Site icon Vistara News

ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ

Khalistanis Celebrate Indira Gandhi Assassination

Celebration of Indira Gandhi's assassination; The insolence of Khalistanis in Canada is condemnable

ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕುವ ಬ್ಲ್ಯೂ ಸ್ಟಾರ್ ಕಾರ್ಯಾಚರಣೆಗೆ 39 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ, ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿ ಹತ್ಯೆ ಕುರಿತ ಸ್ತಬ್ಧಚಿತ್ರ ಪ್ರದರ್ಶಿಸಿ ಉದ್ಧಟತನ ಮೆರೆದಿದ್ದಾರೆ. ಖಲಿಸ್ತಾನಿಗಳ ಈ ಉದ್ಧಟತನ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳದ ಕೆನಡಾ ಸರ್ಕಾರದ ನಿಷ್ಕ್ರಿಯತೆ ಎರಡೂ ಖಂಡನೀಯ. ಒಂದು ಕಾಲದಲ್ಲಿ ಖಲಿಸ್ತಾನಿಗಳ ಬೆನ್ನೆಲುಬು ಮುರಿದ ಇಂದಿರಾ ಗಾಂಧಿಯವರು ಇಂದಿಗೂ ಅವರಿಗೆ ದುಃಸ್ವಪ್ನದಂತೆ ಕಾಡುತ್ತಿದ್ದಾರೆ ಎಂಬುದು ಇದರಿಂದ ಅರ್ಥವಾಗುತ್ತದೆ. ಕೆನಡಾದಲ್ಲಿರುವ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ. ವಿದೇಶಾಂಗ ಸಚಿವ ಜೈಶಂಕರ್ ಕೂಡ ಈ ಘಟನೆಯನ್ನು ಖಂಡಿಸಿ, ಕೆನಡಾ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ಇಂದಿರಾ ಗಾಂಧಿ ಈ ದೇಶ ಕಂಡ ಅಪ್ರತಿಮ, ದಿಟ್ಟ ಪ್ರಧಾನಮಂತ್ರಿ. ದೇಶದ ಭದ್ರತೆ, ಸಾರ್ವಭೌಮತೆಗಳಿಗೆ ಸಂಬಂಧಿಸಿ ಅವರು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳು ಅನುಕರಣೀಯ. ಪಾಕಿಸ್ತಾನದೊಳಗೆ ಸೇನೆಯನ್ನು ನುಗ್ಗಿಸಿ, ಸಾವಿರಾರು ಪಾಕ್ ಸೈನಿಕರು ಭಾರತೀಯ ಸೇನೆ ಎದುರು ಮಂಡಿಯೂರುವಂತೆ ಮಾಡಿ ಬಾಂಗ್ಲಾ ದೇಶದ ಸೃಷ್ಟಿಗೆ ಕಾರಣರಾದವರು ಇಂದಿರಾ ಗಾಂಧಿ. ಪಂಜಾಬ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮಿತಿ ಮೀರಿದ ಸಂದರ್ಭದಲ್ಲಿ ಭಯೋತ್ಪಾದಕರು ಅವಿತು ಕುಳಿತಿದ್ದ ಸ್ವರ್ಣ ಮಂದಿರದೊಳಗೆ ಸೇನೆಯನ್ನು ನುಗ್ಗಿಸಿ, ಖಲಿಸ್ತಾನಿಗಳ ಬೆನ್ನುಮೂಳೆ ಮುರಿದವರು ಇಂದಿರಾ ಗಾಂಧಿ. ಅಂದು ಅವರು ಬ್ಲ್ಯೂ ಸ್ಟಾರ್ ಕಾರ್ಯಾಚರಣೆಯ ದಿಟ್ಟ ನಿರ್ಧಾರ ಕೈಗೊಳ್ಳದೆ ಹೋಗಿದ್ದರೆ ಪಂಜಾಬ್ ಭಾರತದಿಂದ ಪ್ರತ್ಯೇಕಗೊಳ್ಳುವ ಅಪಾಯ ಇತ್ತು. ಇದರ ಮೂಲಕ ಅವರು ಸಂಪ್ರದಾಯವಾದಿ ಸಿಕ್ಖರ ಕೋಪವನ್ನೂ ಎದುರಿಸಬೇಕಾಗಿ ಬಂದರೂ ಲೆಕ್ಕಿಸಲಿಲ್ಲ. ಆದರೆ ಇಂಥ ಧೀರ ನಿರ್ಧಾರಕ್ಕೆ ಅವರು ತಮ್ಮ ಪ್ರಾಣವನ್ನೇ ಅರ್ಪಿಸಬೇಕಾಯಿತು ಎಂಬುದು ದುಃಖಕರ.

