Site icon Vistara News

Budget 2024: ಆರ್ಥಿಕತೆಗೆ ಬೂಸ್ಟ್‌ ನೀಡಿದ ಮೋದಿ;‌ ಗಂಡನ ಹಣ ಕಿತ್ತು ಹೆಂಡ್ತಿಗೆ ಕೊಡ್ತಾರಾ ಸಿದ್ದರಾಮಯ್ಯ ಎಂದ ಬಿಜೆಪಿ!

R Ashok

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಅನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಭಾರತ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಮಂಡಿಸಿರುವ ಬಜೆಟ್‌ ಇದಾಗಿದೆ ಎಂದು ಬಣ್ಣಿಸಿದೆ. ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ (R Ashok) ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಸ್ವಾಗತ ಮಾಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದಲ್ಲಿ ಯಾವ ರೀತಿ ಬಜೆಟ್‌ ಮಂಡಿಸುತ್ತಾರೆ ಎನ್ನುವುದು ಕುತೂಹಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಗೆ ಬೂಸ್ಟ್‌ ನೀಡಿದರೆ, ಸಿದ್ದರಾಮಯ್ಯ ಅವರು ಗಂಡನ ಹಣವನ್ನು ಕಿತ್ತು ಹೆಂಡತಿಗೆ ಕೊಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್: ಅಶೋಕ್

ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ ಉತ್ತಮವಾಗಿದೆ. ಭಾರತದ ತಂತ್ರಜ್ಞಾನ ಹಾಗೂ ಆರ್ಥಿಕತೆಯ ಏಳ್ಗೆಗೆ ಇದು ಸಹಕಾರಿಯಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೆಸರಲ್ಲಿ ಬಜೆಟ್ ಮಂಡನೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬಜೆಟ್ ಅನ್ನು ಮಂಡಿಸಿಲ್ಲ. ಸರ್ವರ ಏಳ್ಗೆಗೆ, ಬಡವರ ಏಳ್ಗೆಗೆ ಮಂಡನೆಯಾಗಿರುವ ಬಜೆಟ್ ಇದಾಗಿದೆ. ಏಳು ಲಕ್ಷ ರೂಪಾಯಿವರೆಗೂ ತೆರಿಗೆ ಇಲ್ಲ. ಒಂದು ಲಕ್ಷ ಕುಟುಂಬಕ್ಕೆ ಸೋಲಾರ್ ಎನರ್ಜಿ ಬಳಕೆಗೆ ಒತ್ತು ನೀಡಲಾಗಿದೆ. ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ನೀಡಲಾಗಿದೆ. 9-15 ವರ್ಷದ ಮಕ್ಕಳಿಗೆ ಉಚಿತ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ವಸತಿ ನೀಡಲು ಮುಂದಾಗಲಾಗಿದೆ ಎಂದು ವಿವರಿಸಿದರು.

ರೈಲ್ವೇ ಟ್ರಾಫಿಕ್ ತಗ್ಗಿಸಲು ನಾಲ್ಕು ವಿಶೇಷ ಕಾರಿಡಾರ್‌ಗೆ, ಏರ್ಪೋರ್ಟ್ ಆಧುನೀಕರಣಕ್ಕೆ ಹಣಕಾಸು ನೆರವು ನೀಡಲಾಗಿದೆ. ಪ್ರವಾಸೋದ್ಯಮದಲ್ಲಿ ಪ್ರಪಂಚದ ಗಮನ ಸೆಳೆದ ಲಕ್ಷ ದ್ವೀಪಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವಿಶ್ವದ ಗಮನ ಸೆಳೆಯಲು ಅನೇಕ ಕ್ರಮ‌ಗಳನ್ನು ತೆಗೆದುಕೊಳ್ಳಲಾಗಿದೆ. ಬಡ ಕುಟುಂಬಕ್ಕೆ ಮನೆ ಕೊಡುವುದು ಬಹಳ ವಿಶೇಷತೆಯಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉನ್ನತ ಮಟ್ಟಕ್ಕೆ ಏರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಗಿಮಿಕ್ ಪಾಲಿಟಿಕ್ಸ್ ಮಾಡದೆ, ಮುಂದಿನ ಜನಾಂಗಕ್ಕೆ ಉಪಯುಕ್ತ ಆಗುವಂತೆ ಮಂಡನೆಯಾಗಿದೆ ಎಂದು ಹೇಳಿದರು.

