Site icon Vistara News

ವಿಸ್ತಾರ ಸಂಪಾದಕೀಯ: ರೈಲ್ವೇ ಇಲಾಖೆಯ ಸುಧಾರಣೆ ಕ್ರಮಗಳು ಪ್ರಶಂಸಾರ್ಹ

Modi

Big Transformation In Indian Railways In Phenomenal

ಮುಂದಿನ 5 ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಯಾಣಿಕರಿಗೂ (Railway Ticket) ಕನ್ಫರ್ಮ್ಡ್‌ ಟಿಕೆಟ್‌ (Confirmed Tickets) ಸಿಗಲಿವೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಗ್ಯಾರಂಟಿ- ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಿ, ಪ್ರತಿಯೊಬ್ಬ ಪ್ರಯಾಣಿಕರಿಗೆ ಕನ್ಫರ್ಮ್ಡ್‌ ಟಿಕೆಟ್‌ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ವೇಟಿಂಗ್‌ ಲಿಸ್ಟ್‌ ನೋಡುತ್ತ ಕಾಯುವುದು ತಪ್ಪುತ್ತದೆ. ಎಲ್ಲರಿಗೂ ಸುಲಭವಾಗಿ ರೈಲು ಟಿಕೆಟ್‌ ಕೊಡುವಂತೆ ಮಾಡುವುದು ನಮ್ಮ ಆದ್ಯತೆ ಎಂದಿದ್ದಾರೆ ಸಚಿವರು. ಇದು ದೇಶದ ರೈಲ್ವೇ ವ್ಯವಸ್ಥೆಯ ಸುಧಾರಣೆಗಳಲ್ಲಿ ಒಂದು ವಿಚಾರ ಮಾತ್ರ.

ಕಳೆದ 10 ವರ್ಷಗಳಲ್ಲಿ ದೇಶದ ರೈಲ್ವೇ ವ್ಯವಸ್ಥೆಯನ್ನು ಸಾಕಷ್ಟು ಆಧುನೀಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ವಂದೇ ಭಾರತ್‌ನಂತಹ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. ದೇಶಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯ, ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಪ್ರಯತ್ನಪಡುತ್ತಿದೆ. ಅದೇ ರೀತಿ ಪ್ರಯಾಣಿಕರು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ರೈಲು ಟಿಕೆಟ್‌ಗಳನ್ನು ಪಡೆಯುವಂತೆ ಮಾಡುವುದು ಮೊದಲ ಆದ್ಯತೆ. ಇದಕ್ಕಾಗಿ ಇನ್ನಷ್ಟು ರೈಲುಗಳ ಓಡಾಟ, ದೇಶಾದ್ಯಂತ ರೈಲುಗಳ ವಿಸ್ತರಣೆ, ರೈಲ್ವೆ ಲೇನ್‌ಗಳನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. 2014ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ 31 ಸಾವಿರ ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. 2004ರಿಂದ 2014ರ ಅವಧಿಯಲ್ಲಿ 5 ಸಾವಿರ ಕಿಲೋಮೀಟರ್‌ ರೈಲು ಮಾರ್ಗ ವಿದ್ಯುದ್ದೀಕರಣವಾಗಿದ್ದರೆ, 2014ರಿಂದೀಚೆಗೆ ವಿದ್ಯುದ್ದೀಕರಣದ ಪ್ರಮಾಣವು 44 ಸಾವಿರ ಕಿಲೋಮೀಟರ್‌ಗೆ ಏರಿಕೆಯಾಗಿದೆ. ಕಳೆದ 10 ವರ್ಷದಲ್ಲಿ 54 ಸಾವಿರ ಬೋಗಿಗಳನ್ನು ತಯಾರಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿಯವರು 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು ದೇಶಾದ್ಯಂತ ಲೋಕಾರ್ಪಣೆ ಮಾಡಿದ್ದರು. ಈ ಮೊದಲು ರೈಲ್ವೆ ಇಲಾಖೆ ಎಂದರೆ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೇ ರೈಲ್ವೆಯು ಪರಿವರ್ತನೆಯ ಬಹುದೊಡ್ಡ ಶಕ್ತಿಯಾಗಿ ಬದಲಾಗಿದೆ. ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಬುಲೆಟ್‌ ರೈಲು ಯೋಜನೆಯು ಸಂಪರ್ಕ ಕ್ರಾಂತಿ ಜತೆಗೆ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಬುಲೆಟ್‌ ರೈಲು ಸಂಚರಿಸುವ ಮುಂಬೈ, ವಾಪಿ, ಬರೋಡಾ, ಸೂರತ್‌, ಆನಂದ್‌ ಹಾಗೂ ಅಹಮದಾಬಾದ್‌ ನಗರಗಳು ಆರ್ಥಿಕ ನಗರಗಳಾಗಿ ಬದಲಾಗಲಿವೆ. ಈ ನಗರಗಳಲ್ಲಿ ಪ್ರತ್ಯೇಕ ಆರ್ಥಿಕತೆಯೇ ಸೃಷ್ಟಿಯಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದರು. ಮೊದಲ ಬುಲೆಟ್‌ ರೈಲು ಯೋಜನೆಗೆ 1.08 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕೆ ಜಪಾನ್‌ ಸರ್ಕಾರ ಕೇವಲ 0.1ರ ಬಡ್ಡಿದರದಲ್ಲಿ ಸಾಲ ನೀಡಿದೆ.

