Site icon Vistara News

ವಿಸ್ತಾರ ಸಂಪಾದಕೀಯ: ಚಾಂಪಿಯನ್​ ಆರ್​​ಸಿಬಿ ಮಹಿಳೆಯರು ಯುವ ಅಥ್ಲೀಟ್​​ಗಳಿಗೆ ಪ್ರೇರಣೆ

RCB Team

ಸ್ಮೃತಿ ಮಂಧಾನಾ ನೇತೃತ್ವದ ರಾಯಲ್​ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್​​​ನಲ್ಲಿ (WPL 2024) ವಿಕ್ರಮಗೈದಿದೆ. ಪ್ರಶಸ್ತಿ ಫೈಟ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್​ಗಳ ಅಧಿಕಾರಯುತ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಅಲ್ಲಿಗೆ ಬೆಂಗಳೂರು ಮೂಲದ ಆರ್​ಸಿಬಿ ಫ್ರಾಂಚೈಸಿಯ 17 ವರ್ಷಗಳ ಪ್ರಶಸ್ತಿಯ ಕೊರಗು ಅಂತ್ಯಗೊಂಡಿತು. ಪುರುಷರ ತಂಡ 16 ವರ್ಷಗಳು ಆಡಿ ಗೆಲ್ಲಲಾಗದ ದೊಡ್ಡ ಪ್ರಶಸ್ತಿಯನ್ನು ಮಹಿಳೆಯರ ಬಳಗ ತನ್ನದಾಗಿಸಿಕೊಂಡಿದೆ. ಕನ್ನಡಿಗರ ಹಾಗೂ ವಿಶ್ವಾದ್ಯಂತ ಇರುವ ಆರ್​ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಇನ್ನೇನು ಬೇಕು? “ಈ ಸಲ ಕಪ್​ ನಮ್ಮದೇ’ ಎಂದು ಹೇಳಿ ಹೇಳಿ ಸುಸ್ತಾಗಿದ್ದ ಅವರೆಲ್ಲರಿಗೂ ಬೂಸ್ಟರ್ ಡೋಸ್ ಕೊಟ್ಟಂತಾಗಿದೆ. ಸೋಶಿಯಲ್ ಮೀಡಿಯಾಗಳೆಲ್ಲವೂ ಆರ್​ಸಿಬಿಯ ವನಿತೆಯರಿಗೆ ಸಲ್ಲಿಕೆಯಾದ ಪ್ರೀತಿ, ಅಭಿಮಾನಗಳಿಂದ ತುಂಬಿದೆ.

ಫೈನಲ್​ನಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟ್​ ಮಾಡಿ ಬೃಹತ್​ ಮೊತ್ತ ಪೇರಿಸುವ ಗುರಿ ಹೊಂದಿತ್ತು. ಆದರೆ, ಆರ್​ಸಿಬಿ ತಂಡ ತನ್ನ ಪ್ರಖರ ಬೌಲಿಂಗ್ ಅಸ್ತ್ರಗಳ ಮೂಲಕ 113 ರನ್​ಗಳಿಗೆ ಆ ತಂಡವನ್ನು ಕಟ್ಟಿಹಾಕಿತು. ಸಾಧಾರಣ ಗುರಿ ಬೆನ್ನಟ್ಟಲು ಹೊರಟ ಆರ್​​ಸಿಬಿ ಬ್ಯಾಟರ್​ಗಳು ವಿಶ್ವಾಸದಿಂದಲೇ ಆಡಿದರು. ಡೆಲ್ಲಿಯ ನಿಧಾನಗತಿಯ ಪಿಚ್​ನಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಿ ಗೆಲ್ಲುವುದು ಅಸಾಧ್ಯ ಎಂದು ಅರಿತು ನಿಧಾನವಾಗಿ ರನ್ ಗಳಿಸಿ ಗೆಲ್ಲುವ ಯೋಜನೆ ಕಾರ್ಯಗತಗೊಳಿಸಿದರು. ಅವರ ಲೆಕ್ಕಾಚಾರ ಸಫಲಗೊಂಡಿತು. 19.3 ಓವರ್​ಗಳಲ್ಲಿ ಕೇವಲ 2 ವಿಕೆಟ್​​ ನಷ್ಟಕ್ಕೆ ಪಂದ್ಯವನ್ನು ವಶಪಡಿಸಿಕೊಂಡಿತು. ಆರ್​ಸಿಬಿ ತಂಡದ ಸದಸ್ಯರೆಲ್ಲರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮೈದಾನಕ್ಕೆ ನುಗ್ಗಿ ಕುಣಿದು ಕುಪ್ಪಳಿಸಿದರು.

