ಬೆಂಗಳೂರು : ಲೋಕ ಸಭಾ ಚುನಾವಣೆಯಲ್ಲಿ (2024 Lok sabha election) ಬಿಜೆಪಿಗೆ ಏಕೈಕ ಪಕ್ಷವಾಗಿ ಗರಿಷ್ಠ ಸೀಟುಗಳು (239) ಪ್ರಾಪ್ತಿಯಾಗಿರುವ (BJP Vote Share) ಹೊರತಾಗಿಯೂ ಆ ಪಕ್ಷಕ್ಕೆ ಸಣ್ಣ ಮುಖಭಂಗವಾಗಿದೆ. ಯಾಕೆಂದರೆ ಈ ಪಕ್ಷವು ಈ ಹಿಂದಿನ ಎರಡು ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳನ್ನು ಹೋಲಿಸಿದರೆ ಇದು ದೊಡ್ಡ ಹಿನ್ನಡೆ. 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ 2019ರಲ್ಲಿ 303 ಸ್ಥಾನ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಸರಳ ಬಹುಮತಕ್ಕೆ ಬೇಕಾದ 272 ಸೀಟ್ಗಳನ್ನೂ ಪಡೆಯಲಾಗದ ಸ್ಥಿತಿ ತಲುಪಿರುವುದು ಅಚ್ಚರಿ. ಬಿಜೆಪಿಗೆ ಇದು ಪರ್ವಕಾಲದಂತೆ ಕಂಡು ಬಂದಿದ್ದ ಹೊರತಾಗಿಯೂ ವಿಶ್ವದ ಬಲಿಷ್ಠ ರಾಜಕೀಯ ಪಕ್ಷಕ್ಕೆ ಈ ರೀತಿಯ ಹಿನ್ನಡೆಯಾಗಿರುವುದು ಅಚ್ಚರಿ ಹಾಗೂ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಕೂಡ. ಆದಾಗ್ಯೂ ಎನ್ಡಿಎ ಒಕ್ಕೂಟದ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಹಿನ್ನಡೆ ಆ ಪಕ್ಷದ ಅಭಿಮಾನಿಗಳು ಮತ್ತು ಮುಖಂಡರಿಗೆ ಬೇಸರದ ವಿಷಯವಾಗಿರುವ ಹೊರತಾಗಿಯೂ ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿಗೆ ಸಮಾಧಾನವಾಗಿರಬಹುದು. ಯಾಕೆಂದರೆ ಹಿಂದಿನ ಬಾರಿಗೆ ಹೋಲಿಸಿದರೆ (37.34) ಈ ಬಾರಿ 37.37 ಶೇಕಡಾವಾರು ಮತವನ್ನು ಪಡೆದುಕೊಂಡಿದೆ. ಇದು ಬಿಜೆಪಿಗೆ ಸಣ್ಣ ಮಟ್ಟದ ಪ್ರಗತಿಯೇ ಹೌದು. ಆದಾಗ್ಯೂ ಬಿಜೆಪಿ ನಿರಾಸೆಯ ಭಾವ ಹೊಂದಬೇಕಾದ ಅನಿವಾರ್ಯತೆಗೆ ಒಳಗಾಗಿದೆ. 36ರಷ್ಟು ಸೀಟುಗಳನ್ನು ಹಿಂದಿನ ಚುನಾವಣೆಗಿಂತ ಕಡಿಮೆ ಪಡೆದಿದೆ.
ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು
ಬಿಜೆಪಿ ಈ ಬಾರಿ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಉಮೇದು ಹೊಂದಿತ್ತು. ಮತಗಟ್ಟೆ ಸಮೀಕ್ಷೆಗಳು ಕೂಡ ಅದಕ್ಕೆ ಪೂರಕವಾಗಿರುವ ಸಂಕೇತವನ್ನೇ ನೀಡಿದ್ದವು. ಆದರೆ ಫಲಿತಾಂಶ ಬೇರೆಯೇ ಆಗಿತ್ತು. ಹೀಗಾಗಿ ಬಿಜೆಪಿ ಪಾಲಿಗೆ ಇದು ಅಚ್ಚರಿ ಹಾಗೂ ಆಘಾತ.
ಕಾಂಗ್ರೆಸ್ಗೆ ಲಾಭ
2019ಕ್ಕೆ ಹೋಲಿಸಿದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇಕಡಾವಾರು ಮತ ಹಂಚಿಕೆ ಗಮನಾರ್ಹ. ಹಳೆಯ ಪಕ್ಷದ ಮತ ಹಂಚಿಕೆ ಶೇಕಡಾ 22.34ರಷ್ಟಾಗಿದೆ. ಇದು 2019 ರ ಶೇಕಡಾ 19.49 ಕ್ಕಿಂತ ಸುಮಾರು ಶೇಕಡಾ 3 ಅಂಕಗಳಷ್ಟು ಹೆಚ್ಚಾಗಿದೆ. ಅಂದರೆ ಕೇವಲ 3 ಶೇಕಡಾ ಏರಿಕೆಯಿಂದ 48 ಸೀಟ್ಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಹೀಗಾಗಿ ಭಾರತದ ಚುನಾವಣೆಯಲ್ಲಿ ಸಣ್ಣ ಬದಲಾವಣೆಯೂ ಪಕ್ಷವೊಂದಕ್ಕೆ ಹೆಚ್ಚು ಸೀಟುಗಳನ್ನು ತಂದುಕೊಡಬಹುದು ಎಂಬುದಕ್ಕೆ ಸೂಕ್ತ ಉದಾಹರಣೆಯಾಗಿದೆ.
ಸೀಟು ಹಂಚಿಕೆಯ ವಿಷಯದಲ್ಲಿ ಕಾಂಗ್ರೆಸ್ ಈ ಬಾರಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 52 ಸ್ಥಾನಗಳನ್ನು ಗೆದ್ದಿದ್ದರೆ, ಈ ಚುನಾವಣೆಯಲ್ಲಿ ಅದು 100 ಸ್ಥಾನಗಳನ್ನು ದಾಟುತ್ತಿದೆ.
ಈ ಬಾರಿ ಬಿಜೆಪಿ ಮೈತ್ರಿಕೂಟದ ಒಟ್ಟು ಮತ ಹಂಚಿಕೆ ಶೇ.45ರಷ್ಟಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಶೇಕಡಅ 42 ಶೇಕಡಾವಾರು ಹಂಚಿಕೆ ಪಡೆದುಕೊಂಡಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಬಣ ದೊಡ್ಡ ಹಿನ್ನಡೆ ಉಂಟಾಗಿದೆ. ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 29 ಮತ್ತು ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 39ರಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.