Site icon Vistara News

Bharat Ratna: ರೈತ ಮಹಾನಾಯಕ, ಭೂಸುಧಾರಣೆಯ ರೂವಾರಿ, ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌

bharat ratna chaudhary charan singh

ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ (Prime minister) ಚೌಧರಿ ಚರಣ್‌ ಸಿಂಗ್‌ (Chaudhary Charan Singh) ಅವರನ್ನು ʼರೈತ ಮಹಾನಾಯಕʼ (Farmer leader) ಎಂದೇ ಕರೆಯಲಾಗುತ್ತದೆ. ತಮ್ಮ ಜೀವನದುದ್ದಕ್ಕೂ ಅವರು ರೈತರು ಮತ್ತು ಅವರ ಕುಟುಂಬಗಳ ಉನ್ನತಿಗಾಗಿ ಶ್ರಮಿಸಿದರು. ಕಠಿಣ ಪರಿಶ್ರಮ, ಸ್ವತಂತ್ರ ನಿಲುವು ಮತ್ತು ರಾಜಿಯಾಗದ ಪ್ರಾಮಾಣಿಕತೆ ಅವರ ಮೌಲ್ಯಗಳಾಗಿದ್ದವು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ಹಲವಾರು ಬಾರಿ ಜೈಲಿಗೂ ಹೋಗಿದ್ದರು. ಸ್ವತಂತ್ರ ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ ಅವರಿಗೆ ಅರ್ಹವಾಗಿಯೇ ʼಭಾರತ ರತ್ನʼ (Bharat Ratna) ಸಂದಿದೆ.

ಚೌಧರಿ ಚರಣ್ ಸಿಂಗ್ (Chaudhary Charan Singh) ಅವರು ಡಿಸೆಂಬರ್ 23ರಂದು ಜನಿಸಿದರು. ಪ್ರತಿ ವರ್ಷ ಅವರ ಜನ್ಮದಿನವನ್ನು ʼರಾಷ್ಟ್ರೀಯ ರೈತರ ದಿನʼವಾಗಿ ಆಚರಿಸಲಾಗುತ್ತದೆ. ಚರಣ್ ಸಿಂಗ್‌ ಉತ್ತರ ಪ್ರದೇಶದ ನೂರ್‌ಪುರದಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. 1979ರ ಜುಲೈ 28ರಿಂದ 1980ರ ಜನವರಿ 14ರವರೆಗೆ ಐದೂವರೆ ತಿಂಗಳು ಅವರು ಪ್ರಧಾನ ಮಂತ್ರಿಯಾಗಿದ್ದರು.

ಅವರ ತಂದೆ ಮೀರ್ ಸಿಂಗ್, ಸಣ್ಣ ಕೃಷಿಯ ರೈತರಾಗಿದ್ದರು. ಅವರ ತಾಯಿ ನೇತ್ರಾ ಕೌರ್. ಐದು ಮಕ್ಕಳಲ್ಲಿ ಹಿರಿಯರಾಗಿದ್ದರು. ಅವರ ಕುಟುಂಬ ಮೀರತ್ ಜಿಲ್ಲೆಯ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕೃಷಿ ಜೀವನಕ್ಕೆ ಸೂಕ್ತವಾದ ಭೂಮಿಗಾಗಿ ಸ್ಥಳಾಂತರಗೊಂಡಿತು.

ತಮ್ಮ ಶಾಲಾ ಶಿಕ್ಷಣವನ್ನು ಜಾನಿ ಖುರ್ದ್ ಗ್ರಾಮದಲ್ಲಿ ಪಡೆದರು. 1919ರಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು. 1923ರಲ್ಲಿ ಆಗ್ರಾ ಕಾಲೇಜಿನಲ್ಲಿ ಬಿಎಸ್ಸಿ ಮತ್ತು 1925ರಲ್ಲಿ ಇತಿಹಾಸದಲ್ಲಿ ಎಂಎ ಪೂರ್ಣಗೊಳಿಸಿದರು. ಕಾನೂನಿನಲ್ಲಿ ತರಬೇತಿಯನ್ನು ಪಡೆದರು. ಗಾಜಿಯಾಬಾದ್‌ನಲ್ಲಿ ನಾಗರಿಕ ಕಾನೂನು ಅಭ್ಯಾಸ ಮಾಡಿದರು. 1929ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು ಮತ್ತು ಪೂರ್ಣಾವಧಿ ರಾಜಕೀಯವನ್ನು ಆರಿಸಿಕೊಂಡರು. ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟದಲ್ಲಿ ಮಹಾತ್ಮ ಗಾಂಧಿಯನ್ನು ಅನುಸರಿಸಿದರು ಮತ್ತು ಹಲವಾರು ಬಾರಿ ಜೈಲುವಾಸ ಅನುಭವಿಸಿದರು. 1930ರಲ್ಲಿ ಉಪ್ಪಿನ ಕಾಯಿದೆ ಉಲ್ಲಂಘಿಸಿದ್ದಕ್ಕಾಗಿ ಬ್ರಿಟಿಷರು ಅವರನ್ನು 12 ವರ್ಷ ಜೈಲಿಗೆ ಕಳುಹಿಸಿದರು. 1940ರ ನವೆಂಬರ್‌ನಲ್ಲಿ ವೈಯಕ್ತಿಕ ಸತ್ಯಾಗ್ರಹ ಚಳವಳಿಗಾಗಿ ಅವರು ಮತ್ತೆ ಒಂದು ವರ್ಷ ಜೈಲು ಪಾಲಾದರು. ಆಗಸ್ಟ್ 1942ರಲ್ಲಿ ಅವರನ್ನು ಮತ್ತೆ ಬ್ರಿಟಿಷರು ಡಿಐಆರ್ ಅಡಿಯಲ್ಲಿ ಜೈಲಿಗೆ ಹಾಕಿದರು ಮತ್ತು ನವೆಂಬರ್ 1943ರಲ್ಲಿ ಬಿಡುಗಡೆ ಮಾಡಿದರು.

