Site icon Vistara News

Plane Crash: ವಿಮಾನ ಪತನ; 62 ಪ್ರಯಾಣಿಕರು ಸೇರಿ ಎಲ್ಲ 70 ಮಂದಿಯ ದುರ್ಮರಣ, Videoಗಳು ಇವೆ

Plane Crash

ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ (Brazil Plane Crash) ಸಂಭವಿಸಿದೆ. 62 ಪ್ರಯಾಣಿಕರು ಸೇರಿ ಒಟ್ಟು 70 ಜನರಿದ್ದ ವಿಮಾನವು ಬ್ರೆಜಿಲ್‌ನ ಸಾವೋ ಪೌಲೋದಲ್ಲಿ (Sao Paulo) ಪತನಗೊಂಡಿದ್ದು (Plane Crash), ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪತನಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ಭೀಕರವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲ 70 ಜನರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಸ್ಕಾವೆಲ್‌ನಿಂದ ಗುವಾರುಲ್ಹೋಸ್‌ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ವೇಳೆ ಸಾವೋ ಪೌಲೋ ರಾಜ್ಯದ ವಿನ್ಹೇಡೋ ಎಂಬ ಪ್ರದೇಶದಲ್ಲಿ ವಿಮಾನವು ಪತನಗೊಂಡಿದೆ. ಅದೃಷ್ಟವಶಾತ್‌, ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ. ಆದರೂ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪತನಗೊಂಡ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಬ್ರೆಜಿಲ್‌ನಲ್ಲಿಯೇ ಇದು ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ದುರಂತ ಎಂದು ತಿಳಿದುಬಂದಿದೆ.

ವಿಮಾನದಲ್ಲಿ 62 ಪ್ರಯಾಣಿಕರು ಹಾಗೂ 8 ವಿಮಾನದ ಸಿಬ್ಬಂದಿ ಇದ್ದರು. ವಿಮಾನ ಹಾರಾಟ ನಡೆಸುತ್ತಿರುವಾಗಲೇ ನಿಯಂತ್ರಣ ತಪ್ಪಿದೆ. ಅದು ಬೀಳುವ ಮುನ್ನ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದರು ಎನ್ನಲಾಗಿದೆ. ವಿಮಾನ ಪತನವಾಗುವ ಭೀಕರ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಮಾನದ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ. ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶವಗಳನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ, ವಿಮಾನ ಪತನಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದಾಗ್ಯೂ, ಪ್ರಕರಣವನ್ನು ಸರ್ಕಾರವು ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: Plane Crash: ನೇಪಾಳದಲ್ಲಿ 19 ಪ್ರಯಾಣಿಕರಿದ್ದ ವಿಮಾನ ಪತನ; ವಿಡಿಯೋ ಇದೆ

Exit mobile version