ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET exam 2024) ಪಠ್ಯೇತರ ಪ್ರಶ್ನೆಗಳಿಂದ ಉಂಟಾಗಿದ್ದ ಗೊಂದಲವನ್ನು ಸರ್ಕಾರ ಪರಿಹರಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯುಜಿಸಿಇಟಿ -2024ರ ನಾಲ್ಕು ವಿಷಯದ ಪರೀಕ್ಷೆಗಳಿಗೆ ತಾತ್ಕಾಲಿಕ ಸರಿ ಉತ್ತರಗಳನ್ನು (Key Answers) ಪ್ರಕಟಿಸಿದೆ.
ಮೇ 7ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದಿಂದ ಹೊರತಾದ 50 ಪ್ರಶ್ನೆಗಳನ್ನು ಕೇಳಿದ್ದು, ಇವುಗಳನ್ನು ಕೀ ಉತ್ತರದ ಪಟ್ಟಿಯಿಂದ ಕೈ ಬಿಡಲಾಗಿದೆ. ಉಳಿದ 190 ಪ್ರಶ್ನೆಗಳಿಗೆ ಕೀ ಉತ್ತರಗಳನ್ನು ಪ್ರಾಧಿಕಾರದ kea.kar.nic.in ವೆಬ್ಸೈಟ್‌ನನಲ್ಲಿ ಪ್ರಕಟಿಸಲಾಗಿದೆ. ಇವುಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪ್ರಾಧಿಕಾರದ ಆನ್ಲೈನ್ ಪೋರ್ಟಲ್ ಮೂಲಕ ಏಪ್ರಿಲ್ 30ರಂದು ಬೆಳಗ್ಗೆ 11ರಿಂದ ಮೇ 7ರ ಬೆಳಗ್ಗೆ 11ರೊಳಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಮೂಲಕ ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿ ಉಂಟಾಗಿದ್ದ ಗೊಂದಲ, ಮರುಪರೀಕ್ಷೆಗಳ ಆತಂಕ ಬಗೆಹರಿದಿದೆ. ಸರ್ಕಾರ ರಚಿಸಿದ್ದ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಸಿಇಟಿ ಮರುಪರೀಕ್ಷೆ ನಡೆಸದೇ ಇರಲು ಹಾಗೂ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ವೇಳೆ ಇನ್ನು ಮುಂದೆ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಈ ರೀತಿಯ ಲೋಪಗಳಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಏ.18 ಮತ್ತು 19ರಂದು ನಡೆಸಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು.
ಇದನ್ನೂ ಓದಿ: CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