಗೆ ಯಾವಾಗಿನಿಂದ ಜಾರಿಯಾಗಲಿದೆ ಎಂಬುದರ ಬಗ್ಗೆ ಸಚಿವರೂ ತಿಳಿಸಿಲ್ಲ, ಬಿಬಿಎಂಪಿಯೂ ಈ ಬಗ್ಗೆ ಪ್ರಕಟಣೆ ನೀಡಿಲ್ಲ. ಹೀಗಾಗಿ ಈ ಏಪ್ರಿಲ್‌ನಿಂದ ಅದು ಜಾರಿಯಾಗುವುದಿಲ್ಲ ಎಂದು ತಿಳಿಯಲಾಗಿದೆ. ಹೊಸ ಆಸ್ತಿ ತೆರಿಗೆ ಪದ್ಧತಿಯ ಕರಡು ಅಧಿಸೂಚನೆ ಫೆ.15ರಂದು ಪ್ರಕಟವಾಗಿತ್ತು. ನಾಗರಿಕರ ಆಕ್ಷೇಪಣೆಗೆ 15 ದಿನಗಳ ಅವಕಾಶ ನೀಡಲಾಗಿತ್ತು. ಅಂತಿಮ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ.

ಇದನ್ನೂ ಓದಿ: ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಬೀಗ, ಲೈಸೆನ್ಸ್‌ ಅಮಾನತು: ಬಿಬಿಎಂಪಿ ಆದೇಶದಲ್ಲಿ ಏನೇನಿದೆ?

Exit mobile version