ಮಂಗಳೂರು: ಸರಣಿ ದರೋಡೆ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಪೊಲೀಸರು ಚೆಡ್ಡಿ ಬನಿಯನ್ ಗ್ಯಾಂಗ್ (Chaddi Baniyan Gang) ಸದಸ್ಯರನ್ನು ಬಂಧಿಸಿದ್ದಾರೆ. ಮಂಗಳೂರಿನ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಡ್ಡಿ, ಬನಿಯನ್ ಗ್ಯಾಂಗ್ಗೆ ಸೇರಿದ ಮಧ್ಯಪ್ರದೇಶದ ನಾಲ್ಕು ಜನ ದರೋಡೆಕೋರರ ಬಂಧವಾಗಿದೆ. ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧನಕ್ಕೆ ಒಳಗಾದವರು.
ಇಂದು ರಾತ್ರಿ ವೃದ್ಧ ದಂಪತಿಗಳಿದ್ದ ಮನೆಗೆ ಕನ್ನ ಹಾಕಿದ್ದ ಈ ತಂಡ ದರೋಡೆ ಮಾಡಿತ್ತು. ವೃದ್ಧ ದಂಪತಿಗೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦00 ರೂಪಾಯಿ ನಗದು ಹಣವನ್ನು ದರೋಡೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ನಲ್ಲಿ ದರೋಡೆಕೋರರರು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಬಳಿಕ ಬಸ್ ಫಾಲೋ ಮಾಡಿ ಬಂಧಿಸಿದ್ದರು.
ಏನಾಗಿತ್ತು ದರೋಡೆ?
ಮಂಗಳೂರಿನಲ್ಲಿ (Mangalore news) ಕಮಿಷನರೆಟ್ ವ್ಯಾಪ್ತಿಯಲ್ಲಿ ಖತರ್ನಾಕ್ ಚಡ್ಡಿ ಗ್ಯಾಂಗ್ (Chaddi gang) ತನ್ನ ಬಾಲ ಬಿಚ್ಚಿದೆ. ಮಂಗಳೂರು ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮತ್ತೊಂದು ದರೋಡೆ (Robbery Case) ನಡೆದಿದ್ದು, ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಲಾಗಿದೆ.
ವಿಕ್ಟರ್ ಮತ್ತು ಪೆಟ್ರೀಷಾ ದಂಪತಿ ಹಲ್ಲೆಗೊಳಗಾದವರು. ರಾತ್ರಿ 2 ಗಂಟೆ ಹೊತ್ತಿಗೆ ಕಿಟಕಿಯ ಸರಳು ಕತ್ತರಿಸಿ ಈ ಚಡ್ಡಿ ಗ್ಯಾಂಗ್ ದಂಪತಿಯ ಮನೆಗೆ ನುಗ್ಗಿದೆ. ಪ್ರತಿರೋಧಿಸಿದ ವೃದ್ಧ ದಂಪತಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು ಲೂಟಿ ಮಾಡಿದೆ. 4 ಜನ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿತ್ತು.
ಘಟನೆಯಲ್ಲಿ ವಿಕ್ಟರ್ ಅವರಿಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ ಕಾರನ್ನು ಕೂಡ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಡ್ಡಿ ಟಿಶರ್ಟ್ ಧರಿಸಿ ಬರುವ ಈ ಗ್ಯಾಂಗ್‌ನಲ್ಲಿ 4-5 ಜನರಿದ್ದಾರೆ. ಒಬ್ಬಾತ ರಸ್ತೆಯ ಬದಿಯಲ್ಲಿ ಅವಿತು ಕೂತು ಒಳಗಿದ್ದವರಿಗೆ ಸಿಗ್ನಲ್ ಕೊಟ್ಟರೆ, ಇನ್ನ ಮೂವರು ಒಳಗೆ ನುಗ್ಗಿ ಕಳವು, ದರೋಡೆ ಮಾಡುತ್ತಾರೆ ಎಂದು ಗೊತ್ತಾಗಿದೆ.
ಉಡುಪಿಯಲ್ಲಿ ಕೆಲ ತಿಂಗಳ ಹಿಂದೆ ʼಬನಿಯನ್ ಗ್ಯಾಂಗ್ʼ ಸಕ್ರಿಯವಾಗಿತ್ತು. ಬನಿಯನ್ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.
ಹೀಗೆ ಚಿತ್ರ-ವಿಚಿತ್ರವಾಗಿ ವೇಷ ಧರಿಸಿ ಬರುವ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ. ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿತ್ತು. ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿತ್ತು. ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುವಂತಿತ್ತು.
ಇದನ್ನೂ ಓದಿ: Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ
ಬೆಂಗಳೂರು ಹಾಗೂ ರಾಯಚೂರಿನಲ್ಲೂ ಇಂಥ ಪ್ರಕರಣಗಳು ನಡೆದಿವೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಗ್ಯಾಂಗ್‌ನವರು ಸ್ಥಳೀಯರು ಇರಲಿಕ್ಕಿಲ್ಲ, ಅಂತಾರಾಜ್ಯ ಖದೀಮರಾಗಿರಬಹುದು ಎಂಬುದು ಪೊಲೀಸರ ಅಭಿಪ್ರಾಯವಾಗಿದೆ. ಇವರು ಒಂದು ನಗರದಲ್ಲಿ ದರೋಡೆ ನಡೆಸಿದ ಬಳಿಕ ಸ್ವಲ್ಪ ಕಾಲ ಆ ರಾಜ್ಯವನ್ನೇ ಬಿಟ್ಟು ಇನ್ನೊಂದು ಕಡೆ ಹೋಗಿ ದರೋಡೆ ನಡೆಸುತ್ತಿರುತ್ತಾರೆ. ಇದು ಪೊಲೀಸರ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳಲು ಇವರಿಗೆ ನೆರವಾಗುತ್ತಿದೆ ಎನ್ನಲಾಗಿದೆ.