Site icon Vistara News

BSNL 5G Service : ಬಿಎಸ್​ಎನ್​​ಎಲ್​ 5ಜಿ ಸಿಮ್​ಕಾರ್ಡ್​ಗಳು ವಿತರಣೆಗೆ ರೆಡಿ​; ಬೆಂಗಳೂರಿನಲ್ಲಿಯೂ ಲಭ್ಯವೇ?

BSNL 5G Service

ಬೆಂಗಳೂರು : ಐದನೇ ಪೀಳಿಗೆಯ ನೆಟ್ವರ್ಕ್​ (5G) ಸೇವೆ ನೀಡುತ್ತಿರುವ ಜಿಯೊ ಹಾಗೂ ಏರ್​ಟೆಲ್​ ಇತ್ತೀಚಿಗೆ ತಮ್ಮ ರೀಚಾರ್ಜ್​ ಪ್ಲ್ಯಾನ್​ಗಳ ದರ ಹೆಚ್ಚಿಸಿ ಗ್ರಾಹಕರಿಗೆ ಆಘಾತ ಕೊಟ್ಟಿತ್ತು. ಹೀಗಾಗಿ ಜನರು ಕಡಿಮೆ ಬೆಲೆಗೆ ಸೇವೆ ಕೊಡುವ ಬಿಎಸ್​ಎನ್​ಎಲ್ ಕಡೆಗೆ ವಾಲುವ ಯೋಚನೆ ಮಾಡಿದ್ದರು. ಅವರೆಲ್ಲರಿಗೂ ಇಲ್ಲೊಂದು ಶುಭ ಸುದ್ದಿಯಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್​​ಎನ್​ಎಲ್ 5ಜಿ ನೆಟ್ವರ್ಕ್​ಗೆ (BSNL 5G Service) ಪ್ರವೇಶ ಪಡೆದಿದೆ. ಬಿಎಸ್​ಎನ್​​ಎಲ್ ಈ ಸೇವೆಯ ಟ್ರಯಲ್​ ರನ್​ ಮಾಡುತ್ತಿದ್ದು ಬಹುತೇಕ ಯಶಸ್ವಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಗ್ರಾಹಕರಿಗೆ ಲಭ್ಯವಾಗಲಿದೆ. ಬಿಎಸ್​ಎನ್​ಎಲ್​ ಕಚೇರಿಗಳಿಗೆ 5ಜಿ ಸಿಮ್​ಗಳು ಇದಾಗಲೇ ತಲುಪಿದೆ ಎಂಬ ವಿಡಿಯೊಗಳು ಹರಿದಾಡುತ್ತಿವೆ.

ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್ ಮೂಲಕ ವೀಡಿಯೊವೊಂದರನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು 5 ಜಿ ನೆಟ್ವರ್ಕ್​ ಮೂಲಕ ವೀಡಿಯೊ ಕಾಲ್ ಮಾಡಿದ್ದಾರೆ. “ಬಿಎಸ್ಎನ್ಎಲ್​​ನ 5ಜಿ ಫೋನ್ ಕರೆಯನ್ನು ಪರೀಕ್ಷಿಸಿದೆ ” ಎಂದು ಸಚಿವರು ಪೋಸ್ಟ್​​ನಲ್ಲಿ ಬರೆದಿದ್ದಾರೆ. ಅವರು ಸೆಂಟರ್​ ಫಾರ್​ ಡೆವಲಪ್​ಮೆಂಟ್​ ಆಫ್​ ಟೆಲಿಮ್ಯಾಟಿಕ್ಸ್​​ ಸಂಸ್ಥೆಯಲ್ಲಿ ಈ ಪರೀಕ್ಷೆ ನಡೆಸಿದ್ದಾರೆ.

ಸಚಿವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕರೆಯ ಮಾಡಿ ಮಾತನಾಡಿದ ಮಹಿಳೆಯನ್ನು ಕೋಣೆಯಿಂದ ಹೊರಗೆ ಹೋಗುವಂತೆ ಕೇಳುವುದನ್ನು ಕೇಳಬಹುದು. ಆ ಹೆಂಗಸು ಹೊರಗೆ ಹೋದಾಗಲೂ ಕರೆ ನಿರಂತರವಾಗಿ ಬರುತ್ತಿತ್ತು. ಜ್ಯೋತಿರಾದಿತ್ಯ ಅವರು ತಕ್ಷಣ ಈ ಸೇವೆಯನ್ನು ನೋಡಿ ಖುಷಿ ಪಟ್ಟರು. ಆ ಕಡೆ ಇದ್ದ ಮಹಿಳೆ “ಹೌದು, ಸರ್, ನಾನು ನಿಮ್ಮ ಮಾತನ್ನು ಕೇಳಬಲ್ಲೆ” ಎಂದು ಹೇಳಿದ್ದಾರೆ.

