Site icon Vistara News

PM Narendra Modi: “ಮೋದಿ ಜೊತೆ ಕುಡಿದ ಚಹಾ ಮರೆಯಲು ಸಾಧ್ಯವಿಲ್ಲ, ಯಾಕೆಂದರೆ…ʼʼ : ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌

modi macron tea

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಕುಡಿದ ಚಾಯ್ ಅನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಯುಪಿಐ ಮೂಲಕ ಪಾವತಿ (UPI Payment) ಮಾಡಲಾಗಿತ್ತು. ಸ್ವತಃ ಮೋದಿಯವರೇ ಪೇ ಮಾಡಿದ್ದರು ಎಂದು ಗಣರಾಜ್ಯೋತ್ಸವ ಅತಿಥಿಯಾಗಿದ್ದ ಫ್ರೆಂಚ್ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್ (French President Emmanuel Macron) ಹೇಳಿದ್ದಾರೆ.

ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ತಂತ್ರಜ್ಞಾನದ ದಾಪುಗಾಲು ಇಲ್ಲಿಗೆ ಭೇಟಿ ನೀಡುವ ಅನೇಕ ವಿದೇಶಿ ನಾಯಕರನ್ನು ಬೆರಗುಗೊಳಿಸಿದೆ. ಇತ್ತೀಚೆಗಷ್ಟೇ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್‌ ಕೂಡ ಅವರಲ್ಲೊಬ್ಬರು.

“ನಾವು ಒಟ್ಟಿಗೆ ಹಂಚಿಕೊಂಡ ಚಾಯ್ ಅನ್ನು ನಾನು ಮರೆಯುವುದಿಲ್ಲ. ಏಕೆಂದರೆ ಇದು ಯುಪಿಐನಿಂದ ಪಾವತಿಸಿದ ಚಾಯ್. ಇದು ನಾವೀನ್ಯತೆ” ಎಂದು ಮ್ಯಾಕ್ರಾನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಗಾಗಿ ಆಯೋಜಿಸಿದ್ದ ಅಧಿಕೃತ ಔತಣಕೂಟದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಗುರುವಾರ ಜೈಪುರದ ಹವಾ ಮಹಲ್ ಬಳಿಯ ಅಂಗಡಿಯಲ್ಲಿ ಮ್ಯಾಕ್ರಾನ್ ಮತ್ತು ಮೋದಿ ಕುಲ್ಹಾಡ್ ಚಹಾ ಸೇವಿಸಿದ್ದರು. ಮೋದಿ ಅದಕ್ಕೆ ತಮ್ಮ ಫೋನ್‌ನಲ್ಲಿ ಯುಪಿಐ ಬಳಸಿ ಚಹಾಕ್ಕೆ ಹಣ ಪಾವತಿಸಿದ್ದರು. ಮ್ಯಾಕ್ರಾನ್ ಇದನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಅಂಗಡಿ ಮಾಲೀಕರು ತಮ್ಮ ಫೋನ್‌ನಲ್ಲಿ ಪಾವತಿಯ ದೃಢೀಕರಣ ಪಡೆದಿದ್ದನ್ನು ಸಹ ಮೋದಿ ತಮಗೆ ತೋರಿಸಿದರು ಎಂದು ಮ್ಯಾಕ್ರಾನ್‌ ಹೇಳಿದ್ದಾರೆ.

ಶುಕ್ರವಾರದ ಔತಣಕೂಟದಲ್ಲಿ ಮ್ಯಾಕ್ರಾನ್ ಅವರು “ಇಂತಹ ಮಹತ್ವದ ದಿನದ ಭಾಗವಾಗಲು ಹೆಮ್ಮೆಯಾಗುತ್ತದೆ. ಭಾರತ ಮತ್ತು ಫ್ರಾನ್ಸ್ ಬಲವಾದ ಸಂಬಂಧವನ್ನು ಹೊಂದಿವೆ” ಎಂದು ಹೇಳಿದರು.

ಭಾರತದಿಂದ UPI ಅನ್ನು ಅಳವಡಿಸಿಕೊಳ್ಳಲು ಫ್ರಾನ್ಸ್ ಬಲವಾದ ಆಸಕ್ತಿಯನ್ನು ತೋರಿಸಿದೆ. ಜುಲೈನಲ್ಲಿ ಮೋದಿಯವರು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಐಫೆಲ್ ಟವರ್‌ನಿಂದ ಪ್ರಾರಂಭವಾಗುವ ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದರು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್‌ಸಿಪಿಐ) ಅಂತಾರಾಷ್ಟ್ರೀಯ ಅಂಗವು ಯುಪಿಐ ಮತ್ತು ರುಪೇ ಸ್ವೀಕರಿಸಲು ಫ್ರಾನ್ಸ್‌ನ ಲೈರಾ ನೆಟ್‌ವರ್ಕ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.

Exit mobile version