Site icon Vistara News

Chaithra Hebbar : ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್‌ ನಿಗೂಢ ನಾಪತ್ತೆ; ಯಾರು ಈ ಶಾರುಖ್‌ ಶೇಖ್‌?

Chaithra Hebbar Missing Case

ಪುತ್ತೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾಲಯಲ್ಲಿ (Private University) ಪಿಎಚ್‌ಡಿ ಅಧ್ಯಯನ (PhD Study) ನಡೆಸುತ್ತಿದ್ದ ಪುತ್ತೂರು ಮೂಲದ ಬ್ರಾಹ್ಮಣ ಯುವತಿ ಚೈತ್ರಾ ಹೆಬ್ಬಾರ್‌ (Chaithra Hebbar Missing Case) ನಾಪತ್ತೆಯಾಗಿ ಫೆ. 25ಕ್ಕೆ ಒಂಬತ್ತು ದಿನಗಳು ಕಳೆದಿವೆ. ಫೆ. 17ರಿಂದ ನಾಪತ್ತೆಯಾಗಿರುವ ಈಕೆಯ ಬಗ್ಗೆ ಹಲವಾರು ಕಥೆಗಳು ಹರಡಿಕೊಂಡಿದ್ದು, ಪೊಲೀಸರಿಗೆ ಆಕೆಯನ್ನು ಹುಡುಕುವುದೇ ಒಂದು ಸಾಹಸವಾಗಿದೆ. ಆಕೆ ನಾಪತ್ತೆಯಾದ ದಿನದಿಂದ ಆಕೆಯೊಂದಿಗೆ ಆತ್ಮೀಯತೆಯಿಂದ ಇದ್ದ ಶಾರುಖ್‌ ಶೇಖ್‌ (Sharukh Shekh) ಎಂಬಾತ ಕೂಡಾ ನಾಪತ್ತೆಯಾಗಿದ್ದಾನೆ. ಹೀಗಾಗಿ ಇದು ಹಿಂದು-ಮುಸ್ಲಿಂ ಜೋಡಿ (Hindu Muslim) ಪಲಾಯನ, ಲವ್‌ ಜಿಹಾದ್‌ (Love Jihad) ಎಂಬಿತ್ಯಾದಿ ವ್ಯಾಖ್ಯಾನಗಳಿಗೂ ಕಾರಣವಾಗಿದೆ.

ಚೈತ್ರಾ ಹೆಬ್ಬಾರ್‌ ಮೂಲತಃ ಪುತ್ತೂರಿನ ಪುರಷರ ಕಟ್ಟೆ ನಿವಾಸಿ. ತಂದೆಯ ನಿಧನದ ಬಳಿಕ ಆಕೆ ಮಂಗಳೂರಿನ ದೊಡ್ಡಪ್ಪನ ಮನೆಯಲ್ಲಿದ್ದು, ಎಂಎಸ್‌ಸಿ ಮಾಡಿದ್ದಳು. ಮುಂದೆ ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಎಚ್‌ಡಿ ಮಾಡಲು ಆರಂಭಿಸಿದ್ದಳು. ಅದಕ್ಕೆ ಅನುಕೂಲವಾಗಲಿ ಎಂಬಂತೆ ಮಾಡೂರಿನಲ್ಲಿ ಪಿಜಿ ಒಂದಕ್ಕೆ ಸೇರಿದ್ದಳು. ಇದೀಗ ಅಲ್ಲಿಂದ ಆಕೆ ನಾಪತ್ತೆಯಾಗಿದ್ದಾಳೆ.

ಅವನೊಬ್ಬ ಬರುತ್ತಿದ್ದನಂತೆ ಶಾರುಖ್‌ ಶೇಖ್‌

ಚೈತ್ರಾ ಪಿಜಿಯಲ್ಲಿ ಉಳಿದುಕೊಂಡಿದ್ದಾಗ ಆಕೆಯನ್ನು ಭೇಟಿಯಾಗಲು ಒಬ್ಬ ಮುಸ್ಲಿಂ ಹುಡುಗ ಬರುತ್ತಿದ್ದ ಎನ್ನಲಾಗಿದೆ. ಆತನ ಹೆಸರು ಶಾರುಖ್‌ ಶೇಖ್‌. ಶಾರುಖ್‌ ಶೇಖ್‌ ಮೂಲತಃ ಬಂಟ್ವಾಳ ತಾಲೂಕಿನ ನೇರಳ ಕಟ್ಟೆಯವನು. ಆದರೆ, ಅವನು ಇದ್ದದ್ದು ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ. ಕೂರ್ನಡ್ಕ ಮತ್ತು ಪುರುಷರ ಕಟ್ಟೆ ಹತ್ತಿರ ಹತ್ತಿರ. ಹೀಗಾಗಿ ಚೈತ್ರಾ ಪುತ್ತೂರಿನಲ್ಲಿ ಇದ್ದಾಗಲೇ ಅವರಿಬ್ಬರಿಗೆ ಪರಿಚಯವಾಗಿರಬಹುದು ಎಂದು ಹೇಳಲಾಗಿದೆ.

