ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (BJP India) ತನ್ನ ಅಭ್ಯರ್ಥಿಗಳ 8ನೇ ಪಟ್ಟಿಯನ್ನು (BJP’s 8th List Of Candidates) ಶನಿವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮಾಜಿ ಐಪಿಎಸ್ ಅಧಿಕಾರಿ ದೇಬಶಿಶ್ ಧರ್ ಪಶ್ಚಿಮ ಬಂಗಾಳದ ಬಿರ್ಭುಮ್ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮಾಜಿ ಕೇಂದ್ರ ಸಚಿವೆ ಪ್ರಣೀತ್ ಕೌರ್ ಪಂಜಾಬ್ನ ಪಟಿಯಾಲಾದಿಂದ ಕಣಕ್ಕೆ ಇಳಿಯಲಿದ್ದಾರೆ.
2010ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ದೇಬಶಿಶ್ ಧರ್ ಅವರು ಮಾರ್ಚ್ 20ರಂದು ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಮತ್ತು ಸಾಮಾಜಿಕ ಗುರಿಗಳನ್ನು ಸಾಧಿಸಲು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದರು. ಪಶ್ಚಿಮ ಬಂಗಾಳದಿಂದ ಇಬ್ಬರು, ಒಡಿಶಾದಿಂದ ಮೂವರು ಮತ್ತು ಪಂಜಾಬ್ಗಾಗಿ ಆರು ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಹೆಸರಿಸಿದೆ. ಒಟ್ಟಾರೆಯಾಗಿ ಈವರೆಗೆ 411 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದನ್ನೂ ಓದಿ : Lok Sabha Election 2024: ಅಳಿಯ ಕಾಂಗ್ರೆಸ್ ಸೇರ್ಪಡೆ; ಶ್ರೀನಿವಾಸ್ ಪ್ರಸಾದ್ ನಿಲುವೇನು?
ಪಶ್ಚಿಮ ಬಂಗಾಳದಲ್ಲಿ ಗಮನ ಸೆಳೆಯುವ ಡೈಮಂಡ್ ಹಾರ್ಬರ್ ಮತ್ತು ಅಸನ್ಸೋಲ್ ಸ್ಥಾನಗಳಿಗೆ ಕೇಸರಿ ಪಕ್ಷವು ಇನ್ನೂ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಈ ಬಾರಿ ಪಕ್ಷವು ನಟ ಸನ್ನಿ ಡಿಯೋಲ್ ಅವರನ್ನು ಬದಲಿಸಿದೆ ಮತ್ತು ದಿನೇಶ್ ಸಿಂಗ್ ಬಬ್ಬು ಅವರಿಗೆ ಗುರುದಾಸ್ಪುರದ ಟಿಕೆಟ್ ನೀಡಿದೆ.
ಅದೇ ರೀತಿ ಬಂಗಾಳದ ಸರ್ಕಾರಿ ವೈದ್ಯ ಪ್ರಣತ್ ಟುಡು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಜಾರ್ಗ್ರಾಮ್ನಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲಿದ್ದಾರೆ. ಪಂಜಾಬ್ನ ಲುಧಿಯಾನದಿಂದ ರವ್ನೀತ್ ಸಿಂಗ್ ಬಿಟ್ಟು ಅವರು, ಫರಿದ್ಕೋಟ್ನಿಂದ ಹಂಸರಾಜ್ ಹನ್ಸ್, ಅಮೃತಸರದಿಂದ ತರಣ್ಜಿತ್ ಸಂಧು, ಜಲಂಧರ್ನಿಂದ ಸುಶೀಲ್ ಕುಮಾರ್ ರಿಂಕು, ಕಂಧಮಾಲ್ನಿಂದ ಸುಕಾಂತ ಕುಮಾರ್ ಸೇರಿದಂತೆ ಇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಅಮೃತಸರದಿಂದ ಚುನಾವಣಾ ಕಣಕ್ಕೆ ಇಳಿದಿರುವುದು ಬಿಜೆಪಿ ಪಾಲಿಗೆ ಲಾಭದಾಯಕವಾಗಿದೆ.
ಮೋದಿಯಿಂದ ಉತ್ತರಾಖಂಡ ಪ್ರಚಾರಕ್ಕೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 2 ರಂದು ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಮೂಲಕ ಉತ್ತರಾಖಂಡದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಉತ್ತರಾಖಂಡದ ಐದು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಐದು ಸ್ಥಾನಗಳು 2015ರಿಂದ ಆಡಳಿತಾರೂಢ ಬಿಜೆಪಿ ವಶದಲ್ಲಿವೆ.