ಮುಂದೆ ಸಿಎಂ ಸಿದ್ದರಾಮಯ್ಯ ಬಜೆಟ್ ಬರುತ್ತದೆ. ಗಂಡನದ್ದು ಕಿತ್ತು, ಹೆಂಡತಿಗೆ ಕೊಡ್ತಾರೆ. ಬಿಯರ್ ಬೆಲೆ 15 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಗಂಡನಿಗೆ ಟ್ಯಾಕ್ಸ್ ಹಾಕಿದ್ದಾರೆ. ಅದನ್ನು ಕಿತ್ತು ಹೆಂಡತಿಗೆ ಕೊಡುತ್ತಿದ್ದಾರೆ. ಇದೇ ಇವರ ಗ್ಯಾರಂಟಿ ಬಜೆಟ್ ಆಗಿದೆ. ಕ್ವಾಟರ್ ಎಣ್ಣೆ 15 ರೂಪಾಯಿ ಇತ್ತು. ಈಗ ಬಿಯರ್ ಬೆಲೆ 15 ರೂಪಾಯಿ ಜಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದೇ ಬರೋದು ಎಂದು ಆರ್‌. ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಆಶಾದಾಯಕ, ದೂರಗಾಮಿ, ಬಡವರ ಪರ ಬಜೆಟ್: ಕೋಟಾ ಶ್ರೀನಿವಾಸ್ ಪೂಜಾರಿ

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಇದೊಂದು ಆಶಾದಾಯಕ, ದೂರಗಾಮಿ, ಬಡವರ ಪರ ಬಜೆಟ್ ಆಗಿದೆ. ದೇಶದ ಭದ್ರತೆ, ಸ್ವಾಭಿಮಾನಿ ಭಾರತ ಆಗಬೇಕು ಅಂತ ಮಂಡಿಸಿದ್ದಾರೆ. ಪಿಎಂ ಸ್ವನಿಧಿ ಯೋಜನೆ ಅಡಿ ಸಾಲ‌ ನೀಡಿರುವುದನ್ನು ಉಲ್ಲೇಖ ಮಾಡಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ಪ್ರಕಟ ಮಾಡಲಾಗಿದೆ. ಒಂದು ಕೋಟಿ ಮನೆಗೆ ಸೌರ ವಿದ್ಯುತ್ ನೀಡುವ ಕೆಲಸ‌ ಮಾಡಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ 75 ಸಾವಿರ ಕೋಟಿ ರೂ. ಮೀಸಲು ಇಡಲಾಗಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಉನ್ನತ ಮಟ್ಟಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಕರಾವಳಿ ಭಾಗಕ್ಕೆ ಹೊಸ ಬಂದರು. ಮತ್ಸ್ಯ ಯೋಜನೆ ಮೂಲಕ ಸಾಲ ನೀಡಲು ನಿರ್ಧಾರ ಮಾಡಲಾಗಿದೆ. ಏಳು ಲಕ್ಷ ರೂಪಾಯಿವರೆಗೂ ಆದಾಯ ಮಿತಿ ಮಾಡಿರೋದು ಮಧ್ಯಮ ವರ್ಗಕ್ಕೆ ಅನುಕೂಲ ಆಗಲಿದೆ. ತೆರಿಗೆದಾರನ ಒಂದೊಂದು ಪೈಸೆಯನ್ನು ಸಹ ಭಾರತದ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ಹೇಳಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಒಂದೇ ಭಾರತ್ ಯೋಜನೆ ಮೂಲಕ ಕ್ರಾಂತಿಕಾರಕ‌ ಹೆಜ್ಜೆಯನ್ನು ಇಡಲಾಗಿದೆ. ನಾಲ್ಕು ಕೋಟಿ ರೈತರಿಗೆ ಬೆಳೆ‌ ವಿಮೆ ನೀಡಲಾಗುವುದು. ರೈತರು, ಬಡವರು, ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಾಡಲಾಗಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಬಣ್ಣಿಸಿದರು.

11.8 ಕೋಟಿ ರೈತರಿಗೆ ನೇರ ಸಹಾಯವಾಗುತ್ತಿದ್ದು, ಸೋರಿಕೆ ಇಲ್ಲದೆ 34 ಲಕ್ಷ‌ ಕೋಟಿ ಜನರಿಗೆ DBT ಮೂಲಕ ಪರಿಹಾರ ಸಿಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಹಣ ನೀಡಲಾಗಿದೆ. ಅದರ ಕಾಮಗಾರಿ ಆರಂಭಿಸಿದರೆ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಬಾರದು. ಬೆಂಗಳೂರು-ಮಂಗಳೂರು ಸಂಪರ್ಕಕ್ಕೆ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾಡುವ ವಿಚಾರದ ಬಗ್ಗೆ ಈಗಾಗಲೇ ಪ್ರಸ್ತಾವನೆ ಇದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Exit mobile version