Site icon Vistara News

Chakravarthy Sulibele: ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ನಿರ್ಬಂಧ, ನಡುದಾರಿಯಿಂದ ವಾಪಸ್ ಕಳಿಸಿದ ಪೊಲೀಸರು

Chakravarthy Sulibele

ಕಲಬುರಗಿ: ರಾಷ್ಟ್ರೀಯವಾದಿ ಭಾಷಣಕಾರ, ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ಕಲಬುರಗಿ (kalaburagi news) ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲೆಯೊಳಗೆ ಪ್ರವೇಶಿಸಲಿದ್ದ ಅವರನ್ನು ನಡುರಾತ್ರಿ ತಡೆದು ಮರಳಿ ಕಳುಹಿಸಲಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪೂರ ಬಳಿ ಮಧ್ಯರಾತ್ರಿ ಈ ನಾಟಕೀಯ ಪ್ರಹಸನ ನಡೆದಿದೆ. ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆಗೆ ಪ್ರವೇಶ ನಿರ್ಭಂಧ ವಿಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಬೀದರ್‌ ಜಿಲ್ಲೆಯ ಬಾಲ್ಕಿಯಿಂದ ಕಲಬುರಗಿ ಜಿಲ್ಲೆಯೊಳಗೆ ಆಗಮಿಸಲು ಪೊಲೀಸರು ಅವರನ್ನು ಬಿಡಲಿಲ್ಲ.

ಚಕ್ರವರ್ತಿ ಸೂಲಿಬೆಲೆ ಅವರ ʼಪ್ರಚೋದನಾಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆ ಇದೆʼ ಎನ್ನುವ ಕಾರಣದಿಂದ ಪ್ರವೇಶ ನಿರ್ಭಂಧಿಸಲಾಗಿದೆ. ಮಧ್ಯರಾತ್ರಿ 1 ಗಂಟೆಗೆ ಕಲಬುರಗಿಯೊಳಗೆ ಬರುತ್ತಿದ್ದ ಸೂಲಿಬೆಲೆ ಅವರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಲು ಮುಂದಾದಾಗ ಪೊಲೀಸರು ಮತ್ತು ಚಕ್ರವರ್ತಿ ನಡುವೆ ತೀವ್ರ ವಾಗ್ವಾದ ನಡೆಯಿತು. ಉಪವಿಭಾಗಾಧಿಕಾರಿ ಅವರ ಆದೇಶದ ಹಿನ್ನೆಲೆಯಲ್ಲಿ ಸೂಲಿಬೆಲೆ ಅವರಿಗೆ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡದೇ ಮರಳಿ ಬೀದರ್ ಕಡೆಗೆ ಪೊಲೀಸರು ಕಳುಹಿಸಿದರು.

“ರಾಜ್ಯದ ಸಿದ್ದರಾಮಯ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಂವಿಧಾನದ ಕುರಿತು ದೊಡ್ಡ ದೊಡ್ಡ ಸಮ್ಮೇಳನ ಆಯೋಜಿಸುವವರು, ಟೀಕಾಕಾರರ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನ ವಿಜಯನಗರದಲ್ಲಿ ಆಯೋಜಿಸಲಾದ ನಮೋಭಾರತ್‌ (Namo Bharat) ಕಾರ್ಯಕ್ರಮಕ್ಕೂ ಕಾಂಗ್ರೆಸ್‌ ಕಾರ್ಯಕರ್ತರಿಂದ (Congress activists protest) ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ, ಪ್ರತಿಭಟನೆಯ ನಡುವೆಯೇ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಇದಕ್ಕೆ ಬಿಜೆಪಿಯವರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಪೊಲೀಸರು-ಬಿಜೆಪಿಗರ ಮಧ್ಯೆ ಮಾತಿನ ಚಕಮಕಿ, ನೂಕಾಟ-ತಳ್ಳಾಟವೂ ನಡೆದಿತ್ತು.

ಇದನ್ನೂ ಓದಿ: Chakravarti Sulibele : ಸೂಲಿಬೆಲೆ ನಮೋಭಾರತ್‌ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ನಿಂದ ವಿರೋಧ

Exit mobile version