ವಿಜಯಪುರ: ವಿಜಯಪುರ (Vijayapura news) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದು (Borewell Tragedy) ಸತತ 20 ಗಂಟೆಗಳ ಕಾರ್ಯಾಚರಣೆಯ (Child rescue) ನಂತರ ಸುರಕ್ಷಿತವಾಗಿ ಬದುಕುಳಿದು ಬಂದಿರುವ ಸಾತ್ವಿಕ್ (Satwik) ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಸಾತ್ವಿಕ್‌ನ ಸುರಕ್ಷತೆ ಹಾಗೂ ಚೇತರಿಕೆಗಾಗಿ ಆತನ ತಾಯಿ ಪೂಜಾ ದೇವರಿಗೆ ಹಲವು ಹರಿಕೆ ಹೇಳಿಕೊಂಡಿದ್ದು, ಅವುಗಳನ್ನು ಸಾತ್ವಿಕ್‌ನ ಹೆಸರು ಬದಲಾವಣೆಯೂ ಒಂದಾಗಿದೆ. ಮಗನನ್ನು ಬದುಕಿಸಿಕೊಡುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿ ಪೂಜಾ, ಮನೆಯಿಂದ ಮಠದವರೆಗೆ ದೀಡ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿ ಹೇಳಿಕೊಂಡಿದ್ದರು.
ಹೀಗಾಗಿ ಬರುವ 28ರಂದು ಪೂಜಾ ತಮ್ಮ ಮನೆಯಿಂದ ಲಚ್ಯಾನ್ ಸಿದ್ದಲಿಂಗ ಮಹಾರಾಜರ ಮಠದ ವರೆಗೆ ದೀಡ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ಮರುನಾಮಕರಣ ಮಾಡಲಿದ್ದಾರೆ. “ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ. ರಕ್ಷಣೆ ಮಾಡಿದ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇನೆ,” ಎಂದು ಪೂಜಾ ಹೇಳಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೂ ಧನ್ಯವಾದ ತಿಳಿಸಿದ್ದಾರೆ.
ಸಾತ್ವಿಕ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪಲ್ಸ್, ಉಸಿರಾಟ ನಾರ್ಮಲ್ ಇದೆ. ಎರಡೂ ತೋಳಿಗೆ ಕೊಂಚ ಗಾಯವಾಗಿದ್ದು, ಆಯಿಂಟ್‌ಮೆಂಟ್ ಹಚ್ಚಲಾಗಿದೆ. ವೈದ್ಯರು ಬಾಲಕನ ಎಕ್ಸ್‌ರೇ ಮಾಡಿಸಿದ್ದು, ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಎಂದಿದ್ದಾರೆ. ಸಿಟಿ ಸ್ಕ್ಯಾನ್ ವೇಳೆ ಮೆದುಳು ಹಾಗೂ ಹೊಟ್ಟೆಯ ಸ್ಕ್ಯಾನ್ ಮಾಡಲಾಗಿದ್ದು, ರಿಪೋರ್ಟ್ ನಾರ್ಮಲ್ ಎಂದಿದ್ದಾರೆ.
ಚಿಕ್ಕಮಕ್ಕಳ ತಜ್ಞರಾದ ಡಾ. ರೇಣುಕಾ ಪಾಟೀಲ್, ಡಾ ಸುನೀಲ್ ರೂಡಗಿ, ಡಾ. ಶೈಲಶ್ರೀ ಪಾಟೀಲ್, ಡಾ. ರವಿ ಬರಡೊ, ಡಾ. ಸಾವಳಗಿ ಸೇರಿ ಐದು ಮಕ್ಕಳ ತಜ್ಞರಿಂದ ಮಗುವಿನ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನೇತ್ರ, ಎಲುಬು, ಕೀಲು, ನೇತ್ರ ತಜ್ಞರು, ಇ.ಎನ್.ಟಿ ತಜ್ಞರು, ಮಕ್ಕಳ ಶಸ್ತ್ರ ಚಿಕಿತ್ಸಕರಿಂದಲೂ ತಪಾಸಣೆ ನಡೆಸಲಾಗಿದೆ.
