Site icon Vistara News

Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ

Parliament Sessions

ಬೆಂಗಳೂರು: ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ನಾಯಕರು ಹಿಂದೂಗಳನ್ನು ಅಪಮಾನಿಸಿದ್ದಾರೆ ಎಂಬುದಾಗಿ ಆಡಳಿತಾರೂಢ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಸಂಸತ್​ ಅಧಿವೇಶನದಲ್ಲಿ (Parliament Sessions) ರಾಹುಲ್ ಗಾಂಧಿ ಆರ್​ಎಸ್​ಎಸ್​ ಮತ್ತು ಬಿಜೆಪಿ ವಿರುದ್ಧ ಆಡಿರುವ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭಾರತೀಯ ಜನತಾ ಪಕ್ಷ ಸೋಮವಾರ ಬಲವಾದ ತಿರುಗೇಟು ನೀಡಿದ್ದಾರೆ. ಸಂಸತ್​ನಲ್ಲಿ ಸಂವಿಧಾನದ ಪ್ರತಿ ಮತ್ತು ಶಿವ, ಪ್ರವಾದಿ ಮೊಹಮ್ಮದ್, ಯೇಸುಕ್ರಿಸ್ತ ಮತ್ತು ಗುರುನಾನಕ್ ದೇವ್ ಸೇರಿದಂತೆ ಧಾರ್ಮಿಕ ಆರಾಧಕರ ಫೋಟೋಗಳನ್ನು ಪ್ರದರ್ಶಿಸಿದ್ದ ರಾಹುಲ್ ಗಾಂಧಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆಎಸ್​ಎಸ್​ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಅದಾದ ಬಳಿಕ ತಿರುಗೇಟು ನೀಡಿರುವ ಬಿಜೆಪಿ ಹಿಂದೂಗಳನ್ನು ಅಪಮಾನಿಸಲಾಗುತ್ತಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ನಾಯಕನ ರಾಹುಲ್ ಗಾಂಧಿಯ ಮಾತುಗಳಿಗೆ ಪ್ರತಿರೋಧ ವ್ಯಕ್ತಪಡಿಸಲು ಪ್ರಧಾನಿ ಮೋದಿ ಎರಡು ಬಾರಿ ಸಂಸತ್​ನಲ್ಲಿ ಎದ್ದು ನಿಂತ ಪ್ರಸಂಗವೂ ನಡೆಯಿತು. ಬಳಿಕ ಮಾತನಾಡಿದ ಅವರು ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

ಸರ್ಕಾರವು ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಕಳೆದ ತಿಂಗಳು ತಮ್ಮ ಪ್ರಮಾಣವಚನದ ವೇಳೆ “ಜೈ ಸಂವಿಧಾನ್” ಎಂದು ಎಂದು ರಾಹುಲ್ ಗಾಂಧಿ ಹೇಳಿದ್ದರು. ಸಂಸತ್​ನಲ್ಲಿ ಮಾತನಾಡಿದ ಅವರು ಬಿಜೆಪಿಯವರು ನನ್ನ ನಂತರ ‘ಜೈ ಸಂವಿಧಾನ್’ ಎಂದು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಆರೋಪ ಹೊತ್ತಿರುವ ಬಿಜೆಪಿ ಮತ್ತು ಆರ್​ಎಸ್​ಎಸ್​​ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವುದು ಸಂಸತ್​​ನಲ್ಲಿ ಗದ್ದಲಕ್ಕೆ ಪ್ರಚೋದನೆ ಉಂಟು ಮಾಡಿತು. ನಮ್ಮೆಲ್ಲರ ಮಹಾಪುರುಷರು ಅಹಿಂಸೆಯ ಬಗ್ಗೆ ಮಾತನಾಡಿದ್ದರು. ಆದರೆ) ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ದ್ವೇಷದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಹೀಗಾಗಿ ನೀವು ನೀವು ಹಿಂದೂ ಅಲ್ಲ ಎಂದು ರಾಹುಲ್ ಆರೋಪಿಸಿದ್ದರು. ಇದು ಗದ್ದಲಕ್ಕೆ ಕಾರಣವಾಯಿತು.

ಇದನ್ನೂ ಓದಿ: Parliament Sessions: ಮೋದಿ ಆತ್ಮದ ಜೊತೆ ಪರಮಾತ್ಮನ ಸಂವಹನ; ರಾಹುಲ್‌ ಗಾಂಧಿ ವ್ಯಂಗ್ಯ

ಭಾರತದ ಕಲ್ಪನೆಯ ಮೇಲೆ ಪೂರ್ಣ ಪ್ರಮಾಣದ ಮತ್ತು ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನ ಮತ್ತು ಸಂವಿಧಾನದ ಮೇಲಿನ ದಾಳಿಯನ್ನು ವಿರೋಧಿಸಿದ ವಿರೋಧ ಪಕ್ಷದ ನಾಯಕರ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಕೆಲವರು ಇನ್ನೂ ಜೈಲಿನಲ್ಲಿದ್ದಾರೆ ಎಂಬುದಾಗಿಯೂ ಆರೋಪಿಸಿದರು.