ಸಣ್ಣಪುಟ್ಟ ಸಂಗತಿಗಳಲ್ಲೂ ರೈಲ್ವೇ ಇಲಾಖೆ ಸುಧಾರಣೆ ತರುತ್ತಿದೆ. ಉದಾಹರಣೆಗೆ, ಐಆರ್‌ಟಿಸಿ (Indian Railway Catering and Tourism Corporation) ವೆಬ್‌ಸೈಟ್‌ನಿಂದ ಕಾಯ್ದಿರಿಸಿದ ಆರ್‌ಎಸಿ (Reservation Against Cancellation) ಟಿಕೆಟ್‌ಗಳನ್ನು ರದ್ದುಗೊಳಿಸಲು ಕನಿಷ್ಠ ಶುಲ್ಕವನ್ನು (60 ರೂ. ಮಾತ್ರ) ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಅಂದರೆ ಈ ಮೊದಲಿನ ಅನಿಯಂತ್ರಿತ ಶುಲ್ಕ ಇನ್ನು ಇರುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ರೈಲ್ವೇಯು ವೈಟಿಂಗ್‌ ಟಿಕೆಟ್‌ಗಳ ರದ್ದತಿಯಿಂದ ಬರೋಬ್ಬರಿ 1,230 ಕೋಟಿ ರೂ. ಆದಾಯ ಗಳಿಸಿದೆ. ಈ ಹಣದುಬ್ಬರದ ಕಾಲದಲ್ಲೂ ಕನಿಷ್ಠ ಪ್ರಯಾಣಿಕ ಹಾಗೂ ಸರಕು ಸಾಗಣೆ ಶುಲ್ಕವನ್ನು ರೈಲ್ವೇಯು ಹೊಂದಿರುವುದರಿಂದ, ಸಾರ್ವಜನಿಕ ಸೇವೆಯ ಮಾಧ್ಯಮವೂ ಆಗಿದೆ. ಹೀಗಾಗಿ ರೈಲ್ವೆಯಲ್ಲಿ ಆಗುವ ಸುಧಾರಣೆಯು ಇನ್ನೊಂದು ರೀತಿಯಲ್ಲಿ ಬಡ- ಮಧ್ಯಮ- ಕೆಳವರ್ಗದ ಜನತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯವನ್ನು ನೀಡುವ ಉಪಕ್ರಮವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರುತ್ತಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕಿದೆ.

ಇದನ್ನೂ ಓದಿ: Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

Exit mobile version