Site icon Vistara News

ವಿಸ್ತಾರ ಸಂಪಾದಕೀಯ: ಡಿಜಿಟಲ್‌ ಇಂಡಿಯಾ ಬಗೆಗೆ ಬಿಲ್‌ ಗೇಟ್ಸ್‌ ಪ್ರಶಂಸೆ ಸ್ಫೂರ್ತಿದಾಯಕ

Modi and billgates

ಭಾರತ ಭೇಟಿಯಲ್ಲಿರುವ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ (Bill Gates) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಭಾರತದ ಅಭಿವೃದ್ಧಿ, ಕೃತಕ ಬುದ್ಧಿಮತ್ತೆಯ ಬಳಕೆ, ತಂತ್ರಜ್ಞಾನದ ಬಳಕೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಈ ವೇಳೆ ಬಿಲ್‌ ಗೇಟ್ಸ್‌ ಅವರು ಭಾರತದ ಡಿಜಿಟಲ್‌ ತಂತ್ರಜ್ಞಾನದ ಅಳವಡಿಕೆ, ಜಾರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆ, ಪ್ರಾಮುಖ್ಯತೆ ಕುರಿತು ನರೇಂದ್ರ ಮೋದಿ ಅವರು ಬಿಲ್‌ ಗೇಟ್ಸ್‌ ಅವರಿಗೆ ವಿವರಿಸಿದ್ದಾರೆ. “ಭಾರತವು ಡಿಜಿಟಲ್‌ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಮಹಿಳೆಯರು ಕೂಡ ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತವು ಮುಂದಿದೆ” ಎಂದು ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ʼಡಿಜಿಟಲ್‌ ಇಂಡಿಯಾʼ ಎಂಬುದು ಒಂದು ದೂರಗಾಮಿ ಕನಸು. ಡಿಜಿಟಲ್‌ ಪಾವತಿಯಲ್ಲಂತೂ ಭಾರತವೇ ಕಿಂಗ್.‌ 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ ಭಾರತವು ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ. ಜಾಗತಿಕವಾಗಿ ನಡೆಯುವ ರಿಯಲ್‌ ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ! ಭಾರತೀಯ ರಿಸರ್ವ್ ಬ್ಯಾಂಕಿನ ತಜ್ಞರ ಪ್ರಕಾರ, ಭಾರತದ ಡಿಜಿಟಲ್ ಪಾವತಿ ವಲಯವು ಮೌಲ್ಯ ಮತ್ತು ಪರಿಮಾಣ ಎರಡರಲ್ಲೂ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಇದು ದೇಶದ ಪಾವತಿ ಪರಿಸರ ವ್ಯವಸ್ಥೆಯ ಶಕ್ತಿ ಮತ್ತು ವ್ಯಾಪಕವಾದ ಸ್ವೀಕಾರವನ್ನು ಎತ್ತಿ ತೋರಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಪರಿಣಾಮವೇ ಈಗ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಇದೇನೂ ಸುಲಭದ ನಡಿಗೆಯಾಗಿರಲಿಲ್ಲ. ಭಾರತದಲ್ಲಿ ಬಡವರು, ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರೆಲ್ಲ ನೋಟು ಬಳಸದೆ ಡಿಜಿಟಲ್ ವ್ಯವಹಾರ ನಡೆಸಲು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದ ಸಾಮಾನ್ಯ ಜನರೇ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವಹಿವಾಟಿಗೆ ಇಳಿದರು. ಎಳನೀರು ಮಾರುವವರು, ಚಪ್ಪಲಿ ಹೊಲಿಯುವವರು, ರಸ್ತೆ ಬದಿ ತರಕಾರಿ ಮಾರುವವರೂ ಈಗ QR ಕೋಡ್ ಬಳಸಿ ಡಿಜಿಟಲ್ ಮೂಲಕವೇ ವ್ಯವಹರಿಸುತ್ತಿದ್ದಾರೆ. ಡಿಜಿಟಲ್‌ ಪಾವತಿಯಿಂದ ಅನುಕೂಲಗಳು ಸಾಕಷ್ಟಿವೆ. ಸರ್ಕಾರಿ ಯೋಜನೆಗಳು ಫಲಾನುಭವಿಗಳನ್ನು ನೇರವಾಗಿ ತಲುಪುತ್ತಿರುವುದು ಈ ಪಾವತಿ ಮೂಲಕವೇ ಆಗಿವೆ. ತೆರಿಗೆ ವಂಚನೆ ತಡೆಗಟ್ಟಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಎಲ್ಲ ಹಣದ ವಹಿವಾಟುಗಳೂ ಡಿಜಿಟಲ್‌ ಆಗಿಬಿಡುವ ಸಂಭವ ಇರುವುದರಿಂದ, ನಾವು ಆ ಹಾದಿಯಲ್ಲಿ ಶೀಘ್ರ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