“ಮಗುವಿನ ಎಲ್ಲಾ ರಿಪೋರ್ಟ್ ನಾರ್ಮಲ್ ಆಗಿವೆ. ಸಾತ್ವಿಕ್ ಸಂಪೂರ್ಣ ಆರೋಗ್ಯವಾಗಿದ್ದಾನೆ. ಪಾಲಕರಾದ ಪೂಜಾ – ಸತೀಶ್ ಅವರಿಂದಲೂ ಮಗು ಆರೋಗ್ಯದ ಕುರಿತು ಸಂತಸವಿದೆ. ಆದಾಗ್ಯೂ ನಾವು 48 ತಾಸುಗಳ ಕಾಲ ಅಬ್ಸರ್ವೇಶನ್‌ನಲ್ಲಿ ಇಟ್ಟಿರುತ್ತೇವೆ,” ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ ಡಿ.ಎಚ್.ಓ ಬಸವರಾಜ ಹುಬ್ಬಳ್ಳಿ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆ (Vijayapura District) ಇಂಡಿ ತಾಲೂಕಿನ ಲಚ್ಯಾಣ (Lachyan) ಗ್ರಾಮ ಮಾತ್ರವಲ್ಲ, ಇಡೀ ರಾಜ್ಯವೇ ಒಂದು ಸಲ ನಿಟ್ಟುಸಿರು ಬಿಟ್ಟಿತ್ತು. ಕೊಳವೆಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಸಾತ್ವಿಕ್‌ನನ್ನು ಸತತ ಕಾರ್ಯಾಚರಣೆ (Borewell Tragedy) ಮೂಲಕ ಹೊರತೆಗೆಯಲಾಗಿತ್ತು. ಕೊಳವೆಬಾವಿಯಲ್ಲಿ ಸಿಲುಕಿದ ಕಾರಣಕ್ಕೆ ಸಾತ್ವಿಕ್‌ಗೆ ದೇಹದ ಮೇಲೆ ಯಾವುದೇ ಸಣ್ಣ-ಪುಟ್ಟ ಗಾಯಗಳಾಗಿಲ್ಲ. ಆದರೂ ಮುನ್ನೆಚ್ಚರಿಕಾ ದೃಷ್ಟಿಯಿಂದ ದೇಹದೊಳಗೆ ಏನಾದರೂ ಹಾನಿಯಾಗಿದೆಯೇ ಎಂಬುದನ್ನು ತಿಳಿಯಲು ಇಂಡಿ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ರವಾನೆ ಮಾಡಲಾಗಿದೆ.
ಸಾತ್ವಿಕ್‌ಗೆ ಬ್ರೇನ್ ಸ್ಕ್ಯಾನಿಂಗ್
ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಸಾತ್ವಿಕ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮಗು ಆರೋಗ್ಯವಾಗಿದೆ. ಯಾವುದೇ ರೀತಿಯ ಮೂಳೆ ಮುರಿತ ಮತ್ತು ಗಾಯಗಳಿಲ್ಲ. ನಿಗಾವಹಿಸುವಿಕೆ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾಹಿತಿ ನೀಡಿದ್ದಾರೆ.
ಮಗು ಬದುಕಿ ಬಂದಿದ್ದು ಒಂದು ರೀತಿಯ ಪವಾಡ ಎಂದು ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಭಾವೋದ್ವೆಗಕ್ಕೊಳಗಾದರು. ಮಗು ಹೊರಗೆ ಬರುತ್ತಿದ್ದಂತೆ ನಗುತ್ತಲೇ ಇತ್ತು. ಮಗುವಿನ ಹೃದಯದ ಬಡಿತ ನರ್ಮಲ್ ಆಗಿದೆ. ತುಂಬಾ ಧೈರ್ಯದಿಂದ 18 ತಾಸು ಕುಳಿತಿದೆ. ಸದ್ಯ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತಲೆ ಕೆಳಗಾಗಿ ಬಿದ್ದ ಕಾರಣ ಮೆದುಳಿಗೆ ಪೆಟ್ಟು ಬಿದ್ದಿರಬಹುದು ಎಂಬ ಅನುಮಾನವಿದೆ. ಹೀಗಾಗಿ ಬ್ರೇನ್ ಸ್ಕ್ಯಾನಿಂಗ್ ಮಾಡಬೇಕಿದೆ. ಸ್ಕ್ಯಾನಿಂಗ್ ಬಳಿಕ ಮತ್ತೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.
ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುತ್ತಿರುವುದು ಬೇಸರ- ಸಿಎಂ ಸಿದ್ದರಾಮಯ್ಯ
ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ. ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ – ಹಾರೈಕೆಗಳು ಫಲಿಸಿದೆ, ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.