ಬೆಂಗಳೂರು: ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ ನ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರತಿವರ್ಷ ಅತ್ಯುತ್ತಮ ವಿಮಾನ ನಿಲ್ದಾಣ (Best Airport) ಎಂದು ಬಿರುದು ಪಡೆದುಕೊಳ್ಳುತ್ತಿರುವ ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿ ದೋಹಾದ ಹಮದ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಪ್ರತಿವರ್ಷ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್‌ನ ಪಟ್ಟಿಯಲ್ಲಿ ಸಿಂಗಾಪುರ್ ಚಾಂಗಿ ಮೊದಲ ಸ್ಥಾನದಲ್ಲಿದ್ದರೆ ದೋಹಾದ ಹಮದ್ ಎರಡನೇ ಸ್ಥಾನದಲ್ಲಿರುತ್ತಿತ್ತು. ಆದರೆ 2024ರ ಅವಾರ್ಡ್ ಪಟ್ಟಿಯಲ್ಲಿ ದೋಹಾದ ಹಮದ್ ಮೊದಲ ಸ್ಥಾನ ಪಡೆದುಕೊಂಡು ಸಿಂಗಾಪುರ್ ಚಾಂಗಿಯನ್ನು ಹಿಂದಿಕ್ಕಿದೆ.
ದೋಹಾದ ಹಮದ್ ವಿಮಾನ ನಿಲ್ದಾಣದ ಸಿಇಒ ಬದರ್ ಮುಹಮ್ಮದ್ ಅಲ್ ಮೀರ್ ಅವರು ತಮ್ಮ ಗೆಲುವಿನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ,“ಈ ವರ್ಷ ಎಚ್ ಐಎ ತನ್ನ ಕಾರ್ಯಾಚರಣೆಯ ಮೈಲಿಗಲ್ಲು 10ನೇ ವರ್ಷವನ್ನು ಆಚರಿಸುತ್ತಿದೆ ಮತ್ತು ಪ್ರಯಾಣಿಕರು ನಮ್ಮನ್ನು 3 ನೇ ಬಾರಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಮತ ಚಲಾಯಿಸಿದ್ದಾರೆ ಎಂದು ನಮಗೆ ನಿಜವಾಗಿಯೂ ಗೌರವವಿದೆ” ಎಂದು ಹೇಳಿದ್ದಾರೆ.
ಹಾಗೇ “ಸ್ಕೈಟ್ರಾಕ್ಸ್ ಪ್ರತಿಷ್ಠಿತ ಪ್ರಶಸ್ತಿಗಳು ನಮ್ಮ ಉದ್ಯೋಗಿಗಳ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅವರು ಪ್ರತಿದಿನ ನಮ್ಮ ಪ್ರಮುಖ ಸ್ಥಾನವನ್ನು ನವೀನಗೊಳಿಸಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ” ಎಂದು ಅವರು ತಿಳಿಸಿದ್ದಾರೆ.
ದೋಹಾದ ಹಮದ್ ಮತ್ತು ಸಿಂಗಾಪುರದ ಚಾಂಗಿ ನಂತರದ ಮೂರನೇ ಸ್ಥಾನವನ್ನು ಸಿಯೋಲ್ ಇಂಚಿಯಾಬ್ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಟೋಕಿಯಾದ ಅವಳಿಗಳಾದ ಹನೆಡಾ ಮತ್ಯು ನರಿಟಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ. ಕ್ರೈಸ್ಟ್ಚರ್ಚ್ 8ನೇ ಸ್ಥಾನದಲ್ಲಿದ್ದರೆ ವೆಲ್ಲಿಂಗ್ಟನ್ 10ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ವಿಮಾನ ನಿಲ್ದಾಣ 51ನೇ ಸ್ಥಾನದಿಂದ 45 ನೇ ಸ್ಥಾನಕ್ಕೆ ಜಿಗಿದಿದೆ.
ಕಳೆದ ವರ್ಷದಲ್ಲಿ ಸಿಂಗಾಪುರದ ಚಾಂಗಿ ಮೊದಲ ಸ್ಥಾನದಲ್ಲಿದ್ದರೆ ದೋಹಾ ಹಮದ್ ಎರಡನೇ ಸ್ಥಾನದಲ್ಲಿತ್ತು. ಟೋಕಿಯೊ ಹನೇಡಾ 3ನೇ ಸ್ಥಾನ ಹಾಗೂ ಸಿಯೋಲ್ ಇಂಚಿಯಾನ್ 4ನೇ ಸ್ಥಾನದಲ್ಲಿತ್ತು. ಪ್ಯಾರಿಸ್ ಸಿಡಿಜಿ 5ನೇ ಸ್ಥಾನದಲ್ಲಿದ್ದರೆ ಟೋಕಿಯೋ ನರಿಟಾ 9ನೇ ಸ್ಥಾನವನ್ನು ಪಡೆದುಕೊಂಡಿತ್ತು.
ಭಾರತದ ವಿಮಾನ ನಿಲ್ದಾಣಕ್ಕೆ ಸಿಕ್ಕ ಪ್ರಶಸ್ತಿಗಳು :
ದೇಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ. ಮತ್ತು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಬಿರುದನ್ನು ಪಡೆದುಕೊಂಡಿದೆ. ಹೈದರಾಬಾದ್ ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಸೇವೆ ’ ಎಂದು ಕರೆಯಲ್ಪಟ್ಟಿದೆ.
ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್ ಕುಡಿಸೋ ಮುನ್ನ ಎಚ್ಚರ!
ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ಪಡೆದಿದೆ. ಕಳೆದ ವರ್ಷ 69 ಸ್ಥಾನದಲ್ಲಿತ್ತು, ಈ ವರ್ಷ 59ನೇ ಸ್ಥಾನ ಪಡೆದುಕೊಂಡಿದೆ.