Site icon Vistara News

Bypolls Results 2023: ಬಿಜೆಪಿಗೆ ಮುಖಭಂಗ; ದಾಖಲೆ ಬರೆದ ಕಾಂಗ್ರೆಸ್! ಬೈ ಎಲೆಕ್ಷನ್‌ನಲ್ಲಿ ಯಾರಿಗೆಲ್ಲ ಗೆಲುವು?

Bypolls Results 2023: big blow to the BJP; Congress scripted history

ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯ ನಡುವೆ ದೇಶದ ವಿವಿಧೆಡೆ ನಡೆದ ಉಪ ಚುನಾವಣೆಗಳ ರಿಸಲ್ಟ್ ಮಾತ್ರ ಕಾಂಗ್ರೆಸ್ (Congress) ಪಕ್ಷಕ್ಕೆ ತುಸು ನೆಮ್ಮದಿಯನ್ನು ತಂದಿದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಬೈ ಎಲೆಕ್ಷನ್‌ನಲ್ಲಿ ಎಲ್ಲರ ನಿರೀಕ್ಷೆ ಹುಸಿ ಮಾಡಿ, ಕಾಂಗ್ರೆಸ್ ದಾಖಲೆ ಬರೆದಿದೆ. ತಮಿಳುನಾಡಿನಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಬಲಾಢ್ಯ ಭಾರತೀಯ ಜನತಾ ಪಾರ್ಟಿ(BJP) ಎರಡು ಕಡೆ ಮತ್ತು ಬಿಜೆಪಿ ಬೆಂಬಲಿತ ಎಜೆಎಸ್‌ಯು(All Jharkhand Students Union) ಪಾರ್ಟಿ 1 ಕ್ಷೇತ್ರವನ್ನು ಗೆದ್ದುಕೊಂಡಿದೆ(Bypolls Results 2023:).

ಎಲ್ಲೆಲ್ಲಿ ಬೈ ಎಲೆಕ್ಷನ್?

ಮಹಾರಾಷ್ಟ್ರ(ಪುಣೆಯ ಚಿಂಚವಾಡ ಮತ್ತು ಕಸಬಾ ಪೇಟೆ), ಪಶ್ಚಿಮ ಬಂಗಾಳ(ಸಾಗರ್ದಿಘಿ), ಅರುಣಾಚಲ ಪ್ರದೇಶ(ಲುಮ್ಲಾ-ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ), ತಮಿಳುನಾಡು(ಈರೋಡ್ ವೆಸ್ಟ್) ಮತ್ತು ಜಾರ್ಖಂಡ್(ರಾಮಗಢ) ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆದಿತ್ತು.

ಮಹಾರಾಷ್ಟ್ರದಲ್ಲಿ ದಾಖಲೆ ಬರೆದ ಕಾಂಗ್ರೆಸ್

ಮಹಾರಾಷ್ಟ್ರದ ಪುಣೆಯ ಕಸಬಾ ಪೇಟೆಗೆ ನಡೆದ ಬೈಎಲೆಕ್ಷನ್‌ನಲ್ಲಿ ಬಿಜೆಪಿಯ ಹೇಮಂತ್ ರಸಾನೆ ಅವರನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ರವೀಂದ್ರ ಧಾಂಗೇಕರ್ ಅವರು ಜಯಶಾಲಿಯಾಗಿದ್ದಾರೆ. ಇದರೊಂದಿಗೆ, ಆಡಳಿತಾರೂಢ ಏಕನಾಥ ಶಿಂಧೆಯ ಶಿವಸೇನೆ ಹಾಗೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿತ್ತು. ಬಿಜೆಪಿಯು ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿತ್ತು. ತನ್ನ ಎಲ್ಲಾ ಹಿರಿಯ ನಾಯಕರನ್ನು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರಕ್ಕೆ ನಿಯೋಜಿಸಿತ್ತು. ಆದರೆ, ಅವರ ಪ್ರಯತ್ನದ ಹೊರತಾಗಿಯೂ ಪಕ್ಷಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಸಾನೆ ಪರ ಪ್ರಚಾರ ನಡೆಸಿದ್ದರು. 1995ರಿಂದ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಈ ಫಲಿತಾಂಶವು ಬಿಜೆಪಿಗೆ ಶಾಕ್ ನೀಡಿದೆ.

