Site icon Vistara News

ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Boat

Boat with over 130 passengers fleeing cholera outbreak capsizes, 94 killed, 26 missing In Mozambique

ಮಾಪುಟೊ: ಕರ್ನಾಟಕದಲ್ಲಿ ಕಾಲರಾ ಭೀತಿ ಎದುರಾಗಿದೆ. ಬೆಂಗಳೂರಿನ ಹಾಸ್ಟೆಲ್‌ಗಳಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ರಾಜ್ಯಾದ್ಯಂತ ಹಲವು ಕಾಲರಾ ಪ್ರಕರಣಗಳು (Cholera Outbreak) ಕೂಡ ದಾಖಲಾಗಿವೆ. ಇದರ ಬೆನ್ನಲ್ಲೇ, ಮೊಜಾಂಬಿಕ್‌ (Mozambique) ದೇಶದಲ್ಲಿ ಕಾಲರಾ ಭೀತಿಯು 94 ಜನರ ಪ್ರಾಣವನ್ನೇ ತೆಗೆದಿದೆ. ಹೌದು, ಕಾಲರಾ ಭೀತಿಯಿಂದಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಹಡಗು ಮುಳುಗಿದ್ದು (Boat Captized), 94 ಜನ ಮೃತಪಟ್ಟಿದ್ದಾರೆ. ಇನ್ನೂ 26 ಜನ ನಾಪತ್ತೆಯಾಗಿದ್ದಾರೆ.

ಹೌದು, ಮೊಜಾಂಬಿಕ್‌ನ ಉತ್ತರ ಕರಾವಳಿ ಭಾಗದಲ್ಲಿ 130 ಜನ ಪ್ರಯಾಣಿಸುತ್ತಿದ್ದ ಹಡಗು ಮುಳುಗಿದೆ. ಇದುವರೆಗೆ 94 ಶವಗಳು ಪತ್ತೆಯಾಗಿವೆ. ಉಳಿದ 26 ಜನರ ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಂಪುಲ ಪ್ರಾಂತ್ಯದ ಲುಂಗಾ ಪ್ರದೇಶದಿಂದ ಮೊಜಾಂಬಿಕ್‌ ದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಮೊಜಾಂಬಿಕ್‌ ಸಾಗರ ಸಾರಿಗೆ ಇಲಾಖೆ (INTRASMAR) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ಬಿಬಿಸಿ ವರದಿ ಮಾಡಿದೆ.

ಸಮುದ್ರ ತೀರದಲ್ಲಿ ಶವಗಳ ರಾಶಿ

ಹಡಗು ಮುಳುಗಲು ಕಾರಣವೇನು?

ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ತೆರಳುತ್ತಿದ್ದುದೇ ಅದು ಮುಳುಗಲು ಕಾರಣ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ 130 ಪ್ರಯಾಣಿಕರು ತೆರಳುತ್ತಿದ್ದರು. ಅವರ ಭಾರಿ ಪ್ರಮಾಣದ ಬ್ಯಾಗ್‌ಗಳು, ವಸ್ತುಗಳು, ಸಲಕರಣೆಗಳನ್ನು ಹಡಗಿನಲ್ಲಿ ತುಂಬಲಾಗಿತ್ತು. ಅತಿಯಾದ ಭಾರ ತಾಳದೆ ಹಡಗು ಮುಳುಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಜಾಂಬಿಕ್‌ ಸಮುದ್ರದ ತೀರದಲ್ಲಿ ಪ್ರಯಾಣಿಕರ ಶವಗಳ ರಾಶಿಯ ವಿಡಿಯೊ ಕೂಡ ಹರಿದಾಡಿದ್ದು, ದೃಶ್ಯವು ಮನಕಲಕುವಂತಿದೆ.

ಎಲ್ಲೆಡೆ ಕಾಲರಾ ಭೀತಿ, ವಲಸೆ ಜಾಸ್ತಿ

ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ ಸೇರಿ ಹಲವು ದೇಶಗಳಲ್ಲಿ ಇತ್ತೀಚೆಗೆ ಕಾಲರಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರಿಂದಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ, ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಹಡಗಿನಲ್ಲಿ ತೆರಳುವಾಗ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ನೋಂದಣಿ ಮಾಡಿಕೊಳ್ಳದ ಹಡಗಿನಲ್ಲಿ ಪ್ರಯಾಣಿಸುವುದು ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತಿವೆ. ಇವು ಅಪಾಯಗಳಿಗೂ ಎಡೆಮಾಡಿಕೊಡುತ್ತಿವೆ ಎಂಬುದಕ್ಕೆ ಹಡಗು ಮುಳುಗಿದ್ದೇ ಕಾರಣವಾಗಿದೆ.

ಇದನ್ನೂ ಓದಿ: Cholera Outbreak: ರಾಜ್ಯದಲ್ಲಿ ಹರಡುತ್ತಿದೆ ಕಾಲರಾ, ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆ; ಎಚ್ಚರಿಕೆಯೇ ಮದ್ದು

Exit mobile version