ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟಕ್ಕೆ (Blast in Bengaluru) ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (National Investigation Agency) ಚೆನ್ನೈಯಲ್ಲಿ ಹಲವು ಕಡೆ ದಾಳಿ ನಡೆಸಿ ಐವರನ್ನು ಬಂಧಿಸಿದೆ. ಚೆನ್ನೈನ ಸಿದ್ದಾಯಳ್ ಪೇಟೆ (Siddyalpet) ಮತ್ತು ಬಿಡಾರಿಯಾರ್ (bidariyar)ಟೆಂಪಲ್ ಬಳಿ ಎನ್‌ಐಎ ಕೆಲವು ಮನೆಗಳಿಗೆ ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದು ಈಗ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎನ್‌ಐಎ ತಕ್ಷಣದಿಂದಲೇ ಕಾರ್ಯಾಚರಣೆ ಆರಂಭ ಮಾಡಿದೆ. ಸ್ಪೋಟ ಪ್ರಕರಣದ ಬಳಿಕ ಎನ್‌ಐಎ ಚೆನ್ನೈನಲ್ಲಿರುವ ತನ್ನ ಪೇಯ್ಡ್ ಇನ್ಪಾರ್ಮರ್ (paid informer)ಗಳನ್ನು ಅಲರ್ಟ್ ಮಾಡಿತ್ತು. ಅವರು ನೀಡಿದ ಮಾಹಿತಿಯ ಮೇರೆಗೆ ಚೆನ್ನೈಯಲ್ಲಿ ಐವರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಶದಲ್ಲಿರುವವರು ಬೆಂಗಳೂರಿನ ನಝೀರ್ ಜತೆ ಸಂಪರ್ಕ ಹೊಂದಿದ್ದರು!
ಚೆನ್ನೈನಲ್ಲಿ ವಶಕ್ಕೆ ಪಡೆದವರಲ್ಲಿ ಕೆಲವರು ಬೆಂಗಳೂರಿನ ಆರ್.ಟಿ ನಗರ ನಿವಾಸಿ, ಕುಖ್ಯಾತ ಭಯೋತ್ಪಾದಕ ನಝೀರ್ ಎಂಬಾತನ ಜತೆ ಸಂಪರ್ಕ ಹೊಂದಿದವರಾಗಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಏರಿಯಾ ಬಳಿ ಇರುವ ಸಂಶುದ್ದೀನ್ ಎಂಬಾತನ ಮನೆ ಮೇಲೆ ದಾಳಿ ಮಾಡಲಾಗಿದೆ.
ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಜೀರ್ ಒಬ್ಬ ಕುಖ್ಯಾತ ಭಯೋತ್ಪಾದಕನಾಗಿದ್ದು, ಜೈಲಿನಲ್ಲಿ ಇರುತ್ತಲೇ ತನ್ನ ಷಡ್ಯಂತ್ರಗಳನ್ನು ರೂಪಿಸುತ್ತಾನೆ. ಯಾವುದೋ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವ ಮುಸ್ಲಿಂ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡು ಅವರ ಬ್ರೇನ್ ವಾಷ್ ಮಾಡಿ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುವುದು ಈತನ ಗೇಮ್ ಪ್ಲ್ಯಾನ್.
ಇದನ್ನೂ ಓದಿ : NIA Raid: ಬೆಂಗಳೂರು ಜೈಲಿನಲ್ಲಿ ಉಗ್ರ ದಾಳಿಗೆ ಸ್ಕೆಚ್; 7 ರಾಜ್ಯಗಳಲ್ಲಿ ಎನ್‌ಐಎ ದಾಳಿ
ವರ್ಷದ ಹಿಂದೆ ಆರ್ ಟಿ ನಗರದ ಸುಲ್ತಾನ್ ಪಾಳ್ಯದ ಮನೆಯೊಂದರಲ್ಲಿ ಲೈವ್ ಗ್ರನೇಡ್ , ಪಿಸ್ತೂಲ್ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು,. ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.
ಅಂದು ಸೈಯದ್ ಸೊಹೇಲ್, ಜಾಹಿದ್, ಮುದಾಸಿರ್, ಉಮರ್, ಫೈಜಲ್ ಎಂಬುವರನ್ನು ಗ್ರನೇಡ್, ಪಿಸ್ತೂಲ್, ಜೀವಂತ ಗುಂಡುಗಳ ಜೊತೆಗೆ ಅರೆಸ್ಟ್ ಮಾಡಲಾಗಿತ್ತು. ಬಳಿಕ ಏಳು ಪಿಸ್ತೂಲ್, ನಲವತ್ತೈದು ಜೀವಂತ ಗುಂಡುಗಳು, ಹದಿನೈದು ಮೊಬೈಲ್, 20ಕ್ಕೂ ಹೆಚ್ಚು ಸಿಮ್ ಕಾರ್ಡ್, ಒಂದು ಡ್ಯಾಗರ್ ವಶಕ್ಕೆ ಪಡೆಯಲಾಗಿತ್ತು.
ಇದೀಗ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲೂ ನಜೀರ್‌ನಿಂದ ಪ್ರೇರಿತರಾದ ದುಷ್ಟರೇ ಭಾಗಿಯಾಗಿದ್ದಾರೆ ಎಂಬ ಸಣ್ಣ ಸಂಶಯವಿದೆ. ಅದರ ಭಾಗವಾಗಿಯೇ ಈಗ ನಜೀರ್ ಜತೆ ಸಂಬಂಧ ಹೊಂದಿರುವ ವ್ಯಕ್ತಿಗಳ ವಿಚಾರಣೆ ನಡೆಯಲಿದೆ. ಪರಪ್ಪನ ಅಗ್ರಹಾರದಲ್ಲಿರುವ ನಜೀರ್‌ನನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.