ದೊಡ್ಡ ಮಟ್ಟದ ಸಿದ್ಧತೆ

ಸಾರ್ವಜನಿಕ ವಲಯದ ಉದ್ಯಮವಾಗಿರುವ ಬಿಎಸ್​​ಎನ್​​ 4 ಜಿ ಮತ್ತು 5 ಜಿ ಕಡೆಗೆ ಹೊರಳುವ ನಿಟ್ಟಿನಲ್ಲಿ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಿದೆ. ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟಪ್ರೈ ಸಸ್ (ವಿಒಐಸಿಇ) ವರದಿ ಪ್ರಕಾರ, ದೇಶೀಯ ಟೆಲಿಕಾಂ ಕಂಪನಿಗಳ ಗುಂಪು ಬಿಎಸ್ಎನ್ಎಲ್ ಮೂಲಸೌಕರ್ಯವನ್ನು ಬಳಸಿಕೊಂಡು 5 ಜಿ ಸೇವೆ ನೀಡಲು ಸಿದ್ಧವಾಗಿದೆ. ಈ ಉದ್ಯಮ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಸ್ ನೆಟ್ವರ್ಕ್ಸ್, ವಿಎನ್ಎಲ್, ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್ಎಫ್​​ಎಸಿಎಲ್ ಸೇರಿವೆ. ಇದರ ಜತೆಗೆ ಬಿಎಸ್​ಎನ್​​ಎಲ್​ 5ಜಿಯೂ ಗ್ರಾಹಕರಿಗೆ ಸಿಗಲಿದೆ.

ಸಾಮರ್ಥ್ಯ ಎಷ್ಟು?

ಕೇಂದ್ರ ಸರ್ಕಾರವು 700 ಮೆಗಾಹರ್ಟ್ಸ್, 2200 ಮೆಗಾಹರ್ಟ್ಸ್, 3300 ಮೆಗಾಹರ್ಟ್ಸ್ ಮತ್ತು 26 ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಬ್ಯಾಂಡ್​ಗಳನ್ನು ಬಿಎಸ್ಎನ್ಎಲ್​ಗೆ ಹಂಚಿಕೆ ಮಾಡಿದೆ. ಈ ನೆಟ್ವರ್ಕ್​ ಸಾಮರ್ಥ್ಯದಲ್ಲಿ ಬಿಎಸ್ಎನ್ಎಲ್ ದೇಶಾದ್ಯಂತ 4 ಜಿ ಮತ್ತು 5 ಜಿ ಸೇವೆ ನೀಡಲಿದೆ.

ಬಿಎಸ್​ಎನ್​ಎಲ್​ 5ಜಿ ಸಿಮ್​ ವಿಡಿಯೊ ವೈರಲ್

ಮಹಾರಾಷ್ಟ್ರದ ಬಿಎಸ್ಎನ್ಎಲ್ ಕಚೇರಿಯ ಉದ್ಯೋಗಿಗಳು 5ಜಿ ಸಿಮ್ ಅನ್​ಬಾಕ್ಸಿಂಗ್ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ವೀಡಿಯೊದಲ್ಲಿ, ಬಿಎಸ್ಎನ್ಎಲ್ ಸಿಮ್​​ಗಳನ್ನು 5 ಜಿ ಲೋಗೋದೊಂದಿಗೆ ಸಿದ್ಧಪಡಿಸಲಾಗಿದೆ. ಇದು ಪರೀಕ್ಷಾರ್ಥ ಸಿಮ್​ ಅಥವಾ ಸಾರ್ವಜನಿಕರ ವಿತರಣೆಗಾ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಸಂಸ್ಥೆಯು ಇನ್ನೂ 5 ಜಿ ಮತ್ತು 4 ಜಿ ಸೇವೆಗಳನ್ನು ಅಧಿಕೃತ ಪ್ರಾರಂಭಿಸಿಲ್ಲ.

ಬೆಂಗಳೂರಿನಲ್ಲಿ ಆರಂಭವಾಗಲಿದೆ ಪರೀಕ್ಷೆ

ಬಿಎಸ್​ಎನ್​​ಎಲ್​ 5 ಸೇವೆ ಬೆಂಗಳೂರಿನಲ್ಲಿಯೂ ಪರೀಕ್ಷೆಗೆ ಒಳಪಡಲಿವೆ. ಜತೆಗೆ ರಾಷ್ಟ್ರರಾಜಧಾನಿ ದೆಹಲಿ ಹಾಗೂ ದಕ್ಷಿಣದ ಪ್ರಮುಖ ನಗರ ಚೆನ್ನೈನ ಜನಪ್ರಿಯ ಸ್ಥಳಗಳಲ್ಲಿ 5 ಜಿ ಸೇವೆಗಳ ಪ್ರಯೋಗಗಳು ನಡೆಯಲಿವೆ. ಬೆಂಗಳೂರಿನ ಸರ್ಕಾರಿ ಕಚೇರಿ, ದೆಹಲಿಯ ಸಂಚಾರ್ ಭವನ, ಕನೌಟ್ ಪ್ಲೇಸ್, ಜೆಎಎನ್​​ಯು ಕ್ಯಾಂಪಸ್ ಮತ್ತು ಐಐಟಿ ದೆಹಲಿ, ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್, ಗುರುಗ್ರಾಮ್ ಮತ್ತು ಐಐಟಿ ಹೈದರಾಬಾದ್​ನ ಆಯ್ದ ಸ್ಥಳಗಳಲ್ಲಿ 5 ಸೇವೆಯ ಪರೀಕ್ಷೆ ನಡೆಯಲಿದೆ.

