ಬೆಂಗಳೂರು: ಮುಡಾ ಹಗರಣದಲ್ಲಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು, ಸಂಸದರು ನಗರದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ (BJP-JDS Protest) ನಡೆಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೊಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿ-ಜೆಡಿಎಸ್ ಎರಡೂ ಪಕ್ಷ ಒಂದಾಗಿ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿವೆ. ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸಿಎಂ ಮೇಲೆ ವಿರುದ್ಧ ಅನೇಕ ಭ್ರಷ್ಟಾಚಾರ ಹಗರಣ ಆರೋಪಗಳು ಕೇಳಿ ಬಂದಿವೆ. ಸಿಎಂ ವಿರುದ್ಧ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೋದು ಬಿಟ್ಟು, ಬೆಂಬಲಿಗರು ಹಾಗೂ ಹೈಕಮಾಂಡ್ ಜೊತೆ ಸೇರಿ ಗೂಂಡಾಗಿರಿ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡೋದು ಬಿಟ್ಟು, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಬೆಂಗಳೂರು-ಮೈಸೂರು ಪಾದಯಾತ್ರೆ ವೇಳೆ ಈಗಾಗಲೇ ಮಾತನಾಡಿದ್ದೇವೆ. ತಮ್ಮ ಬೆಂಬಲಕ್ಕೆ ಸಚಿವರು, ಶಾಸಕರು ನಿಲ್ಲುತ್ತಾರೆ ಎನ್ನೋ ಭಂಡತನ ಬಿಡಿ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬನ್ನಿ ಎಂದು ಒತ್ತಾಯಿಸಿದರು.
ನೀವು ನ್ಯಾಯಾಲಯದಲ್ಲಿ ಹೋರಾಟ ಮಾಡಿ, ನಾವು ಬೇಡ ಅನ್ನಲ್ಲ. ಕಾನೂನಾತ್ಮಕವಾಗಿ ಏನೇ ಹೋರಾಟ ಮಾಡಿ, ಆದರೆ, ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿಮ್ಮ ಮುಖವಾಡ ಕಳಚಿದೆ, ರಾಜ್ಯದ ಜನ ನೋಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತೊಲಗಿ ಎಂದು ಆಗ್ರಹಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರೇ ನಿಮ್ಮ ನೇತೃತ್ವದಲ್ಲಿ ಇಷ್ಟೊಂದು ಲೂಟಿ ಆಗುತ್ತಿದೆ ಎಂದು ಜನ ಕೇಳುತ್ತಿದ್ದಾರೆ. ನಾವು ನಿಲುವಳಿ ಸೂಚನೆ ಮಂಡನೆ ಮಾಡಿದ್ದೆವು, ನಾವೇನು ನಿಮಗೆ ಬಹುಮತ ಇಲ್ಲ ಅಂತ ಕೇಳಿರಲಿಲ್ಲ. ಬಹುಮತ ತೆಗೆದುಕೊಂಡು ಏನು ಮಾಡುತ್ತೀರಿ. ಕಾನೂನಾತ್ಮಕವಾಗಿ ನಾವು ಮೊದಲ ಪ್ರಶ್ನೆ ಕೇಳಿದ್ದೆವು, ತಪ್ಪು ಮಾಡಿಲ್ಲ ಅಂತ ಎಳೆಎಳೆಯಾಗಿ ಹೇಳಲು ಇದ್ದ ಅವಕಾಶ ಇತ್ತು. ಅದು ಬಿಟ್ಟು ಹೇಳಿಕೆ ಕೊಡದೆ ಓಡಿಹೋದಿರಿ. ಸರ್ಕಾರದ ಅಧಿಕಾರ ಬಳಸಿಕೊಂಡು, ನಮಗಿಂತ ಮೊದಲು ಹೋಗಿ ಭಾಷಣ ಮಾಡಿದ್ದೀರಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ನೀವೇ ನೇರ ಹೊಣೆ. ರಾಷ್ಟ್ರಪತಿ ಆಡಳಿತ ಈಗಲೇ ಬರಲಿ, ಪೊಲೀಸರ ಕೈ ಕಟ್ಟಿದ್ದೀರಿ, ಬಿಜೆಪಿ-ಜೆಡಿಎಸ್ ಮಾತ್ರವಲ್ಲ, ರಾಜ್ಯದ ಎಲ್ಲಾ ಜನ ಕೂಗುತ್ತಿದ್ದಾರೆ. ಮಾಧ್ಯಮದಲ್ಲಿ ಎಲ್ಲಾ ದಾಖಲೆಗಳನ್ನು ತೋರಿಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ಕೇಳಿರೋದು ಯಾರು? ಟಿ.ಜೆ ಅಬ್ರಹಾಂ, ಒಬ್ಬ ಅಲ್ಪಸಂಖ್ಯಾತ. ಸ್ನೇಹಮಯಿ ಕೃಷ್ಣಾ, ಪ್ರದೀಪ್ ಅವರು ಇದ್ದಾರೆ. ಕಾಗೆ ಬೆಳ್ಳಗಿದೆಯಾ, ಕಪ್ಪಗಿದೆಯಾ ಎಂದು ತೀರ್ಮಾನ ಮಾಡುವುದು ಬಿಜೆಪಿ ಅಲ್ಲ, ನ್ಯಾಯಾಲಯ ಎಂದು ಹೇಳಿದರು.
ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟಾಗ ಹಬ್ಬ ಮಾಡಿದ್ದಿರಿ, ಈಗ ಗಲಾಟೆ ಮಾಡುತ್ತೀರಾ? ಒಂದೇ ಸರ್ಕಾರ, ಒಂದೇ ಮಂತ್ರಿ ಮಂಡಲ, ಒಂದೇ ಕ್ಯಾಬಿನೆಟ್. ಎರಡು ನೀತಿ, ದ್ವಂದ್ವ ಯಾಕೆ? ನಾಗೇಂದ್ರಗೆ ಒಂದು ಕಾನೂನು, ಸಿದ್ದರಾಮಯ್ಯಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ಕಮಾಂಡ್ ಬೆಂಬಲ ಕೋರಲು ಭೇಟಿ
ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ, ತಿಪ್ಪೇಸ್ವಾಮಿ, ಎಂಎಲ್‌ಎ ನಾಡಗೌಡ, ಸಂಸದರಾದ ಪಿ.ಸಿ ಮೋಹನ್, ಲೆಹರ್ ಸಿಂಗ್, ಎಂಟಿಬಿ ನಾಗರಾಜ್, ಅಶ್ವತ್ಥ್ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.