ಮಹಿಳೆಯ ಪ್ರೀಮಿಯರ್ ಲೀಗ್​ ಆರಂಭಗೊಂಡಿದ್ದು 2023ರಲ್ಲಿ. ಮೊದಲ ಆವೃತ್ತಿಯಲ್ಲಿ ಬಹುತೇಕ ಇದೇ ಆಟಗಾರ್ತಿಯನ್ನು ಹೊಂದಿದ್ದ ತಂಡಕ್ಕೆ ನಿರಾಸೆಯೇ ಎದುರಾಗಿತ್ತು. ಪ್ಲೇಆಫ್ ಹಂತಕ್ಕೇರಲೂ ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಆವೃತ್ತಿಯ ಲೀಗ್​ನಲ್ಲಿಯೇ ಫೀನಿಕ್ಸ್​ನಂತೆ ಚೇತರಿಸಿಕೊಂಡು ಟ್ರೋಫಿ ಗೆದ್ದಿದೆ. ಇದರೊಂದಿಗೆ ಪುರುಷರಿಗೆ ಆಗದ್ದನ್ನು ಮಹಿಳೆ ಸಾಧಿಸಿ ತೋರಿಸಬಲ್ಲಳು ಎಂಬ ಮಾತಿಗೆ ಸಾಕ್ಷಿ ಒದಗಿಸಿದೆ.

ಹಾಲಿ ಟೂರ್ನಿಯಲ್ಲಿ ಅರ್​​ಸಿಬಿ ಆರಂಭ ಉತ್ತಮವಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಸತತವಾಗಿ ಗೆಲ್ಲುವ ಮೂಲಕ ವಿಶ್ವಾಸ ಮೂಡಿಸಿಕೊಂಡಿತ್ತು. ಆದರೆ, ನಂತರ ಸೋಲಿನ ಸುಳಿಗೆ ನಿಧಾನವಾಗಿ ಸಿಲುಕಲು ತೊಡಗಿತು. ನಂತರ ಎರಡು ಪಂದ್ಯಗಳಲ್ಲಿ ಸೋಲು ಕಂಡಿತು. ಆ ಬಳಿಕ ಒಂದು ಪಂದ್ಯದಲ್ಲಿ ಗೆದ್ದರೂ ಮುಂದಿನ ಎರಡು ಹಣಾಹಣಿಗಳಲ್ಲಿ ಸೋಲು ಎದುರಾಯಿತು. ಹೀಗಾಗಿ ಪ್ಲೇಆಫ್ ಪ್ರವೇಶ ಕಷ್ಟವಾಯಿತು. ಆದರೆ, ಪ್ಲೇಆಫ್​ಗೇರಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್​ ಮುಂಬಯಿ ತಂಡವನ್ನು ಬಗ್ಗುಬಡಿಯಿತು. ಅಲ್ಲಿಗೆ ಆರ್​ಸಿಬಿ ವಿಶ್ವಾಸ ಹೆಚ್ಚಾಯಿತು. ಪ್ಲೇ ಆಫ್​ ಪಂದ್ಯದಲ್ಲಿ ಮತ್ತೊಮ್ಮೆ ಎದುರಾದ ಮುಂಬಯಿ ತಂಡಕ್ಕೆ ಮನೆ ದಾರಿ ತೋರಿಸಿ ಫೈನಲ್ ಗೆ ಪ್ರವೇಶ ಪಡೆಯಿತು. ಫೈನಲ್​ನಲ್ಲಿ ಕಪ್​ ನಮ್ಮದಾಯಿತು. ಸೋಲುಗಳ ನಡುವೆಯೂ ಕೊನೇ ಮೂರು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಟ್ರೋಫಿಗೆ ಮುತ್ತಿಟ್ಟಿದ್ದಾರೆ ಆರ್​ಸಿಬಿ ವನಿತಯರು. ಈ ತಂಡದ ಸಂಘಟಿತ ಹೋರಾಟ ಯುವ ಅಥ್ಲೀಟ್​ಗಳ ಪಾಲಿಗೆ ನಿಜವಾದ ಪ್ರೇರಣೆ. ಹಲವಾರು ವರ್ಷಗಳಿಂದ ಕಪ್​ ಗೆಲ್ಲದ ಫ್ರಾಂಚೈಸಿ ಎಂಬ ಹೀಗಳಿಕೆಯ ನಡುವೆಯೂ ಗೆಲುವಿನ ಪಥದಲ್ಲಿ ಸಾಗಿ ಟ್ರೋಫಿ ಗೆಲ್ಲುವುದು ಸುಲಭದ ಮಾತಲ್ಲ. ಅದಕ್ಕೆ ಮಾನಸಿಕ ಸ್ಥಿರತೆ ಬಲಿಷ್ಠವಾಗಿರಬೇಕಾಗುತ್ತದೆ. ಅದನ್ನು ಆರ್​​​ಸಿಬಿ ವನಿತೆಯರು ಸಾಬೀತುಪಡಿಸಿದ್ದಾರೆ.

