Site icon Vistara News

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಶಾರಿಕ್‌?; ತೀವ್ರ ವಿಚಾರಣೆ, ಯಾರೀ ಕರ್ನಲ್‌!?

Blast in Bengaluru Cooker blast

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್‌ ಸ್ಫೋಟ (Blast in Bengaluru) ಸಂಭವಿಸಿ 70 ಗಂಟೆಗಳೇ ಕಳೆದಿವೆ. ರಾಜ್ಯ ಪೊಲೀಸರ ಹಲವಾರು ತಂಡಗಳು ಸಿಸಿಟಿವಿ ಫೂಟೇಜ್‌ ಸೇರಿದಂತೆ ಎಲ್ಲ ದಿಕ್ಕುಗಳಲ್ಲೂ ತನಿಖೆ ನಡೆಯುತ್ತಿದೆ. ಈ ನಡುವೆ ರಾಜ್ಯ ಸರ್ಕಾರ (Karnataka Government) ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (National Investigation Agency) ವಹಿಸಿದೆ.

ಇದರ ನಡುವೆ ಮಾರ್ಚ್‌ 1ರಂದು ಮಧ್ಯಾಹ್ನ 12.55ರ ಹೊತ್ತಿಗೆ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೂ 2022ರ ನವೆಂಬರ್‌ 19ರಂದು ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ (Mangalore Cooker Blast) ಏನಾದರೂ ಸ್ವಾಮ್ಯತೆ ಇದೆಯೇ ಎನ್ನುವ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೂ ಪೊಲೀಸರು ಈ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟದ ರೂವಾರಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮೊಹಮ್ಮದ್‌ ಶಾರಿಖ್‌ (Mohammad Shariq). ಅಂದು ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಹಿಡಿದುಕೊಂಡು ಹೋಗುತ್ತಿದ್ದಾಗ ರಸ್ತೆ ಮಧ್ಯೆ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಶಾರಿಖ್‌ ತೀವ್ರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಆತನನ್ನು ಈಗ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಾರಿಕ್‌ನ ವಿಚಾರಣೆ ನಡೆಸಿದ್ದಾರೆ. ಆದರೆ, ಶಾರಿಕ್ ಕಡೆಯಿಂದ ಪೊಲೀಸರಿಗೆ ಉಪಯುಕ್ತ ಆಗುವ ಉತ್ತರಗಳೇನು ಸಿಕ್ಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Blast In Bangalore : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಎನ್ಐಎಗೆ

ಕರ್ನಲ್ ಹೆಸರಿನ ಹ್ಯಾಂಡ್ಲರ್ ಬೆನ್ನು ಬಿದ್ದ NIA & IB

ಈ ನಡುವೆ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಸಂಬಂಧ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನದಲ್ಲಿರುವ ಪೊಲೀಸರು ಕರ್ನಲ್‌ ಎಂಬ ಟೆರರಿಸ್ಟ್‌ ಹ್ಯಾಂಡ್ಲರ್‌ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಬಂಧಿತರಾಗಿರುವ ಉಗ್ರರು ಮತ್ತು ಶಂಕಿತರ ಹಿಂದೆ ಇದೇ ಹ್ಯಾಂಡ್ಲರ್ ಕರ್ನಲ್ ಇದ್ದಾನೆಂದು ಹೇಳಲಾಗುತ್ತಿದೆ. ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ಬಳ್ಳಾರಿ, ಬೆಂಗಳೂರು ಸೇರಿದಂತೆ ಹಲವೆಡೆ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಸೂಚನೆ ನೀಡುತ್ತಾ ಉಗ್ರ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ವ್ಯಕ್ತಿ ಇದೇ ಕರ್ನಲ್ ಎನ್ನಲಾಗಿದೆ.

ರಾಜ್ಯದ ಸುಮಾರು 50ಕ್ಕೂ ಅಧಿಕ ಯುವಕರು ಕರ್ನಲ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಮನಪರಿವರ್ತನೆಯಾಗಿ ಯಾವುದೇ ರೀತಿಯ ಉಗ್ರ ಕೃತ್ಯ ಎಸಗಲು ಸಜ್ಜಾಗಿರುವ ಯುವಕರು ಎನ್ನಲಾಗಿದೆ. ಟೆಲಿಗ್ರಾಂ, ವಿಕ್ಕರ್ ಮೊದಲಾದ ಸಾಮಾಜಿಕ ಜಾಲತಾಣಗಳ‌ ಮೂಲಕ ಅವರೊಂದಿಗೆ ಸಂಪರ್ಕ ಹೊಂದಿರುವ ಕರ್ನಲ್ ಯಾರು ಯಾವಾಗ ಯಾವ ಕೃತ್ಯ ನಡೆಸಬೇಕು ಎನ್ನುವ ಪ್ಲ್ಯಾನ್‌ ಮಾಡುತ್ತಾನೆ ಎನ್ನಲಾಗಿದೆ.

ಹಾಗಿದ್ದರೆ ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಕೂಡಾ ಕರ್ನಲ್‌ ಸಂಪರ್ಕದಲ್ಲಿದ್ದ ವ್ಯಕ್ತಿಯೇ ಆಗಿರಬಹುದಾ ಎಂಬ ಸಂಶಯವಿದೆ. ಆದರೆ, ಆದರೆ ಈ ಕರ್ನಲ್ ಯಾರು, ಎಲ್ಲಿದ್ದಾನೆ ಅನ್ನೋದು ಮಾತ್ರ ಸಂಪರ್ಕದಲ್ಲಿರುವ ಯುವಕರಿಗೆ ಗೊತ್ತಿಲ್ಲ ಎನ್ನಲಾಗಿದೆ. ಆತನನ್ನು ಪತ್ತೆ ಹಚ್ಚಿದರೆ ಎಲ್ಲ ಉಗ್ರ ಕೃತ್ಯಗಳ ಹಿನ್ನೆಲೆ ಬಯಲಾಗಲಿದೆ.

Exit mobile version