Site icon Vistara News

Electoral Bonds: ʼಲಾಟರಿ ಕಿಂಗ್‌ʼ ₹509 ಕೋಟಿ ನೀಡಿದ್ದು ಈ ಪಾರ್ಟಿಗೆ!

santiago martin lottery king

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral Bonds) ಅಗ್ರ ಖರೀದಿದಾರರಾಗಿ ಹೊರಹೊಮ್ಮಿರುವ `ಲಾಟರಿ ಕಿಂಗ್’ (Lottery king) ಸ್ಯಾಂಟಿಯಾಗೊ ಮಾರ್ಟಿನ್ (Santiago Martin) ಅವರ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂಗೆ (DMK) ₹509 ಕೋಟಿ ದೇಣಿಗೆ ನೀಡಿದೆ.

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆಗೆ ಅನುಮತಿಸಿದ್ದ ಚುನಾವಣಾ ಬಾಂಡ್‌ಗಳಡಿ ಡಿಎಂಕೆ ₹656.5 ಕೋಟಿ ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸಿವೆ. ಫ್ಯೂಚರ್ ಗೇಮಿಂಗ್ ₹1,368 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಅದರಲ್ಲಿ ಸುಮಾರು 37 ಪ್ರತಿಶತವು ದ್ರಾವಿಡ ಮುನ್ನೇತ್ರ ಕಳಗಂ ಅಥವಾ ಡಿಎಂಕೆಗೆ ಹೋಗಿದೆ.

ಮೇಘಾ ಇಂಜಿನಿಯರಿಂಗ್ (ರೂ. 105 ಕೋಟಿ), ಇಂಡಿಯಾ ಸಿಮೆಂಟ್ಸ್ (ರೂ. 14 ಕೋಟಿ) ಮತ್ತು ಸನ್ ಟಿವಿ (ರೂ. 10 ಕೋಟಿ) ಡಿಎಂಕೆಯ ಇತರ ಪ್ರಮುಖ ದಾನಿಗಳಾಗಿವೆ. ಇದುವರೆಗೆ ದಾನಿಗಳ ಗುರುತನ್ನು ಬಹಿರಂಗಪಡಿಸಿದ ಕೆಲವೇ ಕೆಲವು ರಾಜಕೀಯ ಪಕ್ಷಗಳಲ್ಲಿ ಡಿಎಂಕೆ ಒಂದು.

ಚುನಾವಣಾ ಆಯೋಗವು ಇಂದು ಚುನಾವಣಾ ಬಾಂಡ್‌ಗಳ ಕುರಿತು ತಾಜಾ ಡೇಟಾವನ್ನು ಬಹಿರಂಗಗೊಳಿಸಿದೆ. ಈ ವಿವರಗಳು ಏಪ್ರಿಲ್ 12, 2019ರ ಹಿಂದಿನ ಅವಧಿಯದ್ದಾಗಿವೆ. ಈ ದಿನಾಂಕದ ನಂತರದ ಚುನಾವಣಾ ಬಾಂಡ್ ವಿವರಗಳನ್ನು ಕಳೆದ ವಾರ ಚುನಾವಣಾ ಸಮಿತಿಯು ಸಾರ್ವಜನಿಕಗೊಳಿಸಿದೆ. ಏಪ್ರಿಲ್ 12, 2019ರ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಸೀಲ್ಡ್ ಕವರ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿವೆ ಎಂದು ಚುನಾವಣಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಅಂಕಿಅಂಶಗಳ ಪ್ರಕಾರ, ಆಡಳಿತಾರೂಢ ಬಿಜೆಪಿಯು 2018ರಲ್ಲಿ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದ ಒಟ್ಟಾರೆಯಾಗಿ 6,986.5 ಕೋಟಿ ರೂ. ಬಾಂಡ್‌ಗಳನ್ನು ಸ್ವೀಕರಿಸಿದೆ. ತೃಣಮೂಲ ಕಾಂಗ್ರೆಸ್ ಎರಡನೇ ಅತಿ ದೊಡ್ಡ ಸ್ವೀಕೃತದಾರ- ರೂ. 1,397 ಕೋಟಿ. ನಂತರ ಕಾಂಗ್ರೆಸ್- ರೂ. 1,334 ಕೋಟಿ. ಬಿಆರ್‌ಎಸ್- 1,322 ಕೋಟಿ ರೂ. ಮತ್ತು ಒಡಿಶಾದ ಆಡಳಿತ ಪಕ್ಷ ಬಿಜೆಡಿ ₹944.5 ಕೋಟಿ. ಡಿಎಂಕೆ ದೇಣಿಗೆ ಪಡೆದವರಲ್ಲಿ ಆರನೇ ಅತಿ ದೊಡ್ಡ ಪಕ್ಷ.

ಸ್ಯಾಂಟಿಯಾಗೊ ಮಾರ್ಟಿನ್‌ ಸಂಸ್ಥೆ ಜಾರಿ ನಿರ್ದೇಶನಾಲಯದ ಪರಿಶೀಲನೆಯ ಅಡಿಯಲ್ಲಿದೆ. ಡಿಎಂಕೆ ಪಕ್ಷ ಬಹಿರಂಗಪಡಿಸಿದ ₹656.5 ಕೋಟಿ ಎಲೆಕ್ಟೋರಲ್ ಬಾಂಡ್ ರಸೀದಿಗಳಲ್ಲಿ 77 ಪ್ರತಿಶತದಷ್ಟು ಕೊಡುಗೆಯನ್ನು ಈತನ ಫ್ಯೂಚರ್ ಗೇಮಿಂಗ್ ನೀಡಿದೆ. ಫ್ಯೂಚರ್ ಗೇಮಿಂಗ್ ಖರೀದಿಸಿದ ಉಳಿದ ₹859 ಕೋಟಿ ಮೌಲ್ಯದ ಬಾಂಡ್‌ಗಳ ಫಲಾನುಭವಿಗಳು ಯಾವ ಪಕ್ಷಗಳು ಎಂಬ ಮಾಹಿತಿ ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ: Electoral Bonds: ₹1368 ಕೋಟಿ ದೇಣಿಗೆ ನೀಡಿದ ‘ಲಾಟರಿ ಕಿಂಗ್’ ಯಾರು?

Exit mobile version