1937ರಲ್ಲಿ ಅವರು ಮೊದಲ ಬಾರಿಗೆ ಉತ್ತರ ಪ್ರದೇಶದ ಛಪ್ರೌಲಿಯಿಂದ ಶಾಸಕಾಂಗ ಸಭೆಗೆ ಆರಿಸಿ ಬಂದರು. 1946, 1952, 1962 ಮತ್ತು 1967ರಲ್ಲಿ ಮತ್ತೆ ಆ ಕ್ಷೇತ್ರವನ್ನು ಪ್ರತಿನಿಧಿಸಿದರು. 1946ರಲ್ಲಿ ಪಂಡಿತ್ ಗೋವಿಂದ್ ಬಲ್ಲಭ್ ಪಂತ್ ಅವರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾದರು. ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ, ಮಾಹಿತಿ, ಇತ್ಯಾದಿ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದರು.

ಜೂನ್ 1951ರಲ್ಲಿ ರಾಜ್ಯದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ನೇಮಕಗೊಂಡರು. ನ್ಯಾಯ ಮತ್ತು ಮಾಹಿತಿ ಇಲಾಖೆಗಳ ಉಸ್ತುವಾರಿ ಪಡೆದರು. 1952ರಲ್ಲಿ ಡಾ.ಸಂಪೂರ್ಣಾನಂದರ ಸಂಪುಟದಲ್ಲಿ ಕಂದಾಯ ಮತ್ತು ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. 1960ರಲ್ಲಿ ಸಿ.ಬಿ.ಗುಪ್ತಾ ಅವರ ಸಚಿವಾಲಯದಲ್ಲಿ ಗೃಹ ಮತ್ತು ಕೃಷಿ ಸಚಿವರಾಗಿದ್ದರು. 1962- 63ರವರೆಗೆ ಸುಚೇತಾ ಕೃಪಲಾನಿ ಅವರ ಸಂಪುಟದಲ್ಲಿ ಕೃಷಿ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 1965ರಲ್ಲಿ ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.

ಚರಣ್ ಸಿಂಗ್ 1967ರ ಏಪ್ರಿಲ್‌ನಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡರು. ಯುಪಿಯ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾದರು. ಇದು 1967ರಿಂದ 1971ರವರೆಗೆ ಕಾಂಗ್ರೆಸ್ಸೇತರ ಸರ್ಕಾರಗಳು ಭಾರತದಲ್ಲಿ ಪ್ರಬಲ ಶಕ್ತಿಯಾಗಿದ್ದ ಅವಧಿಯಾಗಿದೆ. 1970ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಎರಡನೇ ಬಾರಿಗೆ ಯುಪಿಯ ಮುಖ್ಯಮಂತ್ರಿಯಾದರು. 2 ಅಕ್ಟೋಬರ್ 1970ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

ಉತ್ತರ ಪ್ರದೇಶಕ್ಕೆ ಅವರು ಸಲ್ಲಿಸಿದ ಆಡಳಿತದಲ್ಲಿ ಅಸಮರ್ಥತೆ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಸಹಿಸದ ಕಠಿಣ ಕಾರ್ಯನಿರ್ವಾಹಕರಾಗಿ ಖ್ಯಾತಿ ಗಳಿಸಿದರು. ಯುಪಿಯಲ್ಲಿ ಅವರು ಭೂಸುಧಾರಣೆಗಳ ಮುಖ್ಯ ರೂವಾರಿಯಾಗಿದ್ದರು. 1939ರಲ್ಲಿ ಡಿಪಾರ್ಟ್‌ಮೆಂಟ್ ರಿಡೆಂಪ್ಶನ್ ಬಿಲ್‌ನ ರಚನೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಸಾಲಗಾರರಿಗೆ ಹೆಚ್ಚಿನ ಪರಿಹಾರವನ್ನು ನೀಡಿತು. 1960ರಲ್ಲಿ ಭೂ ಹಿಡುವಳಿ ಕಾಯಿದೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ರಾಜ್ಯದಾದ್ಯಂತ ಭೂ ಹಿಡುವಳಿಗಳ ಮೇಲಿನ ಸೀಲಿಂಗ್ ಅನ್ನು ಕಡಿಮೆ ಮಾಡಿ ಏಕರೂಪವಾಗಿಸಿತು.

