Site icon Vistara News

Bellary Election Result 2024: ಗಣಿ ನಾಡು ಬಳ್ಳಾರಿಗೆ ಇ. ತುಕಾರಾಮ್‌ ಧಣಿ; ಶ್ರೀರಾಮುಲುಗೆ ಗರ್ವಭಂಗ!

Bellary Election Result 2024

Bellary Election Result 2024: E Tukaram Wins Against B Sriramulu

ಬಳ್ಳಾರಿ: ಗಣಿ ನಾಡು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ (Bellary Election Result 2024) ಮಾಜಿ ಸಚಿವ, ಬಿಜೆಪಿಯ ಬಿ.ಶ್ರೀರಾಮುಲು (B Sriramulu) ಅವರಿಗೆ ಭಾರಿ ಮುಖಭಂಗವಾಗಿದೆ. ಬಿ.ಶ್ರೀರಾಮುಲು ಅವರ ವಿರುದ್ಧ ಕಾಂಗ್ರೆಸ್‌ನ ಇ. ತುಕಾರಾಮ್‌ (E Tukaram) ಅವರು ಭರ್ಜರಿ ಗೆಲುವು ಸಾಧಿಸಿದ್ದು, ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದರೊಂದಿಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಬಿ. ಶ್ರೀರಾಮುಲು ಅವರಿಗೆ ಲೋಕಸಭೆ ಚುನಾವಣೆಯಲ್ಲೂ ಸೋಲುಂಟಾಗಿದ್ದು ತೀವ್ರ ಮುಖಭಂಗ ಆದಂತಾಗಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶೇ.20ರಷ್ಟು ಪರಿಶಿಷ್ಟ ಪಂಗಡದ ಮತಗಳಿದ್ದು, ಇವುಗಳ ಮೇಲೆ ಉಭಯ ಅಭ್ಯರ್ಥಿಗಳ ಗಮನ ಹೆಚ್ಚಿತ್ತು. ಶ್ರೀರಾಮುಲು ಅವರಿಗೆ ನರೇಂದ್ರ ಮೋದಿ ಅವರ ಅಲೆ, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂಬ ಹಣೆಪಟ್ಟಿ, ಹಿಂದುತ್ವ, ಲಿಂಗಾಯತರು ಸೇರಿ ಹಲವು ಸಮುದಾಯಗಳ ಮತಗಳ ಭದ್ರತೆಯು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅದರಲ್ಲೂ, ಜನಾರ್ದನ ರೆಡ್ಡಿ ಅವರ ಪಕ್ಷವು ಬಿಜೆಪಿ ಜತೆ ವಿಲೀನಗೊಂಡಿರುವುದು ಶ್ರೀರಾಮುಲು ಅವರಿಗೆ ಆನೆ ಬಲ ಬಂದಂತಾಗಿತ್ತು. ಆದರೂ ಅವರು ಗೆಲುವು ಸಾಧಿಸುವಲ್ಲಿ ವಿಫಲವಾದರು.

ಇ. ತುಕಾರಾಮ್‌ ಅವರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳೇ ಪ್ರಮುಖ ಅಸ್ತ್ರವಾಗಿದ್ದವು. ಬಿ.ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಿರುವ ಕಾರಣ ಪಕ್ಷದಲ್ಲಿ ಉಂಟಾಗಿರುವ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳನ್ನೇ ಬಳಸಿಕೊಂಡು ತುಕಾರಾಮ್‌ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದರು. ಕಾಂಗ್ರೆಸ್‌ನ ಅಲೆಯೂ ತಕ್ಕಮಟ್ಟಿಗಿದ್ದು, ಮುಸ್ಲಿಮರು, ಹಿಂದುಳಿದ ವರ್ಗಗಳ ಸಮುದಾಯಗಳ ಮತಗಳನ್ನು ನೆಚ್ಚಿಕೊಂಡಿದ್ದರು. ಇದೆಲ್ಲದರ ಫಲವಾಗಿ ಅವರು ಗೆಲುವು ಸಾಧಿಸಿದರು ಎಂದು ತಿಳಿದುಬಂದಿದೆ.

2014, 2019ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಅವರು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ವೈ. ಹನುಮಂತಪ್ಪ ಅವರ ವಿರುದ್ಧ ಬಿಜೆಪಿಯ ಬಿ. ಶ್ರೀರಾಮುಲು ಅವರು ಭರ್ಜರಿ ಗೆಲುವು ಸಾಧಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದರು.

ಸೋನಿಯಾ ಗಾಂಧಿ vs ಸುಷ್ಮಾ ಸ್ವರಾಜ್‌

ಬಳ್ಳಾರಿ ಲೋಕಸಭೆ ಕ್ಷೇತ್ರವು ಒಂದು ಕಾಲದಲ್ಲಿ ದೇಶದಲ್ಲೇ ಯಾರೂ ಹೆಚ್ಚು ಗಮನ ಹರಿಸದ ಕ್ಷೇತ್ರ ಎಂಬಂತಿತ್ತು. ಆದರೆ, 1998ರಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್‌ ಅವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ದೇಶದ ಮಟ್ಟದಲ್ಲಿ ಮನ್ನಣೆ ಸಿಗುವಂತಾಯಿತು. ಇಂತಹ ಕ್ಷೇತ್ರವೀಗ ಬಿಜೆಪಿ ಭದ್ರಕೋಟೆಯೇ ಎನಿಸಿದೆ.

ಇದನ್ನೂ ಓದಿ: Kolar Election Result 2024 : ಕೋಲಾರದಲ್ಲಿ ಜೆಡಿಎಸ್​​, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್​ ಬಾಬುಗೆ ಗೆಲುವು

Exit mobile version