Site icon Vistara News

Anantkumar Hegde : ‘ಸಂವಿಧಾನ ತಿದ್ದುವ’ ಅನಂತ್​ಕುಮಾರ್​ ಹೇಳಿಕೆಯಿಂದ ಬಿಜೆಪಿ ದೂರ; ಚುನಾವಣೆಯಿಂದ ನಿರ್ಬಂಧಿಸಿ ಎಂದ ಸಿದ್ದು

Anantkumar Hegde

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆದ್ದರೆ ಸಂವಿಧಾನವನ್ನು ತಿದ್ದಬಹುದು ಎಂದು ಉತ್ತರ ಕನ್ನಡ ಸಂಸದ ಅನಂತ್​ಕುಮಾರ್ ಹೆಗಡೆ ನೀಡಿರುವ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಹೆಗಡೆ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಗೊಂಡ ಬೆನ್ನಲ್ಲೇ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬಿಜೆಪಿ ಸ್ಪಷ್ಟನೆ ಕೊಟ್ಟಿದೆ.

ಸಂಸದ ಅನಂತ್​ಕುಮಾರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಟ್ವೀಟ್​ ಮೂಲಕ ಬಿಜೆಪಿ ಸ್ಪಷ್ಟನೆ ನೀಡಿದೆ.

ದೇಶದ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಲು ಬಿಜೆಪಿ ಬದ್ಧ. ಈ ಮಾತನ್ನು ಪುನರುಚ್ಚರಿಸುತ್ತಿದ್ದೇವೆ. ಹೆಗಡೆಯವರಿಂದ ಅವರ ಹೇಳಿಕೆ ಕುರಿತು ವಿವರಣೆ ಕೇಳುತ್ತೇವೆ ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.

ಕಾಂಗ್ರೆಸ್​ ಟೀಕೆ

ಸಂವಿಧಾನ ತಿದ್ದುವುದಾಗಿ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಸಂಸದರು ಬಿಜೆಪಿಯ ಅಜೆಂಡಾವನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದೆ. ಈ ಕುರಿತು ಅದು ಟ್ವೀಟ್ ಮಾಡಿ, ‘ನಾಲ್ಕೂವರೆ ವರ್ಷ ಮಲಗಿದ್ದು, ಚುನಾವಣೆ ವೇಳೆ ಎದ್ದು ಬರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಎಂಬ ಕ್ರಿಮಿ ಸಂಸತ್ತಿನಲ್ಲಿ ಕರ್ನಾಟಕದ ಪರ, ಕನಿಷ್ಠ ಪಕ್ಷ ತನ್ನ ಕ್ಷೇತ್ರದ ಪರ ಮಾತಾಡಿದ ಇತಿಹಾಸವೇ ಇಲ್ಲ. ದಲಿತರನ್ನು “ಬೊಗಳುವ ನಾಯಿಗಳು” ಎಂದು ಅವಮಾನಿಸಿದ್ದ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಮೂಲಕ ಬಿಜೆಪಿ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ ಎಂದು ಟೀಕಿಸಿದೆ.

ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ, ರಾಜಕೀಯ ಮಾಡಲು ಮತ್ತು ಅಸ್ತಿತ್ವದಲ್ಲಿ ಇರುವುದಕ್ಕೆ ಬಿಜೆಪಿಗೆ ಅರ್ಹತೆಯೇ ಇಲ್ಲ. ದಲಿತರ ವಿರುದ್ಧ ಸಂವಿಧಾನದ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಯನ್ನು ಈ ರಾಜ್ಯದ ಹಾಗೂ ದೇಶದ ಜನ ತಿರಸ್ಕರಿಸುವುದು ಖಚಿತ ಎಂದು ಕಾಂಗ್ರೆಸ್‌ ಹೇಳಿದೆ.