ಇದನ್ನೂ ಓದಿ: Bharat Ratna: ನರಸಿಂಹರಾವ್, ಚರಣ್‌ಸಿಂಗ್, ಸ್ವಾಮಿನಾಥನ್‌ಗೆ ಭಾರತರತ್ನ ಗರಿ

1977ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಛಿದ್ರಗೊಂಡ ಪ್ರತಿಪಕ್ಷಗಳು ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಜನತಾ ಪಕ್ಷದ ಬ್ಯಾನರ್ ಅಡಿಯಲ್ಲಿ ಒಂದಾದವು. ಇದಕ್ಕಾಗಿ ಚೌಧರಿ ಚರಣ್ ಸಿಂಗ್ ಅವರು 1974ರಿಂದ ಏಕಾಂಗಿಯಾಗಿ ಹೋರಾಡುತ್ತಿದ್ದರು. ಅವರು ಜನತಾ ಒಕ್ಕೂಟದ ಪ್ರಮುಖ ಘಟಕವಾದ ಭಾರತೀಯ ಲೋಕದಳದ ನಾಯಕರಾಗಿದ್ದರು. 1979ರ ಜುಲೈಯಲ್ಲಿ ಪ್ರಧಾನಿಯಾದರು. ಆಗ ಇಂದಿರಾ ಗಾಂಧಿಯವರ ಕಾಂಗ್ರೆಸ್ ಇವರಿಗೆ ಬೆಂಬ ನೀಡಿತ್ತು. ಆದರೆ ಕಾಂಗ್ರೆಸ್‌ ಇವರ ಸರ್ಕಾರಕ್ಕೆ 24 ವಾರಗಳ ನಂತರ ಬೆಂಬಲವನ್ನು ಹಿಂತೆಗೆದುಕೊಂಡಿತು. ಚೌಧರಿ ರಾಜೀನಾಮೆ ನೀಡಿದರು. ಆರು ತಿಂಗಳ ನಂತರ ಚುನಾವಣೆ ನಡೆದು ಇಂದಿರಾ ಆರಿಸಿ ಬಂದರು. ಚರಣ್ ಸಿಂಗ್ ಅವರು 1987ರಲ್ಲಿ ನಿಧನರಾಗುವವರೆಗೂ ವಿರೋಧ ಪಕ್ಷದಲ್ಲಿ ಲೋಕದಳವನ್ನು ಮುನ್ನಡೆಸಿದರು.

ಅವರು ಸಾಮಾಜಿಕ ನ್ಯಾಯದಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದರು. ಲಕ್ಷಾಂತರ ರೈತರ ನಡುವೆ ಅವರು ಜನಪ್ರಿಯರಾಗಿದ್ದರು. ಅವರ ಜೀವನ ಶೈಲಿ ತುಂಬಾ ಸರಳವಾಗಿತ್ತು. ಓದುವುದು ಮತ್ತು ಬರೆಯುವುದು ಅವರ ಪ್ರಿಯ ಹವ್ಯಾಸವಾಗಿತ್ತು. ಅವರು ಲೇಖಕರೂ ಆಗಿದ್ದರು. ಅಬಾಲಿಷನ್‌ ಆಫ್‌ ಜಮೀನ್ದಾರಿ, ಕೋ ಆಪರೇಟಿವ್‌ ಫಾರ್ಮಿಂಗ್‌ ಎಕ್ಸ್‌ ರೇಯ್ಡ್‌, ಇಂಡಿಯಾಸ್‌ ಪಾವರ್ಟಿ ಆಂಡ್‌ ಇಟ್ಸ್‌ ಸೊಲ್ಯುಷನ್‌, ಪೆಸಂಟ್‌ ಪ್ರೊಪ್ರೈಟರ್‌ಶಿಪ್‌ ಆರ್‌ ಲ್ಯಾಂಡ್‌ ಟು ದಿ ವರ್ಕರ್ಸ್‌, ಪ್ರಿವೆನ್ಷನ್‌ ಆಫ್‌ ಡಿವಿಷನ್‌ ಆಫ್‌ ಹೋಲ್ಡಿಂಗ್ಸ್‌ ಬಿಲೋ ಎ ಸರ್ಟನ್‌ ಮಿನಿಮಮ್‌ ಮುಂತಾದ ಸಾಮಾಜಿಕ ಸುಧಾರಣಾ ಮಹತ್ವ ಹೊಂದಿರುವ ಕೃತಿಗಳನ್ನು ರಚಿಸಿದ್ದಾರೆ.

ಇದನ್ನೂ ಓದಿ: LK Advani: ಭಾರತ ರತ್ನ ಎಲ್​ ಕೆ ಅಡ್ವಾಣಿ ಅಭಿನಂದಿಸಿದ ಆತ್ಮೀಯ ಒಡನಾಡಿ ಜೋಶಿ; ಇಲ್ಲಿದೆ ವಿಡಿಯೊ

Exit mobile version