ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಬಹುಜನ ಸಮಾಜ ಪಕ್ಷವು (BSP List) 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ವಾರಾಣಸಿಯಲ್ಲಿ (Varanasi) ನರೇಂದ್ರ ಮೋದಿ ಅವರ ವಿರುದ್ಧ ಅಥರ್ ಜಮಾಲ್ ಲರಿ (Athar Jamal Lari) ಅವರನ್ನು ಮಾಯಾವತಿ (Mayawati) ಅವರು ಕಣಕ್ಕಿಳಿಸಿದ್ದಾರೆ. ಮತ್ತೊಂದೆಡೆ, ಕೊಲೆ, ಸುಲಿಗೆ, ಅಪಹರಣ ಸೇರಿ ಹಲವು ಪ್ರಕರಣಗಳ ಆರೋಪಿ, ಜೈಲುಪಾಲಾಗಿರುವ ಗ್ಯಾಂಗ್‌ಸ್ಟರ್ ಧನಂಜಯ್ ಸಿಂಗ್ ಪತ್ನಿಗೂ ಬಿಎಸ್‌ಪಿ ಟಿಕೆಟ್ ಘೋಷಿಸಿದೆ.
ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್ ಮಹಾಮಂಡಲೇಶ್ವರ್ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಈಗ ಬಿಎಸ್‌ಪಿಯು ಅಥರ್ ಜಮಾಲ್ ಲರಿ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.
ಗ್ಯಾಂಗ್‌ಸ್ಟರ್ ಪತ್ನಿಗೆ ಟಿಕೆಟ್
ಉತ್ತರ ಪ್ರದೇಶದ ಜೌನ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಗ್ಯಾಂಗ್‌ಸ್ಟರ್ ಧನಂಜಯ್ ಸಿಂಗ್ ಪತ್ನಿ ಶ್ರೀಕಲಾ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇನ್ನು, ಮೈನ್‌ಪುರಿಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಎಸ್‌ಪಿಯು, ಶಿವಪ್ರಸಾದ್ ಯಾದವ್ ಅವರಿಗೆ ಮಣೆ ಹಾಕಿದೆ. ಬರೇಲಿಯಲ್ಲಿ ಛೋಟಾಲಾಲ್ ಗಂಗ್ವಾರ್, ಬಂಡಾದಲ್ಲಿ ಮಯಾಂಕ್ ದ್ವಿವೇದಿ, ಘಾಜಿಪುರದಲ್ಲಿ ಉಮೇಶ್ ಕುಮಾರ್ ಸಿಂಗ್ ಸೇರಿ 11 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ
ಯಾರೀತ ಧನಂಜಯ್ ಸಿಂಗ್?
ಧನಂಜಯ್ ಸಿಂಗ್ ಉತ್ತರ ಪ್ರದೇಶ ಕಂಡ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾಗಿದ್ದಾನೆ. ಈತನ ವಿರುದ್ಧ 1991ರಿಂದ 2023ರ ಅವಧಿಯಲ್ಲಿ ದೆಹಲಿ, ಜೌನ್‌ಪುರ ಹಾಗೂ ಲಖನೌನಲ್ಲಿ ಕೊಲೆ, ಸುಲಿಗೆ, ಅಪಹರಣ, ಗಲಭೆ, ಅಪರಾಧಕ್ಕೆ ಪ್ರಚೋದನೆ ಸೇರಿ 46 ಪ್ರಕರಣಗಳು ದಾಖಲಾಗಿವೆ. ಇಂತಹ ಗ್ಯಾಂಗ್‌ಸ್ಟರ್ ಒಮ್ಮೆ ಶಾಸಕ ಹಾಗೂ ಒಮ್ಮೆ ಸಂಸದನಾಗಿ (ಜೌನ್‌ಪುರ ಕ್ಷೇತ್ರದ ಸಂಸದ) ಆಯ್ಕೆಯಾಗಿದ್ದ ಎಂಬುದೇ ವ್ಯವಸ್ಥೆಯ ಘೋರ ಅಣಕವಾಗಿದೆ. ನಮಾಮಿ ಗಂಗೆ ಯೋಜನೆಯ ಮ್ಯಾನೇಜರ್ ಒಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಈತನಿಗೆ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: Lok Sabah Election : ಉತ್ತರ ದಿಲ್ಲಿಯಿಂದ ಕಾಂಗ್ರೆಸ್ ಟಿಕೆಟ್ ಪಡೆದ ಕನ್ಹಯ್ಯ ಕುಮಾರ್