ಒಂದು ಕಾಲದಲ್ಲಿ ಅಬ್ಬರಿಸಿ ತಣ್ಣಗಾಗಿದ್ದ ಖಲಿಸ್ತಾನ ಉಗ್ರವಾದ ಮತ್ತೆ ತಲೆ ಎತ್ತುತ್ತಿರುವುದರ ಸೂಚನೆ ಇದು. 1980-90ರ ದಶಕದಲ್ಲಿ ಹುಟ್ಟಿಕೊಂಡ ಈ ಪ್ರತ್ಯೇಕತಾವಾದ ಮುಂದೆ ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಇದೀಗ ಇವರು ಮತ್ತೆ ಯಾವ ಮಟ್ಟಕ್ಕೆ ಹೋಗಿದ್ದಾರೆಂದರೆ, ಪಂಜಾಬ್‌ನ ಪೊಲೀಸ್ ಠಾಣೆಗಳ ಮೇಲೆಯೇ ರಾಕೆಟ್ ಲಾಂಚರ್ ಬಳಸಿ ದಾಳಿ ಮಾಡುವಷ್ಟು. ಪಂಜಾಬ್‌ಗೆ ಅಕ್ರಮವಾಗಿ ಪಾಕಿಸ್ತಾನ ಗಡಿಯಾಚೆಯಿಂದ ಒಳನುಸುಳುತ್ತಿರುವ ಡ್ರಗ್ಸ್‌ ಜಾಲದಲ್ಲೂ ಖಲಿಸ್ತಾನ್ ಶಕ್ತಿಗಳು ಕ್ರಿಯಾಶೀಲವಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Indira Gandhi: ಇಂದಿರಾ ಗಾಂಧಿ ಹತ್ಯೆಗೆ ಕೆನಡಾದಲ್ಲಿ ಖಲಿಸ್ತಾನಿಗಳ ಸಂಭ್ರಮ; ಖಡಕ್‌ ಎಚ್ಚರಿಕೆ ಕೊಟ್ಟ ಜೈಶಂಕರ್‌

ಅನೇಕ ಭಾರತ ವಿರೋಧಿ ಶಕ್ತಿಗಳು ಇಂದು ಹೊರಗಿನ ಕೆಲ ದೇಶಗಳಲ್ಲಿ ಕಾರ್ಯಪ್ರವೃತ್ತವಾಗಿರುವುದು ನಾವು ಗಮನಿಸಬಹುದು. ಇಸ್ಲಾಮಿಕ್‌ ಮತಾಂಧರು ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾ ಮುಂತಾದ ಕಡೆ ಕಾರ್ಯಾಚರಿಸುತ್ತಿದ್ದರೆ, ಖಲಿಸ್ತಾನ್‌ ಸಹಾನುಭೂತಿಪರರು ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಇದ್ದುಕೊಂಡು ಪಂಜಾಬ್‌ನಲ್ಲಿರುವ ಉಗ್ರರಿಗೆ ತಾತ್ವಿಕ- ಧನಬೆಂಬಲ ನೀಡುತ್ತಿದ್ದಾರೆ. ಕೆನಡಾ, ಆಸ್ಟ್ರೇಲಿಯಗಳಲ್ಲಿ ಭಾರತದ ಎಂಬೆಸಿಗಳ ಮುಂದೆ ಪ್ರತಿಭಟನೆ, ದೇವಾಲಯಗಳ ವಿಧ್ವಂಸ ಮುಂತಾದ ಕೃತ್ಯಕ್ಕೂ ಮುಂದಾಗಿದ್ದಾರೆ. ಇದನ್ನು ಭಾರತ ಸರ್ಕಾರ ಕಟು ವಾಕ್ಯಗಳಲ್ಲಿ ಖಂಡಿಸಿ, ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಯಾ ಸರ್ಕಾರಗಳನ್ನು ಒತ್ತಾಯಿಸದೇ ಹೋದರೆ ಈ ಪ್ರವೃತ್ತಿ ಹಾಗೇ ಮುಂದುವರಿದು ಇನ್ನಷ್ಟು ಮುಜುಗರ ಸೃಷ್ಟಿಸಲಿದೆ. ಭಾವಿ ಭಯೋತ್ಪಾದಕರ ಸ್ಲೀಪರ್‌ ಸೆಲ್‌ಗಳಾದ ಇವುಗಳನ್ನು ಮೊಳಕೆಯಲ್ಲೇ ಚಿವುಟಬೇಕಿದೆ. ಕೆನಡಾದಲ್ಲಿ ಮಿತಿ ಮೀರಿರುವ ಸಿಖ್ ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಅಲ್ಲಿನ ಆಡಳಿತವಾಗಲೀ, ರಾಜಕೀಯ ಪಕ್ಷಗಳಾಗಲೀ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಅಲ್ಲಿ ಗಣನೀಯವಾಗಿರುವ ಸಿಖ್ಖರು ಹಾಗೂ ಅವರ ಮತ ಬ್ಯಾಂಕ್.‌ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಕೆನಡಾದಿಂದಲೇ ಸಕ್ರಿಯವಾಗಿದ್ದುಕೊಂಡು ಪಂಜಾಬಿನಲ್ಲಿ ಮತ್ತೆ ಭಯೋತ್ಪಾದನೆ ಬಿತ್ತುತ್ತಿದೆ. ಸಿಖ್ ಪ್ರತ್ಯೇಕತಾವಾದಿಗಳಿಂದ ಅಲ್ಲಿಯ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಕೆನಡಾ ಮೇಲೆ ಕೇಂದ್ರ ಸರ್ಕಾರ ಮತ್ತಷ್ಟು ಒತ್ತಡ ಹೇರಬೇಕು.

Exit mobile version