Site icon Vistara News

Bus Accident: ಬಸ್‌ ಕಂದಕಕ್ಕೆ ಉರುಳಿ 12 ಕಾರ್ಮಿಕರ ಸಾವು; ಪ್ರಧಾನಿ ಮೋದಿ ಸಂತಾಪ

bus accident chattisgarh

ದುರ್ಗ: ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ಸೊಂದು (Bus Accident) ಕಂದಕಕ್ಕೆ ಉರುಳಿ ಬಿದ್ದ (Road Accident) ಪರಿಣಾಮ ಖಾಸಗಿ ಸಂಸ್ಥೆಯೊಂದರ ಕನಿಷ್ಠ 12 ಮಂದಿ ಕಾರ್ಮಿಕರು (workers death) ಸಾವನ್ನಪ್ಪಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ರಾತ್ರಿ ದುರ್ಗದ ಗಣಿಯಲ್ಲಿ ಕಾರ್ಮಿಕರಿಂದ ತುಂಬಿದ್ದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸಿಲುಕಿರುವ ಜನರನ್ನು ಹೊರತರುವ ಪ್ರಕ್ರಿಯೆ ನಡೆಯುತ್ತಿದೆ. ಬಸ್‌ ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತು ಎಂದು ದುರ್ಗ್ ಕಲೆಕ್ಟರ್ ರಿಚಾ ಪ್ರಕಾಶ್ ಚೌಧರಿ ಹೇಳಿದ್ದಾರೆ. ಮಂಗಳವಾರ ರಾತ್ರಿ ಬಸ್ ʼಮುರುಂ’ ಮಣ್ಣಿನ ಗಣಿ ಹೊಂಡಕ್ಕೆ ಬಿದ್ದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಾತ್ರಿ 8.30ರ ಸುಮಾರಿಗೆ ಕುಮ್ಹಾರಿ ಬಳಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹಳ್ಳಕ್ಕೆ ಬಿದ್ದಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಚೌಧರಿ ತಿಳಿಸಿದರು. ಗಾಯಾಳುಗಳನ್ನು ಏಮ್ಸ್ (ರಾಯಪುರ) ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ) ಗೆ ಸ್ಥಳಾಂತರಿಸಲಾಗಿದೆ, ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಮತ್ತು ನಾವು ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತದ ಕುರಿತು ಸ್ಥಳೀಯ ಆಡಳಿತ ತನಿಖೆ ಆರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಛತ್ತೀಸ್‌ಗಢದ ದುರ್ಗ್‌ನಲ್ಲಿ ಸಂಭವಿಸಿದ ಬಸ್ ಅಪಘಾತವು ಅತ್ಯಂತ ದುಃಖಕರವಾಗಿದೆ. ಇದರಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿದೆ” ಎಂದು ಅವರು Xನಲ್ಲಿ ಬರೆದಿದ್ದಾರೆ.

ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಘಟನೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. “ಖಾಸಗಿ ಸಂಸ್ಥೆಯೊಂದರ ಉದ್ಯೋಗಿಗಳಿಂದ ತುಂಬಿ ತುಳುಕುತ್ತಿದ್ದ ಬಸ್, ದುರ್ಗ್‌ನ ಕುಮ್ಹಾರಿ ಬಳಿ ಅಪಘಾತಕ್ಕೀಡಾದ ಸುದ್ದಿಯಿಂದ ನನಗೆ ದುಃಖವಾಯಿತು. ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡಲೆಂದು ನಾನು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಗಾಯಗೊಂಡ ನೌಕರರ ಚಿಕಿತ್ಸೆಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Road Accident: ಬೈಕ್‌ ಚಲಾಯಿಸುತ್ತಿದ್ದ ತಂದೆ- ಮಗ ಅಪಘಾತದಲ್ಲಿ ಸಾವು

Exit mobile version