ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಬಿಜೆಪಿ ಸೇರಿ ಎಲ್ಲ ಪಕ್ಷಗಳೂ ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ. ಅದರಲ್ಲೂ, ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಅಳೆದು-ತೂಗಿ ಬಿಜೆಪಿ ಟಿಕೆಟ್ ನೀಡುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು (Central Government) ಅಭಿವೃದ್ಧಿ ಮೂಲಕ ಜನರ ಗಮನ ಸೆಳೆಯಲು ಮುಂದಾಗಿದ್ದು, 2014ರಲ್ಲಿ ದೇಶದ ಆರ್ಥಿಕ ರ‍್ಯಾಂಕಿಂಗ್ (Economic Ranking) ಹೇಗಿತ್ತು, ಈಗ ಹೇಗಿದೆ ಎಂಬುದರ ಲೆಕ್ಕಾಚಾರ ಇರುವ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಹೌದು, ಆರ್ಥಿಕತೆ ರ‍್ಯಾಂಕಿಂಗ್ ಸೇರಿ ಹಲವು ವಿಷಯಗಳಲ್ಲಿ ಭಾರತ 2014ರಲ್ಲಿ ಯಾವ ರ‍್ಯಾಂಕಿಂಗ್ ಹೊಂದಿತ್ತು? ಈಗ ಎಷ್ಟನೇ ಸ್ಥಾನ ಹೊಂದಿದೆ ಎಂಬುದರ ತಾಳೆಯ ಮಾಹಿತಿಯನ್ನು ಕೇಂದ್ರ ಸರ್ಕಾರದ MyGovIndia ಎಕ್ಸ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಆರ್ಥಿಕತೆಯ (ಜಿಡಿಪಿ ಆಧಾರದ ಮೇಲೆ) ರ‍್ಯಾಂಕಿಂಗ್‌ನಲ್ಲಿ ಭಾರತವು 2014ರಲ್ಲಿ ಭಾರತವು ವಿಶ್ವದಲ್ಲೇ 10ನೇ ಸ್ಥಾನ ಪಡೆದಿತ್ತು. ಆದರೆ, 2024ರಲ್ಲಿ 5 ಸ್ಥಾನಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
From cray to slay: Glowin' up, India!
— MyGovIndia (@mygovindia) March 15, 2024
Take a sneak peek into how #NewIndia improved its rankings under the vision of PM @narendramodi. #ViksitBharat #TransformingIndia pic.twitter.com/kYj8nnQoWo
ಅಷ್ಟೇ ಅಲ್ಲ, ಸ್ಟೀಲ್ ಉತ್ಪಾದನೆಯಲ್ಲಿ ಭಾರತವು 2014ರಲ್ಲಿ 4ನೇ ಸ್ಥಾನದಲ್ಲಿದ್ದರೆ, ಈಗ 2ನೇ ಸ್ಥಾನದಲ್ಲಿದೆ. ಮೊಬೈಲ್ ಉತ್ಪಾದನೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತವು 2014ರಲ್ಲಿ 12ನೇ ಸ್ಥಾನದಲ್ಲಿದ್ದರೆ, ಈಗ 2ನೇ ಸ್ಥಾನಕ್ಕೇರಿದೆ. ದೇಶದಲ್ಲಿ 2014ರಲ್ಲಿ ಒಟ್ಟು 2 ಯುನಿಕಾರ್ನ್ (1 ಯುನಿಕಾರ್ನ್ ಎಂದರೆ 7,500 ಕೋಟಿ ರೂ. ಬಂಡವಾಳದ ಕಂಪನಿ ಎಂದರ್ಥ) ಇದ್ದರೆ, ಈಗ 100ಕ್ಕೂ ಅಧಿಕ ಯುನಿಕಾರ್ನ್‌ಗಳಿವೆ. ಕ್ಲೈಮೇಟ್ ಚೇಂಜ್ ಪರ್ಫಾರ್ಮೆನ್ಸ್ ಇಂಡೆಕ್ಸ್‌ನಲ್ಲಿ 10 ವರ್ಷದ ಹಿಂದೆ ಭಾರತದ ರ‍್ಯಾಂಕಿಂಗ್ 30 ಇದ್ದರೆ ಈಗ 7ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Modi Road Show: ಮೋದಿ ರೋಡ್ ಶೋಗೆ ಕೋರ್ಟ್ ಅಸ್ತು; ತಮಿಳುನಾಡು ಸರ್ಕಾರಕ್ಕೆ ಮುಖಭಂಗ
ಗ್ಲೋಬಲ್ ಇನೋವೇಷನ್ ಇಂಡೆಕ್ಸ್‌ನಲ್ಲಿ 2014ರಲ್ಲಿ 76ನೇ ಸ್ಥಾನದಲ್ಲಿದ್ದರೆ 2024ರಲ್ಲಿ ಇದು 40ನೇ ಸ್ಥಾನಕ್ಕೆ ಪ್ರಗತಿ ಕಂಡಿದೆ. ವಿಶ್ವ ಬ್ಯಾಂಕ್‌ನ ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್‌ನಲ್ಲಿ ಭಾರತ 54ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಏರಿಕೆಯಾಗಿದೆ. ಲಿಂಗ ಅಸಮಾನತೆ ಸೂಚ್ಯಂಕದಲ್ಲಿ 127ನೇ ಸ್ಥಾನದಿಂದ 108ನೇ ಸ್ಥಾನ ಪಡೆದಿದೆ. ಸುಲಭವಾಗಿ ಉದ್ಯಮ ಕೈಗೊಳ್ಳುವ ಸೂಚ್ಯಂಕದಲ್ಲಿ 134ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರವು ಹೇಗೆ ಅಭಿವೃದ್ಧಿಗೆ ಕಾರಣವಾಗಿದೆ ಎಂಬುದನ್ನು ಮನವರಿಕೆ ಮಾಡಲು ಸರ್ಕಾರ ಯತ್ನಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