ಬಂಗಾಳದಲ್ಲಿ ಖಾತೆ ತೆರೆದ ಕಾಂಗ್ರೆಸ್

2021ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು. ಈವರೆಗಿನ ಅತಿ ಹೀನಾಯ ಪ್ರದರ್ಶನ ಅದಾಗಿತ್ತು. ಆದರೆ, ಸಾಗರ್ದಿಘಿ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ತನ್ನ ಖಾತೆ ತೆರೆದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು ಈ ಬೈ ಎಲೆಕ್ಷನ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಎಡ ಪಕ್ಷಗಳ ಬೆಂಬಲದೊಂದಿಗೆ ಟಿಎಂಸಿ ಪಕ್ಷವನ್ನು ಬಗ್ಗುಬಡಿದಿದ್ದಾರೆ. ಕಾಂಗ್ರೆಸ್‌ನ ಬೈರೋನ್ ಬಿಸ್ವಾಸ್ ಅವರು ಟಿಎಂಸಿಯ ದೇಬಶಿಷ್ ಬ್ಯಾನರ್ಜಿ ಅವರನ್ನು ಸೋಲಿಸಿದ್ದಾರೆ. ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್‌ ಈ ಬೈ ಎಲೆಕ್ಷನ್‌ ಗೆಲುವು ಬಲ ತಂದು ಕೊಟ್ಟಿದೆ.

ಈರೋಡ್ ವೆಸ್ಟ್ ಉಳಿಸಿಕೊಂಡ ಕೈ

ತಮಿಳುನಾಡಿನ ಈರೋಡ್ ವೆಸ್ಟ್ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಡಿಎಂಕೆ ಬೆಂಬಲ ನೀಡಿತ್ತು. ಕಾಂಗ್ರೆಸ್‌ನ ಇವಿಕೆಎಸ್ ಇಳಂಗೋವನ್ ಅವರು ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಕೆ ಎಸ್ ಥೆನ್ನನರಸು ವಿರುದ್ಧ ಗೆಲುವು ಸಾಧಿಸಿದ್ದಾರೆ.

ಎರಡು ಕಡೆ ಬಿಜೆಪಿಗೆ ಗೆಲವು

ಮಹಾರಾಷ್ಟ್ರ ಪುಣೆಯ ಚಿಂಚವಾಡಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿಯು ಯಶಸ್ವಿಯಾಗಿದೆ. ಬಿಜೆಪಿಯ ಅಶ್ವಿನಿ ಜಗತಾಪ್ ಅವರು ಎಂವಿಎ ಬೆಂಬಲಿತ ಎನ್‌ಸಿಪಿ ಅಭ್ಯರ್ಥಿ ನಾನಾ ಕಾಟೆ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ 35 ಸಾವಿರ ಮತಗಳ ಅಂತರದಿಂದ ಗೆದ್ದುಕೊಂಡಿದೆ. ಅರುಣಾಚಲ ಪ್ರದೇಶ ಲುಮ್ಲಾ ಕ್ಷೇತ್ರದಲ್ಲಿ ಬಿಜೆಪಿಯ ಶೇರಿಂಗ್ ಲಾಮ್ಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, 1995ರಿಂದಲೂ ಬಿಜೆಪಿಯ ಭದ್ರಕೋಟೆಯಾಗಿದ್ದ ಪುಣೆಯ ಕಸಬಾ ಪೇಟೆ ಕ್ಷೇತ್ರವನ್ನು ಕಳೆದುಕೊಂಡಿದೆ. ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದೆ.

ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ಗೆ ಹಿನ್ನಡೆ

ಹಾಲಿ ಶಾಸಕಿಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ರಾಮಗಢ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆದಿದ್ದು, ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿ ಬೆಂಬಲಿತ ಎಜೆಎಸ್‌ಯುಪಿ ಅಭ್ಯರ್ಥಿ ಸುನಿತಾ ಚೌಧರಿ ಅವರು ಕಾಂಗ್ರೆಸ್‌ನ ಬಜರಂಗ್ ಮಹತೋ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Northeast Assembly Election Result: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾಗೆ ಗೆಲುವು; ಸಂಭ್ರಮಾಚರಣೆ ಶುರು

ಯಾವ ಕಾರಣಕ್ಕೆ ಬೈ ಎಲೆಕ್ಷನ್?

ಜಾರ್ಖಂಡ್‌ನ ರಾಮಗಢ ಹೊರತು ಪಡಿಸಿ ಉಳಿದ ಐದು ವಿಧಾನಸಭೆ ಕ್ಷೇತ್ರಗಳು ನಿಧನದಿಂದಾಗಿ, ಆ ಕ್ಷೇತ್ರಗಳು ತೆರವಾಗಿದ್ದವು. ರಾಮಗಢದಲ್ಲಿ ಮಾತ್ರ ಹಾಲಿ ಶಾಸಕಿ ಶಿಕ್ಷೆಯಾದ ಪರಿಣಾಮ ಅವರು ಶಾಸಕತ್ವದಿಂದ ಅನರ್ಹಗೊಂಡಿದ್ದರು. ಹಾಗಾಗಿ ಈ ಆರೂ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪ ಚುನಾವಣೆಯನ್ನು ಕೈಗೊಂಡಿತ್ತು.

Exit mobile version