ಪಟನಾ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆಗಳನ್ನು ಸೋರಿಕೆ (NEET Paper Leak) ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಗುರುವಾರ (ಜೂನ್ 27) ಬಂಧಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ (CBI) ವಹಿಸಿದ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಬಿಹಾರದ ಪಟನಾದವರಾದ ಮನೀಶ್ ಕುಮಾರ್ ಹಾಗೂ ಆಶುತೋಷ್ ಎಂಬುವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮೊದಲು ಇಬ್ಬರೂ ಆರೋಪಿಗಳನ್ನು ವಿಚಾರಣೆಗೆ ಕರೆದ ಅಧಿಕಾರಿಗಳು, ನಂತರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮನೀಶ್ ಕುಮಾರ್ ಹಾಗೂ ಆಶುತೋಷ್ ಅವರು ವಿದ್ಯಾರ್ಥಿಗಳಿಗೆ ಖಾಲಿ ಇರುವ ಶಾಲೆಯೊಂದಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಿದ್ದರು. ಖಾಲಿ ಇರುವ ಶಾಲೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಇವರು ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಹಂಚಿದ್ದರು ಎಂದು ತಿಳಿದುಬಂದಿದೆ. ಕೆಲ ವಿದ್ಯಾರ್ಥಿಗಳಿಗೆ ಇವರೇ ತಮ್ಮ ಮನೆಯಲ್ಲಿ ಆಶ್ರಯ ಕೂಡ ನೀಡಿದ್ದರು ಎನ್ನಲಾಗಿದೆ.
CBI arrests two from Bihar's Patna in alleged irregularities in NEET-UG exam
— ANI Digital (@ani_digital) June 27, 2024
Read @ANI Story | https://t.co/sIBqEdHVir#CBI #NEET #Bihar pic.twitter.com/UBMiANi134
ಇಬ್ಬರೂ ದುರುಳರು ಪಟನಾದಲ್ಲಿರುವ ಬಾಯ್ಸ್ ಹಾಸ್ಟೆಲ್‌ನಲ್ಲಿ ನೀಟ್ ಬರೆಯುವ ಅಭ್ಯರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಮೇ 5ರಂದು ನೀಟ್ ಪರೀಕ್ಷೆ ನಡೆದಿದ್ದು, ಮೇ 4ರಂದು ಅಭ್ಯರ್ಥಿಗಳು ಹಾಸ್ಟೆಲ್‌ನಲ್ಲಿದ್ದು ಸೋರಿಕೆಯಾಗಿದ್ದ ಪ್ರಶ್ನೆಗಳನ್ನು ಓದಿಕೊಂಡು, ಉತ್ತರ ಬರೆದು, ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಇವರು ಅನುಕೂಲ ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ, ಇಬ್ಬರನ್ನೂ ಅಧಿಕಾರಿಗಳು ಬಂದಿಸಿದ್ದಾರೆ.
ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮದ ಕುರಿತು ತನಿಖೆ ಆರಂಭಿಸಿರುವ ಸಿಬಿಐ, ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದೆ. ಹಾಗೆಯೇ, ಇನ್ನೂ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತಂಡಗಳು ಬಿಹಾರ ಹಾಗೂ ಗುಜರಾತ್‌ಗೆ ತೆರಳಿವೆ. ಇನ್ನು, ನೀಟ್ ಪಿಜಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಯುಜಿಸಿ ನೆಟ್ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ.
ನೀಟ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹಾ ನಿರ್ದೇಶಕ ಸುಬೋಧ್ ಕುಮಾರ್ ಸಿಂಗ್ ಅವರನ್ನು ಕೇಂದ್ರ ಸರ್ಕಾರವು ಹುದ್ದೆಯಿಂದ ಕೆಳಗಿಳಿಸಿದೆ. ಅವರ ಜಾಗಕ್ಕೆ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಿದೆ. ಶನಿವಾರ (ಜೂನ್ 22) ಸಿಬಿಐ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರವು, “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿತ್ತು.
ಇದನ್ನೂ ಓದಿ: Droupadi Murmu: ನೀಟ್ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು