Site icon Vistara News

Bhojshala Row: ಮತ್ತೊಂದು ಮಂದಿರ- ಮಸೀದಿ ವಿವಾದ; ಸರ್ವೆ ಆರಂಭ; ʼಇದು ಸರಸ್ವತಿ ದೇವಸ್ಥಾನʼ ಎಂದ ಪುರಾತತ್ವಶಾಸ್ತ್ರಜ್ಞ ಮುಹಮ್ಮದ್

Bhojshala Row

ಹೊಸದಿಲ್ಲಿ: ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ವಾರಣಾಸಿ ಜ್ಞಾನವಾಪಿ ಮಸೀದಿ (Gyanvapi Mosque) ಮಾದರಿಯ ವಿವಾದಕ್ಕೆ ಇತ್ಯರ್ಥ ಹಾಡಲು ಹೈಕೋರ್ಟ್‌ ಮುಂದಾಗಿದ್ದು, ಪುರಾತತ್ವ ಇಲಾಖೆಯ ಸರ್ವೆಗೆ (ASI Survey) ಆದೇಶಿಸಿದೆ. ಎಂಪಿಯ ಧಾರ್‌ನಲ್ಲಿರುವ ಭೋಜಶಾಲಾ ದೇವಸ್ಥಾನ- ಕಮಲ್ ಮೌಲಾ ಮಸೀದಿ ಸಂಕೀರ್ಣದ ವಿವಾದಕ್ಕೆ (Bhojshala Row) ಸಂಬಂಧಿಸಿ ಸ್ಥಳದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸಲು ಮಧ್ಯಪ್ರದೇಶ ಹೈಕೋರ್ಟ್ (MP High court) ಸೋಮವಾರ ಅನುಮತಿ ನೀಡಿದ್ದು, ಸರ್ವೆ ಮಂಗಳವಾರ ಆರಂಭಗೊಳ್ಳುತ್ತಿದೆ.

ಇಲ್ಲಿರುವ ವಿವಾದಿತ ಕಟ್ಟಡವನ್ನು ಹಿಂದೂಗಳು ವಾಗ್ದೇವಿ ದೇವಾಲಯವೆಂದು ಪರಿಗಣಿಸಿದರೆ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ತಿಳಿಯುತ್ತಾರೆ. ಹಿಂದೂ ಪರ ವಕೀಲ ವಿಷ್ಣು ಜೈನ್ ಅವರು ಹಂಚಿಕೊಂಡ ನ್ಯಾಯಾಲಯದ ಆದೇಶದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ) ಇಲಾಖೆಯ ಸಮೀಕ್ಷೆಯನ್ನು ಆದೇಶಿಸಿಲಾಗಿದೆ. “ಇಡೀ ಸಂಕೀರ್ಣದ ಮೂಲ ಸ್ವರೂಪವನ್ನು ನಾಶಗೊಳಿಸದೆ, ವಿರೂಪಗೊಳಿಸದೆ, ಬದಲಿಸದೆ ಎಎಸ್ಐನ ಐದು ಸದಸ್ಯರ ಸಮಿತಿಯು ಅಗತ್ಯವಿರುವ ಯಾವುದೇ ಅಧ್ಯಯನ, ತನಿಖೆ ಅಥವಾ ವಿಚಾರಣೆಯನ್ನು ಕೈಗೊಳ್ಳಬೇಕು” ಎಂದು ಹೇಳಿದೆ.

ಆದೇಶದ ಸ್ವೀಕೃತಿಯ ದಿನಾಂಕದಿಂದ ಆರು ವಾರಗಳ ಅವಧಿಯಲ್ಲಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಎಎಸ್‌ಐ ಸಮಿತಿಗೆ ನ್ಯಾಯಾಲಯ ಆದೇಶಿಸಿದೆ. “ಎಎಸ್‌ಐನ ಡೈರೆಕ್ಟರ್ ಜನರಲ್/ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದ ಎಎಸ್‌ಐನ ಐದಕ್ಕಿಂತ ಕಡಿಮೆಯಿಲ್ಲದ (5) ಹಿರಿಯ- ಹೆಚ್ಚಿನ ಅಧಿಕಾರಿಗಳ ತಜ್ಞ ಸಮಿತಿಯು ಸರಿಯಾಗಿ ದಾಖಲಿಸಿದ ಸಮಗ್ರ ಕರಡು ವರದಿಯನ್ನು ಆರು ವಾರಗಳ ಅವಧಿಯಲ್ಲಿ ಈ ನ್ಯಾಯಾಲಯದ ಮುಂದೆ ಸಲ್ಲಿಸಬೇಕು” ಎಂದು ಅದು ಹೇಳಿದೆ.

ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ ಮುಹಮ್ಮದ್ ಅವರು (ಇವರು ಅಯೋಧ್ಯೆಯ ರಾಮ ಜನ್ಮಭೂಮಿ ತಾಣವನ್ನು ಸಮೀಕ್ಷೆಗೆ ಒಳಪಡಿಸಿದ ತಂಡದಲ್ಲಿದ್ದವರು) ಭೋಜಶಾಲಾ- ಕಮಲ್ ಮೌಲಾ ಮಸೀದಿಯ ವಿವಾದದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಈ ಸ್ಥಳವು ಹಿಂದೆ ಸರಸ್ವತಿ ದೇವಾಲಯವಾಗಿತ್ತು ಮತ್ತು ನಂತರ ಅದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು” ಎಂದು ಪ್ರತಿಪಾದಿಸಿದ್ದಾರೆ.

“ಭೋಜಶಾಲಾ ಕುರಿತ ಐತಿಹಾಸಿಕ ಸತ್ಯವೆಂದರೆ ಅದು ಸರಸ್ವತಿ ದೇವಸ್ಥಾನವಾಗಿತ್ತು. ಇದನ್ನು ಇಸ್ಲಾಮಿಕ್ ಮಸೀದಿಯಾಗಿ ಪರಿವರ್ತಿಸಲಾಯಿತು. ಆದರೆ ಪ್ರಾರ್ಥನಾ ಸ್ಥಳಗಳ ಕಾಯಿದೆ 1991ರ ಪ್ರಕಾರ, ಕಟ್-ಆಫ್ ವರ್ಷ 1947. ಇದು 1947ರಲ್ಲಿ ದೇವಾಲಯವಾಗಿದ್ದರೆ ದೇವಾಲಯವಾಗಿಯೇ ಇರಲಿ; ಆಗ ಅದು ಮಸೀದಿಯಾಗಿದ್ದರೆ ಮಸೀದಿಯಾಗಿಯೇ ಇರಲಿ” ಎಂದು ಮುಹಮ್ಮದ್ ಹೇಳಿದ್ದಾರೆ.

“ಇದು ಸರಸ್ವತಿ ದೇವಸ್ಥಾನವಾಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಎರಡೂ ಕಡೆಯವರು ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಮತ್ತು ಪೂಜಾ ಸ್ಥಳಗಳ ಕಾಯಿದೆ 1991 ಅನ್ನು ಗೌರವಿಸಬೇಕು. ಎಲ್ಲಾ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್ ತೀರ್ಮಾನ ಕೈಗೊಳ್ಳಲಿದೆ. ಎಲ್ಲರೂ ಅದನ್ನು ಅನುಸರಿಸಬೇಕು. ಏಕೆಂದರೆ ಅದೊಂದೇ ಪರಿಹಾರವಾಗಿದೆ” ಎಂದು ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞ ಹೇಳಿದ್ದಾರೆ.

ಈ ಸ್ಥಳವು ಹಿಂದೆ ವಾಗ್ದೇವಿ (ಸರಸ್ವತಿ) ದೇವಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂದು ಹಿಂದೂಗಳು ಪ್ರತಿಪಾದಿಸುತ್ತಾರೆ. ಆದರೆ ಸದ್ಯ ಇದು ಮುಸ್ಲಿಮರ ಹಿಡಿತದಲ್ಲಿದ್ದು, ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯಲಾಗುತ್ತದೆ. ಏಪ್ರಿಲ್ 7, 2003ರ ASI ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಮಾಡಲು ಅನುಮತಿಸಲಾಗಿದೆ. ಮುಸ್ಲಿಮರು ಶುಕ್ರವಾರದಂದು ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿಸಲಾಗಿದೆ.

ಇದನ್ನೂ ಓದಿ: ಮಸೀದಿ ನಿರ್ಮಿಸಲು ಔರಂಗಜೇಬನಿಂದ ಮಥುರಾ ದೇಗುಲ ನೆಲಸಮ; ಪುರಾತತ್ವ ಇಲಾಖೆಯ ಸ್ಫೋಟಕ ಮಾಹಿತಿ

Exit mobile version