Site icon Vistara News

Karnataka Budget 2024 : ಮೆಟ್ರೊ 3ನೆ ಹಂತ ಸೇರಿದಂತೆ ಬೆಂಗಳೂರು ನಗರ ಸಂಚಾರ ವ್ಯವಸ್ಥೆಗೆ ಬಜೆಟ್​ನಲ್ಲಿ ಒತ್ತು

Namma Metro

ಬೆಂಗಳೂರು: ಬೆಂಗಳೂರು ನಗರದೊಳಗಿನ ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಅವರು ತಾವು ಮಂಡಿಸಿರುವ 15ನೇ ಬಜೆಟ್​ನಲ್ಲಿ (Karnataka Budget 2024) ಒತ್ತು ನೀಡಿದ್ದಾರೆ. ಪ್ರಮುಖವಾಗಿ ಸರ್ಜಾಪುರದಿಂದ ಹೆಬ್ಬಾಳದವರೆಗಿನ ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧಪಡಿಸುವುದು, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿ ಸಾರಿಗೆ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗಿದೆ.

ನಮ್ಮ ಮೆಟ್ರೋ ರೈಲಿನ ಮೂಲಕ 8 ಲಕ್ಷಕ್ಕೂ ಹೆಚ್ಚಿನ ಜನರು ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 74 ಕಿ.ಮೀ. ಮಾರ್ಗದೊಂದಿಗೆ 2025ರ ಮಾರ್ಚ್‌ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ. ಮೆಟ್ರೋ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್‌ ವೇಳೆಗೆ ಸಿದ್ದವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ.

ಇದನ್ನೂ ಓದಿ :Karnataka Budget 2024 : ಸಿದ್ದರಾಮಯ್ಯ ಬಜೆಟ್​ ಎಕ್ಸ್​ ಟ್ರೆಂಡಿಂಗ್​ನಲ್ಲಿ ನಂಬರ್​ 1

ಮೆಟ್ರೊ ಹಂತ-3ರ ಅಂದಾಜು 15,611 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ. ನಮ್ಮ ಮೆಟ್ರೋ ಹಂತ-3ಎ ರಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ ಮೂಲಕ ಹೆಬ್ಬಾಳವನ್ನು ಸಂಪರ್ಕಿಸಲಿದೆ.

ಉಪನಗರ ರೈಲು

ಬೆಂಗಳೂರು ಉಪನಗರ ರೈಲು ಯೋಜನೆಯಡಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ಕಾರಿಡಾರ್‌-2ರ ಸಿವಿಲ್‌ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಾರಿಡಾರ್‌-4 ರ ಹೀಲಲಿಗೆಯಿಂದ ರಾಜಾನುಕುಂಟೆ ವರೆಗಿನ 46.2 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಐರೋಪ್ಯ ಹೂಡಿಕೆ ಬ್ಯಾಂಕ್‌ ಮತ್ತು ಜರ್ಮನಿಯ KFW ಬ್ಯಾಂಕುಗಳ ಜೊತೆಗೆ ಆರ್ಥಿಕ ನೆರವಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಿಎಂಟಿಸಿಗೆ ಹೊಸ ಬಸ್‌ಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರತಿದಿನ ಸರಾಸರಿ 42 ಲಕ್ಷ ಜನರಿಗೆ ಸೇವೆಯನ್ನು ಒದಗಿಸುತ್ತಿದ್ದು, ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್‌ ಬಸ್ಸುಗಳನ್ನು ಬಿ.ಎಂ.ಟಿ.ಸಿ.ಗೆ ಸೇರ್ಪಡೆಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​ ಬಾಷಣದಲ್ಲಿ ಹೇಳಿದ್ದಾರೆ.

ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆ್ಯಪ್​

ಬಿಎಂಟಿಸಿಯಲ್ಲಿ ಮಹಿಳಾ ಸುರಕ್ಷತೆಯನ್ನು ಒಳಗೊಂಡ ವೆಹಿಕಲ್‌ ಟ್ರ್ಯಾಕಿಂಗ್‌ ಹೊಂದಿರುವ ಮೊಬೈಲ್‌ ಆಪ್‌ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಪಾನ್‌ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏರಿಯಾ ಟ್ರಾಫಿಕ್‌ ಸಿಗ್ನಲ್‌ ಸಿಸ್ಟಮ್‌ ಅನ್ನು ನಗರದ ಪ್ರಮುಖ 28 ಜಂಕ್ಷನ್‌ಗಳಲ್ಲಿ ಅಳವಡಿಸುವ ಮೂಲಕ ಟ್ರಾಫಿಕ್‌ ಸಿಗ್ನಲ್‌ ನಲ್ಲಿ ವಾಹನಗಳ ಸಂದಣಿಯನ್ನು ಶೇ.30ರಷ್ಟು ಹಾಗೂ ಸರಾಸರಿ ವಿಳಂಬವನ್ನು ಶೇ.13ರಷ್ಟು ಕಡಿಮೆಗೊಳಿಸಲಾಗುವುದು ಎಂದರು.

Exit mobile version