ಚುನಾವಣೆಯಿಂದ ಅನರ್ಹಗೊಳಿಸಿ : ಸಿದ್ದರಾಮಯ್ಯ

ಅನಂತ ಕುಮಾರ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಹೆಗಡೆಯವರ ಹೇಳಿಕೆ ಸಂವಿಧಾನಕ್ಕಿಂತ ಮೊದಲು ಇದ್ದ ‘ಮನು ಪ್ರಣೀತ’ ಸಂವಿಧಾನವನ್ನು ಜಾರಿಗೊಳಿಸುವ ಬಿಜೆಪಿಯ ದುಷ್ಟ ಆಲೋಚನೆ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಟೀಕಿಸಿದ್ದಾರೆ.

ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಸಂವಿಧಾನದ ವಿರುದ್ಧ ಅನಂತಕುಮಾರ ಹೆಗಡೆಯವರು ಮಾತನಾಡಿರುವುದು ಇದೇ ಮೊದಲ ಬಾರಿ ಅಲ್ಲ. “ಸಂವಿಧಾನವನ್ನು ಬದಲಾಯಿಸಬೇಕು, ಬದಲಾಯಿಸುವುದೇ ನಮ್ಮ ಉದ್ದೇಶ” ಎಂದೆಲ್ಲಾ ಆಗಾಗ ಅವರು ಹೇಳುತ್ತಲೇ ಇದ್ದರು. ಇಲ್ಲಿಯವರೆಗೆ ಬಿಜೆಪಿ ವರಿಷ್ಠರು ಅವರಿಗೆ ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತಾ ಬಂದಿರುವುದನ್ನು ನೋಡಿದರೆ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ಅವರಿಗೆ ಇದೆ ಎನ್ನುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಹೆಗಡೆ ಅಭಿಪ್ರಾಯವನ್ನು ಮೋದಿಯವರು ಒಪ್ಪದೆ ಇದ್ದರೆ ಅವರನ್ನು ಮೊದಲು ಪಕ್ಷದಿಂದ ಕಿತ್ತುಹಾಕಬೇಕು. ಅವರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಹೆಗಡೆ ಅಭಿಪ್ರಾಯಕ್ಕೆ ಪ್ರಧಾನಿಯವರ ಸಹಮತ ಇದೆ ಎಂದರ್ಥ. ಸಾರ್ವಜನಿಕ ಭಾಷಣಗಳಲ್ಲಿ ಸಂವಿಧಾನದ ಮೇಲೆ ಬದ್ಧತೆಯನ್ನು ಸಾರುವ ಮೋದಿ ಅವರ ಮಾತುಗಳು ಬರೀ ಸುಳ್ಳು ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಅನಂತಕುಮಾರ ಹೆಗಡೆಯಂತಹ ಸಂಸದನೊಬ್ಬ ಈ ರೀತಿ ನಿರ್ಭೀತಿಯಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಲು ಸಾಧ್ಯ ಇಲ್ಲ. ಸಂವಿಧಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅನಂತ್ ಕುಮಾರ್ ಹೆಗಡೆ, ಅದೇ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡಿತ ಶಿಕ್ಷಾರ್ಹ ಅಪರಾಧ. ಇದನ್ನು ಲೋಕಸಭಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಹೆಗಡೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಸದರು ನೀಡಿದ ಹೇಳಿಕೆಯೇನು?

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗ್ಡೆ ‘ಸಂವಿಧಾನ ತಿದ್ದುಪಡಿ ಅವಶ್ಯಕತೆ ಇದೆ. ಕಾಂಗ್ರೆಸ್‌ನವರು ಸಂವಿಧಾನದಲ್ಲಿ ಬೇಡವಾದದನ್ನೆಲ್ಲ ಸೇರಿಸಿದ್ದಾರೆ. ಅದರ ತಿದ್ದುಪಡಿ ಮಾಡಬೇಕಿದೆ. ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ. 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದು ಹೇಳಿಕೆ ನೀಡಿದ್ದರು.

Exit mobile version