ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election) ರಾಜ್ಯದ 22 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರುಗಳು ಸೋಮವಾರ ಅಂತಿಮಗೊಂಡಿದೆ ಎನ್ನಲಾಗಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (CEC) ಸೋಮವಾರ ಅಭ್ಯರ್ಥಿಗಳನ್ನು ನಿರ್ಧರಿಸಲು ತನ್ನ ಎರಡನೇ ಸಭೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ (Narendra Modi)ನೇತೃತ್ವದ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಕರ್ನಾಟಕದ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿರುವ ಬಿಜೆಪಿ ವರಿಷ್ಠರು 22 ಅಭ್ಯರ್ಥಿಗಳ ಆಯ್ಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದು 28 ಕ್ಷೇತ್ರದ ಬಗ್ಗೆ ಚರ್ಚೆ ಮಾಡಲಾಗಿದೆ. ನಾಳೆ (ಮಂಗಳವಾರ) ಅಥವಾ ನಾಡಿದ್ದು (ಬುಧವಾರ) ಟಿಕೆಟ್ ಘೋಷಣೆಯಾಗಬಹುದು. ಎರಡು ಹಂತದಲ್ಲಿ ಟಿಕೆಟ್ ಘೋಷಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹಾಲಿ ಸಂಸದರಿಗೆ ಟಿಕೆಟ್ ತಪ್ಪುವ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಿಧಾನಸೌಧ ರೌಂಡ್ಸ್: ಬಿಜೆಪಿ, ಕಾಂಗ್ರೆಸ್ ಟಿಕೆಟ್; ಆಗಲಿದೆಯೇ ಹಿಟ್ ವಿಕೆಟ್?
ಪ್ರತಾಪ್, ಕಟೀಲ್ಗೆ ಇಲ್ಲ ಟಿಕೆಟ್, ಮಂಜುನಾಥ್ ಗ್ರಾಮಾಂತರಕ್ಕೆ
ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಅನುಮಾನ ಎನ್ನಲಾಗಿದೆ. ಅವರ ಬದಲಿಗೆ ಯದುವೀರ್ ಒಡೆಯರ್ ಟಿಕೆಟ್ ಪಡೆಯಲಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೂ ಟಿಕೆಟ್ ಕೈ ತಪ್ಪಲಿದೆ. ಅವರ ಬದಲಿಗೆ ಕಿಶೋರ್ ಬೆಟ್ಯಾಡಿ, ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಸಿಗಬಹುದು. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ ಖೂಬಾಗೆ ಟಿಕೆಟ್ ಸಿಗುವುದು ಕೂಡ ಅನುಮಾನ. ಉತ್ತರ ಕನ್ನಡದ ಹಾಲಿ ಸಂಸದರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಗ್ರಾಮಾಂತರಕ್ಕೆ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಮೈತ್ರಿ ಟಿಕೆಟ್ ಪಡೆಯಲಿದ್ದಾರೆ ಎಂಬುದು ಬಹುತೇಕ ನಿಚ್ಚಳವಾಗಿದೆ.
ಶೋಭಾ ಫಿಕ್ಸ್, ಸೋಮಣ್ಣಗೆ ತುಮಕೂರು
ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಬಿಜಾಪುರಕ್ಕೆ ಗೋವಿಂದ ಕಾರಜೋಳ ಟಿಕೆಟ್ ಪಡೆಯಲಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ತುಮಕೂರಿನಲ್ಲಿ ವಿ. ಸೋಮಣ್ಣ ಟಿಕೆಟ್ ಪಡೆಯಲಿದ್ದಾರೆ.
ಚಿತ್ರದುರ್ಗದಲ್ಲಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್, ಹಾವೇರಿಯಲ್ಲಿ ಬಸವರಾಜ್ ಬೊಮ್ಮಾಯಿ ಹಾಗೂ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಹಾಗೂ ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ ಟಿಕೆಟ್ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಗೆ ಜಗದೀಶ್ ಶೆಟ್ಟರ್, ಚಿಕ್ಕೋಡಿಗೆ ರಮೇಶ್ ಕತ್ತಿ ಅಭ್ಯರ್ಥಿಯಾಗಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರ ತೇಜಸ್ವಿ ಸೂರ್ಯ ಅವರಿಗೆ ಉಳಿಯಲಿದೆ. ಬೆಂಗಳೂರು ಸೆಂಟ್ರಲ್ನಲ್ಲಿ ಪಿ.ಸಿ ಮೋಹನ್ ಟಿಕೆಟ್ ಉಳಿಸಿಕೊಳ್ಳಲಿದ್ದಾರೆ. ಪ್ರಲ್ಹಾದ್ ಜೋಶಿಗೆ ಹುಬ್ಬಳ್ಳಿ- ಧಾರವಾಡ ಮತ್ತೆ ಸಿಗಲಿದೆ.
ನಿರಂತರ ಸಭೆ
ಸೋಮವಾರ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳು ಅಭ್ಯರ್ಥಿಗಳ ಆಯ್ಕೆ ಚರ್ಚೆ ನಡೆದಿದೆ.
16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದಾಗ್ಯೂ, ಭೋಜ್ಪುರಿ ಗಾಯಕ-ನಟ ಪವನ್ ಸಿಂಗ್ ಮತ್ತು ಉಪೇಂದ್ರ ರಾವತ್ ಅವರ ಆಯ್ಕೆಯು ವಿವಾದಗಳನ್ನು ಹುಟ್ಟುಹಾಕಿದ ನಂತರ ಅದು ತನ್ನ ಇಬ್ಬರು ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡಿತು.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ದೇಶಾದ್ಯಂತ ಹಲವಾರು ಪಕ್ಷಗಳೊಂದಿಗೆ ಕೈಜೋಡಿಸಿದೆ, ಏಕೆಂದರೆ ಅದು ಹೆಚ್ಚಿನ ಬಹುಮತದ ಮೇಲೆ ಕಣ್ಣಿಟ್ಟಿದೆ.