ಆನ್‌ಲೈನ್ ಮೂಲಸೌಕರ್ಯ ಸುಧಾರಣೆ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಸೇವೆಗಳನ್ನು ವಿದ್ಯುನ್ಮಾನವಾಗಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಭಾರತ ಸರ್ಕಾರ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿತು. ತಂತ್ರಜ್ಞಾನದ ಡೊಮೇನ್‌ನಲ್ಲಿ ದೇಶವನ್ನು ಡಿಜಿಟಲ್ ಆಗಿ ಸಶಕ್ತಗೊಳಿಸುವ ಗುರಿಯನ್ನು ಹೊಂದಿರುವ ಇದನ್ನು ಪ್ರಧಾನಿ ಮೋದಿ 2015ರಲ್ಲಿ ಆರಂಭಿಸಿದ್ದರು. ಡಿಜಿಟಲ್ ಇಂಡಿಯಾ ಮಿಷನ್ ದೇಶದ ಗ್ರಾಮೀಣ ಪ್ರದೇಶಗಳನ್ನು ಹೈಸ್ಪೀಡ್ ಇಂಟರ್ನೆಟ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುವ ಯೋಜನೆಗಳನ್ನು ಒಳಗೊಳ್ಳುವ ಒಂದು ಉಪಕ್ರಮ. ಡಿಜಿಟಲ್ ಅಳವಡಿಕೆಯ ವೇದಿಕೆಯಲ್ಲಿ ಜಾಗತಿಕವಾಗಿ ಅಗ್ರ 2 ದೇಶಗಳಲ್ಲಿ ಭಾರತ ಸ್ಥಾನ ಪಡೆದಿದೆ.

ಡಿಜಿಟಲ್ ಇಂಡಿಯಾ ಉಪಕ್ರಮದಿಂದ ಸಮಾಜದಲ್ಲಿ ಹಣದ ವಹಿವಾಟಿನಲ್ಲಿ ಪಾರದರ್ಶಕತೆ ಬರುತ್ತದೆ. ಸರ್ಕಾರಿ ಕೆಲಸಗಳು ಸೇರಿದಂತೆ ಹಲವು ಹತ್ತು ಕ್ಷೇತ್ರದಲ್ಲಿ ನಡೆಯುವ ಕೆಲಸಗಳು ಪಾರ್ದರ್ಶಕ ಹಾಗೂ ಚುರುಕಾಗುತ್ತವೆ. ಒಟ್ಟಾರೆಯಾಗಿ ಜನಜೀವನದ ಮಟ್ಟ ಸುಧಾರಿಸುತ್ತದೆ. ಗ್ಯಾಸ್ ಸಬ್ಸಿಡಿ, ಪಿಂಚಣಿ, ಆರೋಗ್ಯ ವಿಮೆ ಇತ್ಯಾದಿಗಳಲ್ಲಿ ಆಗುತ್ತಿದ್ದ ವಿಳಂಬ ಮತ್ತು ಹಣಕಾಸು ಏರುಪೇರುಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿವೆ. ʼಡಿಜಿಟಲ್ ಇಂಡಿಯಾʼದ ಮೂಲ ಉದ್ದೇಶಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು ಹೋದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಭಾರತ ಮಾದರಿ ದೇಶವಾಗಿ ನಿಲ್ಲಬಹುದು. ಆದರೆ ಇದರಲ್ಲಿರುವ ಕೆಲವು ಅನನುಕೂಲಗಳು ಮತ್ತು ವಂಚನೆಯ ಸಾಧ್ಯತೆಗಳೂ ಇದ್ದು, ಇವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು.

Exit mobile version