ತನಗಿಂತ ಬಲಿಷ್ಠ ತಂಡಗಳು ಹಾಗೂ ಚಾಂಪಿಯನ್ ತಂಡವನನ್ನು ಎದುರಿಸುವಾಗ ಯಾವುದೇ ಹಿಂಜರಿಕೆ ತೋರದೆ ನಮ್ಮ ನೈಜ ಆಟಕ್ಕೆ ಇಂಬು ಕೊಟ್ಟ ಆರ್​ಸಿಬಿ ಆಟಗಾರ್ತಿಯರು ಚಾಂಪಿಯನ್ ಪಟ್ಟಕ್ಕೆ ಅರ್ಹರು. ಆರ್​​ಸಿಬಿ ಹೋರಾಟ ಟೂರ್ನಿ ಆರಂಭದಿಂದ ಕೊನೆಯವರೆಗೂ ಪುರುಷರ ತಂಡ ಸೇರಿದಂತೆ ಕ್ರಿಕೆಟ್ ಕ್ಷೇತ್ರದ ಎಲ್ಲ ತಂಡಗಳಿಗೆ ಆದರ್ಶ.

ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ 11 ಇನಿಂಗ್ಸ್​​​​ಗಳಲ್ಲಿ 395 ಬಾರಿಸಿದ ಎಲಿಸ್ ಪೆರಿ, 12 ಇನಿಂಗ್ಸ್​ಗಳಲ್ಲಿ 361 ರನ್ ಬಾರಿಸಿದ ನಾಯಕಿ ಸ್ಮೃತಿ ಮಂಧಾನಾ, 10 ಇನಿಂಗ್ಸ್​ಗಳಲ್ಲಿ 286 ರನ್ ಚಚ್ಚಿದ ವಿಕೆಟ್​ಕೀಪರ್ ಬ್ಯಾಟರ್​ ರಿಚಾ ಘೋಷ್​ ಆರ್​ಸಿಬಿ ಅಭಿಮಾನಿಗಳ ಅಕ್ಕರೆಗೆ ಪಾತ್ರರಾಗಿದ್ದಾರೆ. ಕನ್ನಡ ನಾಡಿನ ಕುವರಿ ಶ್ರೇಯಾಂಕ ಪಾಟೀಲ್ 10 ಇನಿಂಗ್ಸ್​ಗಳಲ್ಲಿ 16 ವಿಕೆಟ್​, ಆಶಾ ಶೋಭನಾ 12 ವಿಕೆಟ್ ಪಡೆದು ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದಾರೆ. ಈ ಪ್ರತಿಭೆಗಳು ಭವಿಷ್ಯದ ಕ್ರಿಕೆಟರ್​ಗಳಿಗೆ ಮಾದರಿಯಾಗುವುದರಲ್ಲಿ ಸಂಶಯವೇ ಇಲ್ಲ. ಆರ್​​ಸಿಬಿ ಮಹಿಳಾ ಕಲಿಗಳ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರಯತ್ನಗಳು ಆರ್​ಸಿಬಿಯ ಸಾಧನೆಯ ಇತಿಹಾಸದಲ್ಲಿ ದಾಖಲಾಗಿದೆ.

Exit mobile version