ಬಿಎಸ್ಎನ್ಎಲ್​ಗೆ ಬಜೆಟ್​ನಲ್ಲಿ ಅನುದಾನ

ಈ ವರ್ಷದ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಬಿಎಸ್ಎನ್ಎಲ್ ಪುನರುಜ್ಜೀವನಗೊಳಿಸುವ ಯೋಜನೆ ಪ್ರಕಟಿಸಲಾಗಿತ್ತು. ಅದಕ್ಕಾಗಿ 82 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಲಾಗಿದೆ. ಟೆಲಿಕಾಂ ಕಂಪನಿಯ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಸಂಪೂರ್ಣವಾಗಿ ಭಾರತದಲ್ಲಿಯೇ ಅಭಿವೃದ್ಧಿಪಡಿಸಿದ 4 ಜಿ ಮತ್ತು 5 ಜಿ ತಂತ್ರಜ್ಞಾನವನ್ನು ಹೊರತರಲು ಅನುಕೂಲವಾಗುವಂತೆ ಈ ಹಣವನ್ನು ಬಳಸಲಾಗುವುದು ಎಂದು ಹೇಳಲಾಗಿತ್ತು. ಈ ಕ್ರಮವು ಭವಿಷ್ಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಗಮನಾರ್ಹ ಸವಾಲನ್ನು ಒಡ್ಡಬಹುದು. ಪ್ರಮುಖವಾಗಿ ಈಗಾಗಲೇ ಈ ಕ್ಷೇತ್ರದಲ್ಲಿ ಬಲಾಢ್ಯ ಎನಿಸಿಕೊಂಡಿರುವ ಜಿಯೊ ಹಾಗೂ ಏರ್​ಟೆಲ್​ಗೆ ಸವಾಲೊಡ್ಡಲಿದೆ.

ಇದನ್ನೂ ಓದಿ: Rajeev Chandrasekhar: 10 ವರ್ಷಗಳಲ್ಲಿ 80 ಕೋಟಿ ಮಂದಿ ಬಡತನದಿಂದ ಹೊರಗೆ; ವಿಶ್ವಸಂಸ್ಥೆಯಲ್ಲೇ ಮೋದಿ ಆಡಳಿತಕ್ಕೆ ಪ್ರಶಂಸೆ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಿಂದ ಎದುರಾಗುವ ಸ್ಪರ್ಧೆಯ ಹಿನ್ನೆಲೆಯಲ್ಲಿ, ಖಾಸಗಿ ಕಂಪನಿಗಳು ತಮಗೆ ಆಗಲಿರುವ ಗಣನೀಯ ನಷ್ಟವನ್ನು ತಪ್ಪಿಸಲು ಪ್ರತಿ ಬಳಕೆದಾರರಿಂದ ಆದಾಯ ಹೆಚ್ಚಿಸಲು ಪ್ರಯತ್ನಿಸಬಹುದು.

ಬಿಎಸ್ಎನ್ಎಲ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ

5ಸೇವೆಯ ಭರವಸೆ ಹಾಗೂ ಖಾಸಗಿ ಕಂಪನಿಗಳ ಟ್ಯಾರಿಫ್​ ಹೆಚ್ಚಳದ ಕಾರಣಕ್ಕೆ ಕಳೆದ 30 ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹೊಸ ಸಿಮ್​ಗಳು ಮಾರಾಟವಾಗಿವೆ ಎಂದು ಆಂಧ್ರಪ್ರದೇಶದ ಬಿಎಸ್ ಎನ್ ಎಲ್ ಘೋಷಿಸಿದೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಆಂಧ್ರಪ್ರದೇಶದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ವಿವಿಧ ಟೆಲಿಕಾಂ ವಲಯಗಳಲ್ಲಿ ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚುತ್ತಿದೆ.

ಖಾಸಗಿ ಟೆಲಿಕಾಂ ಕಂಪನಿಗಳು ಪರಿಷ್ಕೃತ ದರ ಯೋಜನೆಗಳನ್ನು ಪರಿಚಯಿಸುವುದರೊಂದಿಗೆ ಬಳಕೆದಾರರು ತಮ್ಮ ಸಿಮ್ ಅನ್ನು ಬಿಎಸ್ಎನ್ಎಲ್​ಗೆ ಪೋರ್ಟ್​ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಪೂರಕವಾಗಿ ಬಿಎಸ್​ಎನ್​​ಎಲ್​ ಸಿಮ್ ಕಾರ್ಡ್ ಪೋರ್ಟಿಂಗ್​ಗೆ ಅನುಕೂಲವಾಗುವಂತೆ ದೇಶಾದ್ಯಂತ ವಿವಿಧ ನಗರಗಳಲ್ಲಿ ಕೇಂದ್ರಗಳನ್ನು ತೆರೆದಿದೆ.

Exit mobile version