ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC- Cauvery water regulation commitee) ತಮಿಳುನಾಡಿಗೆ (Tamil Nadu) ಪ್ರತಿದಿನ 1 ಟಿಎಂಸಿ (TMC) ಅಡಿ ನೀರು ಬಿಡಲು ಕರ್ನಾಟಕಕ್ಕೆ (Karnataka) ಸೂಚಿಸಿದೆ. ಕಾವೇರಿ ಬಿಕ್ಕಟ್ಟು (Cauvery Dispute) ಮತ್ತೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲ ಸಂಪನ್ಮೂಲ ಇಲಾಖೆಯ ತುರ್ತು ಸಭೆ ಕರೆಯಲಾಗಿದೆ.
ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಭಾಗದ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಯಲಿದೆ. ಕರ್ನಾಟಕದಲ್ಲಿ ನೀರಿನ ಕೊರತೆಯಿದ್ದು, ಈ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂದು ಸಭೆ ಚರ್ಚಿಸಲಿದೆ.
ತಮಿಳುನಾಡಿಗೆ ಜುಲೈ 31ರವರೆಗೆ ಬಿಳಿಗುಂಡ್ಲು ಜಲಾಶಯದಿಂದ ಪ್ರತಿ ದಿನ 1 ಟಿಎಂಸಿ ಅಡಿ (11,500 ಕ್ಯೂಸೆಕ್) ನೀರನ್ನು ಹರಿಸುವಂತೆ ಕಾವೇರಿ ಜಲ ನಿರ್ವಹಣಾ ಸಮಿತಿ (ಸಿಡಬ್ಲ್ಯುಆರ್‌ಸಿ) ಗುರುವಾರ ಕರ್ನಾಟಕ ಸರಕಾರಕ್ಕೆ ಸೂಚಿಸಿತ್ತು. ಆದರೆ ಕರ್ನಾಟಕ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ತನ್ನ ಜಲಾಶಯಗಳಲ್ಲಿ ನೀರಿನ ಹರಿವಿನ ಕೊರತೆಯಿರುವುದರಿಂದ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದನ್ನು ಜುಲೈ 25ರವರೆಗೆ ಮುಂದೂಡುವಂತೆ ಸಿಡಬ್ಲ್ಯುಸಿಯನ್ನು ಕೋರಿದೆ.
ಗುರುವಾರ ದಿಲ್ಲಿಯಲ್ಲಿ ಸಭೆ ನಡೆಸಿದ ಸಿಡಬ್ಲ್ಯುಆರ್‌ಸಿ, ಜುಲೈ 12ರಿಂದ ಜುಲೈ 31ರವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವು 1 ಟಿಎಂಸಿ ಅಡಿ ಇರುವಂತೆ ಕರ್ನಾಟಕವು ಖಾತರಿಪಡಿಸಬೇಕು ಎಂದಿದೆ. ಕಳೆದ ಸಾಲಿನಲ್ಲಿ ಕರ್ನಾಟಕವು ಸರಿಯಾಗಿ ನೀರು ಹರಿಸಿಲ್ಲ. ಆದರೆ ಈ ಬಾರಿ ಮುಂಗಾರು ಸಾಮಾನ್ಯವಾಗಿದೆ. ಕಾವೇರಿ ಕಣಿವೆಯ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಕಾವೇರಿ ಕಣಿವೆಯ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡಿನ ಅಧಿಕಾರಿಗಳು ಸಿಡಬ್ಲ್ಯುಆರ್‌ಸಿಯನ್ನು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಕರ್ನಾಟಕ ಕೂಡಾ, ರಾಜ್ಯದಲ್ಲಿ ಮುಂಗಾರು ಸಾಮಾನ್ಯವಾಗಿ ಆಗಿಲ್ಲ. ಶೇ.28ರಷ್ಟು ಮಳೆಯ ಕೊರತೆಯಿದೆ. ಆದುದರಿಂದ ನೀರು ಬಿಡಲು ಸಾಧ್ಯವಿಲ್ಲವೆಂದು ವಾದಿಸಿತ್ತು. ಎರಡೂ ರಾಜ್ಯಗಳ ವಾದ ಅಲಿಸಿದ ಸಿಡಬ್ಲ್ಯುಆರ್‌ಸಿ ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿ ದಿನ 1 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ಸೂಚಿಸಿತು.
2024ರ ಜೂನ್ 1ರಿಂದ 2024ರ ಜುಲೈ 9ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಒಟ್ಟಾರೆ ಹರಿವು 41.651 ಟಿಎಂಸಿಯಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 28.71 ಶೇಕಡದಷ್ಟು ಕೊರತೆಯಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಕಚೇರಿಯು ಗುರುವಾರ ಬಿಡುಗಡೆಗೊಳಿಸಿದ ಟಿಪ್ಪಣಿಯೊಂದು ತಿಳಿಸಿದೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಪ್ರಸಕ್ತ 58.66 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಮೆಟ್ಟೂರಿನಿಂದ 4.905 ಟಿಎಂಸಿ ಅಡಿ ಹಾಗೂ ಭವಾನಿಯಿಂದ 0.618 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಒಟ್ಟಾರೆ 24.705 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ ಎಂದು ಕರ್ನಾಟಕ ತಿಳಿಸಿದೆ.
ಇದನ್ನೂ ಓದಿ: Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