ಶಾರುಖ್‌ ಶೇಖ್‌ ಚೈತ್ರಾ ಹೆಬ್ಬಾರ್‌ಳನ್ನು ಭೇಟಿಯಾಗುತ್ತಿರುವುದು ಮಾಡೂರಿನ ಬಜರಂಗ ದಳದ ಯುವಕರ ಕಣ್ಣಿಗೆ ಬಿದ್ದಿತ್ತು, ಇದರಿಂದ ಮುಂದೆ ಅಪಾಯವಿದೆ ಎಂದು ಅರಿತ ಅವು ಚೈತ್ರಾಳ ದೊಡ್ಡಪ್ಪನಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ. ದೊಡ್ಡಪ್ಪ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಬಹುಶಃ ಅವರು ಆಕೆಯ ಬಳಿ ಈ ವಿಚಾರದ ಪ್ರಸ್ತಾಪ ಮಾಡಿದ್ದಾರೆ.

ಅಷ್ಟೊತ್ತಿಗಾಗಲೇ ಆಕೆ ನಾಪತ್ತೆಯಾಗಿದ್ದಾಳೆ. ಆಕೆ ಶಾರುಖ್‌ ಶೇಖ್‌ ಜತೆಗೆ ಸ್ಕೂಟರ್‌ನಲ್ಲಿ ಹೋಗಿದ್ದಾಳೆ ಎಂಬ ಮಾಹಿತಿ ಇದೆ‌ ಎನ್ನುತ್ತಾರೆ ಸ್ಥಳೀಯರು. ಆಕೆ ತನ್ನ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾಳೆ.‌ ಶಾರುಖ್‌ ಶೇಖ್‌ ಕೂಡಾ ಈಗ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ: Missing Case : ನಾಪತ್ತೆಯಾದ ಬಾಲಕನ ಹಿಂದೆ ಭಾರಿ ನಿಗೂಢತೆ; ಬಾಂಬ್‌ ತಯಾರಿಕರ ಕೈಗೆ ಸಿಲುಕಿದ್ದನಾ?

ಶಾರುಖ್‌ಗೆ ಡ್ರಗ್ಸ್‌ ಜಾಲದ ನಂಟಿತ್ತು? ಈಕೆಗೂ ಚಟ ಹಿಡಿಸಿದ್ದನಾ?

ಶಾರುಖ್‌ ಶೇಖ್‌ ಐಟಿಐ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ವಿದೇಶಕ್ಕೆ ಹೋಗಿದ್ದ. ಅಲ್ಲಿ ಯಾವುದೋ ತಪ್ಪಿನ ಕಾರಣಕ್ಕೆ ಕತಾರ್‌ ಜೈಲು ಸೇರಿದ್ದ. ಅಲ್ಲಿಂದ ಮರಳಿ ಬಂದವನು ಇಲ್ಲೇ ಏನೋ ಕೆಲಸ ಮಾಡಿಕೊಂಡಿದ್ದ.

ಈ ನಡುವೆ ಆತನಿಗೂ ಚೈತ್ರಾಗೂ ಪರಿಚಯವಾಗಿದೆ ಎನ್ನಲಾಗಿದೆ. ಡ್ರಗ್ಸ್‌ ಜಾಲದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಆತ ಚೈತ್ರಾಗೂ ಡ್ರಗ್ಸ್‌ ರುಚಿ ಹತ್ತಿಸಿದ್ದ ಎನ್ನಲಾಗಿದೆ. ಆತ ಅದೇ ಕಾರಣಕ್ಕೆ ಪಿಜಿಗೂ ಬರುತ್ತಿದ್ದ ಎಂಬ ಗುಮಾನಿದೆ.

ಚೈತ್ರಾಳ ಬಳಿ ಲಕ್ಷಾಂತರ ರೂ. ಇತ್ತು ಎಂದು ಹೇಳಲಾಗಿದೆ. ಆಕೆ ನಾಪತ್ತೆಯಾದ ಬಳಿಕ ಸುರತ್ಕಲ್‌ನ ಎಟಿಎಂನಲ್ಲಿ ಆಕೆಯ ಅಕೌಂಟ್‌ನಿಂದ ಹಣ ಡ್ರಾ ಮಾಡಲಾಗಿದೆ. ಇದು ತಿಳಿಯುತ್ತಿದ್ದಂತೆಯೇ ಪೊಲೀಸರು ಅಕೌಂಟ್‌ ಬ್ಲಾಕ್‌ ಮಾಡಿಸಿದ್ದಾರೆ.

ಈ ನಡುವೆ, ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ್ ಮುರಳಿ ಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ಚೈತ್ರಾ ಪತ್ತೆಗೆ ಪೊಲೀಸರಿಗೆ ಗಡುವು ನೀಡಿಲಾಗಿದೆ. ಎರಡು ದಿನದ ಒಳಗೆ ಪತ್ತೆ ಹಚ್ಚದಿದ್ದರೆ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.

Exit mobile version