ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್‌ನ ಪ್ರಮುಖ ಘಟ್ಟ ಯಶಸ್ವಿಯಾಗಿದೆ. ಚಂದ್ರನ ಮೇಲೆ ಇಳಿಯಬೇಕಾದ ಲ್ಯಾಂಡರ್- ರೋವರ್‌ಗಳನ್ನು ಹೊತ್ತ ಲಾಂಚ್ ವೆಹಿಕಲ್ ಮಾರ್ಕ್ III (LVM 3) ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ್ದು, ಭೂಮಿಯ ಕಕ್ಷೆಯನ್ನು ಸೇರಿದೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರ ಹಾಗೂ ಚಂದ್ರನ ಅಂಗಳದಲ್ಲಿ ಮಹತ್ವದ ಸಂಶೋಧನೆ ಮಾಡುವ ಭಾರತದ, ಇಸ್ರೊ ಸಂಸ್ಥೆಯ ಕನಸಿಗೆ ರೆಕ್ಕೆ-ಪುಕ್ಕ ಬಂದಿದೆ. ಇನ್ನೊಂದು ಪ್ರಮುಖ ಘಟ್ಟಕ್ಕಾಗಿ ನಾವು ಆಗಸ್ಟ್ 23ರವರೆಗೆ ಕಾಯಬೇಕಾಗಿದೆ. ಅಂದು ರೋವರ್ ಅನ್ನು ಹೊತ್ತ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಬೇಕಿದೆ. ಭೂಮಿಗಿಂತ ಚಂದ್ರನ ಅಂಗಳದಲ್ಲಿ ಗುರುತ್ವಾಕರ್ಷಣೆ ಶಕ್ತಿ ಕಡಿಮೆ ಇರುವುದರಿಂದ ಸಾಫ್ಟ್ ಲ್ಯಾಂಡಿಂಗ್ ಸವಾಲು. ಜತೆಗೆ ಚಂದ್ರಯಾನ-2ರ ಭಾಗಶಃ ವೈಫಲ್ಯದ ಕಹಿನೆನಪೂ ಜತೆಗಿದೆ. ಆದರೆ ಈ ಬಾರಿ ಲೋಪದೋಷಗಳನ್ನು ಸರಿಪಡಿಸಿಕೊಂಡಿರುವುದರಿಂದ, ನೌಕೆ ಯಶಸ್ವಿಯಾಗಿ ಲ್ಯಾಂಡ್ ಆಗಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.
ಆ ಮೂಲಕ ಬಾಹ್ಯಾಕಾಶ ಸಾಧನೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ. ಇದಲ್ಲದೆ ಇನ್ನೂ ಹಲವು ವಿಶೇಷಗಳೂ ಇವೆ. ಅಮೆರಿಕ, ಚೀನಾ ಹಾಗೂ ರಷ್ಯಾ ನಂತರ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊತ್ತಮೊದಲ ರೋವರ್ ಕೂಡ ಆಗಲಿದೆ. ಇಲ್ಲಿ ನಡೆಯಲಿರುವ ಶೋಧಗಳು, ಸೌರವ್ಯೂಹದ ಆರಂಭದ ಕಾಲದ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆ ವಿಜ್ಞಾನಿಗಳದಾಗಿದೆ. ಅಂದ ಹಾಗೆ, ಈ ಮಹತ್ವದ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವವರು ಒಬ್ಬರು ಮಹಿಳೆ ಎಂಬುದು ವಿಶೇಷ. ಭಾರತದ ರಾಕೆಟ್ ವುಮನ್ ಎಂದು ಕರೆಯಿಸಿಕೊಳ್ಳುವ ವಿಜ್ಞಾನಿ ರಿತು ಕರಿದಾಲ್ ಶ್ರೀವಾಸ್ತವ್ ಅವರು ಚಂದ್ರಯಾನ ಮಿಷನ್ 3 ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದು, ಮಿಷನ್‌ನ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಜತೆಗೆ, ಚಂದ್ರಯಾನಕ್ಕೆ ಬಲ ತುಂಬಿದ ರಾಕೆಟ್ ಮತ್ತು ಲಾಂಚರ್‌ಗಳ ಬಿಡಿಭಾಗ ತಯಾರಾಗಿದ್ದು ನಮ್ಮ ರಾಜ್ಯದ ಬೆಳಗಾವಿಯಲ್ಲಿ. ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿಮಿಟೆಡ್‌ನಲ್ಲಿ ಬಿಡಿಭಾಗ ತಯಾರಿಕೆ ನಡೆದಿದೆ. ಹಾಗೇ ಶ್ರೀಹರಿಕೋಟಾದಲ್ಲಿ ವಿಜ್ಞಾನಿಯಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಪ್ರಕಾಶ ಪಡ್ನೇಕರ್ ಕೂಡ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇವೆಲ್ಲವೂ ನಮಗೆ ಹೆಮ್ಮೆ ತರುವ ಸಂಗತಿಗಳು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚಂದ್ರಯಾನ-3 ಯಶಸ್ವಿಯಾಗಲಿ
ಚಂದ್ರ ಭೂಮಿಯ ಜನನ ಕಾಲದಿಂದಲೇ ನಮ್ಮ ಜತೆಗೇ ಇರುವ, ನಮ್ಮನ್ನು ಹಲವು ಸಾಹಸಗಳಿಗೆ ಸದಾ ಉದ್ದೀಪಿಸುವ ಒಂದು ಶಕ್ತಿ. ಚಂದ್ರನ ಮೇಲೆ ನಡೆಯಲಿರುವ ಪ್ರಯೋಗಗಳು ನಮ್ಮ ಮುಂದಿನ ಬಾಹ್ಯಾಕಾಶ ಸಾಹಸಗಳಿಗೆ ಸ್ಫೂರ್ತಿ. ಅತ್ತ ಅಮೆರಿಕ ಕೂಡ ಇನ್ನೊಮ್ಮೆ ಚಂದ್ರನ ಮೇಲೆ ಮಾನವನನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ನಮ್ಮ ಇಸ್ರೋ ಸಂಸ್ಥೆಯೂ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ಚಂದ್ರಯಾನದ ಬಳಿಕ ಮಂಗಳಯಾನದ ಇನ್ನೊಂದು ಕಂತು ಕಾದಿದೆ. ಬಾಹ್ಯಾಕಾಶ ಸಂಶೋಧನೆ ಹಾಗೂ ಅಭಿವೃದ್ಧಿಗಳಿಂದಾಗಿಯೇ ನಮ್ಮ ಆಧುನಿಕ ಕಾಲದ ಬಹುತೇಕ ಎಲ್ಲ ತಂತ್ರಜ್ಞಾನಗಳೂ ಸಾಧ್ಯವಾಗಿವೆ. ಟಿವಿಯಿಂದ ಹಿಡಿದು ಇಂಟರ್‌ನೆಟ್ ವರೆಗೆ ಎಲ್ಲವೂ ಉಪಗ್ರಹಗಳನ್ನು ಅವಲಂಬಿಸಿವೆ. ನಾವೀಗ ಭೂಮಿಯ ಕಕ್ಷೆಯನ್ನು ದಾಟಿ, ಚಂದ್ರನನ್ನೂ ದಾಟಿ, ಮಂಗಳನವರೆಗೂ ವ್ಯಾಪಿಸಿದ್ದೇವೆ. ಅಲ್ಲಿಂದಲೂ ಮುಂದಕ್ಕೆ ಸಾಗಬಹುದು. ಇದಕ್ಕೆ ಬಹುಕಾಲ ಹಿಡಿಯಬಹುದು. ಆದರೆ ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ನೀಲ್ ಆರ್ಮ್‌ಸ್ಟ್ರಾಂಗ್ ಹೇಳಿದಂತೆ, ʼʼಇದು ಮನುಷ್ಯನಿಗೆ ಪುಟ್ಟ ಹೆಜ್ಜೆ, ಆದರೆ ಮನುಕುಲಕ್ಕೆ ಮಹಾ ಜಿಗಿತʼʼ. ಚಂದ್ರಯಾನ-3 ಬಗೆಗೂ ನಾವು ಈ ಮಾತನ್ನು ಹೇಳಬಹುದಾಗಿದೆ.a