ಶಿವನ ಚಿತ್ರ ಪ್ರದರ್ಶನ

ಶಿವನ ಚಿತ್ರವನ್ನು ನೋಡುವ ಹಿಂದೂಗಳು ಎಂದಿಗೂ ಭಯ ಮತ್ತು ದ್ವೇಷ ಹರಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಆದರೆ ಬಿಜೆಪಿ ದಿನದ 24 ಗಂಟೆಯೂ ಭಯ ಮತ್ತು ದ್ವೇಷ ಹರಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಅದೇ ರೀತಿ ರಾಹುಲ್​ ಪ್ರವಾದಿ ಮೊಹಮ್ಮದ್ ಮತ್ತು ಗುರುನಾನಕ್ ದೇವ್ ಅವರ ಚಿತ್ರಗಳನ್ನು ಪ್ರದರ್ಶಿಸಿದರು. ಇದಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಅವರು ಅವರನ್ನು ತರಾಟೆಗೆ ತೆಗೆದುಕೊಂಡರು.

‘ಅಭಯ ಮುದ್ರೆ’ ಕಾಂಗ್ರೆಸ್ ನ ಚಿಹ್ನೆ. ಇದು ಸುರಕ್ಷತೆಯ ಸಂಕೇತವಾಗಿದೆ, ಇದು ಭಯವನ್ನು ಹೋಗಲಾಡಿಸುತ್ತದೆ ಮತ್ತು ಹಿಂದೂ ಧರ್ಮ, ಇಸ್ಲಾಂ ಧರ್ಮ, ಸಿಖ್ ಧರ್ಮ, ಬೌದ್ಧ ಧರ್ಮ ಮತ್ತು ಇತರ ಭಾರತೀಯ ಧರ್ಮಗಳಲ್ಲಿ ದೈವಿಕ ರಕ್ಷಣೆ ನೀಡುತ್ತದೆ ಎಂದು ರಾಹುಲ್ ಹೇಳಿದ್ದಾರೆ.

ಅಮಿತ್ ಶಾ ಪ್ರತಿಕ್ರಿಯೆ
ಮೋದಿ ಜಿ, ಬಿಜೆಪಿ ಮತ್ತು ಆರ್​ಎಸ್​ಎಸ್​ ಇಡೀ ಹಿಂದೂ ಸಮುದಾಯವಲ್ಲ ಎಂದು ರಾಹುಲ್ ಗಾಂಧಿ ಕೂಗಿದಕ್ಕೆ ಗೃಹ ಮಂತ್ರಿ ಅಮಿತ್ ಶಾಳ ಪ್ರತಿಕ್ರಿಯೆ ನೀಡಿದ್ದಾರೆ. ಹಿಂಸಾಚಾರವನ್ನು ಯಾವುದೇ ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು ಎಂದು ಅವರು ಘೋಷಿಸಿದರು. ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ದಂಗೆಗಳನ್ನು ಉಲ್ಲೇಖಿಸಿದರು. ಎಲ್ಲಾ ಹಿಂದೂಗಳು ಹಿಂಸೆಯ ಪ್ರೇರಕರು ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಶಾ ಹೇಳಿದರು.

ರಾಜ್ಯಸಭೆಯಲ್ಲಿ ತಮ್ಮದೇ ಆದ ಬಿಕ್ಕಟ್ಟಿನ ಕ್ಷಣಗಳನ್ನು ಎದುರಿಸಿದ ನಂತರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಕಾಂಗ್ರೆಸ್ ನಾಯಕ ಸ್ಪಷ್ಟವಾಗಿ ಸುಳ್ಳು ಹೇಳಿದ್ದಾರೆ ಎಂದು ಅವರು ಆರೋಪಿಸಿದರು. ಅಧಿಕಾರ ಹಿಡಿಯಲು ವಿರೋಧ ಪಕ್ಷಗಳ ನಾಯಕರು ದೋಷಪೂರಿತ ತರ್ಕ ಮಾಡುತ್ತಾರೆ. ಅವರು 2024ರ ಚುನಾವಣೆಯ ಜನಾದೇಶವನ್ನು (ಸತತ ಮೂರನೇ ಸೋಲು) ಅರ್ಥಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

Exit mobile version