ಲಾಹೋರ್: ಪಾಕಿಸ್ತಾನದ ಲಾಹೋರ್ ಹೈಕೋರ್ಟ್ (ಎಲ್‍ಹೆಚ್‍ಸಿ ) ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಆಲಿಯಾ ನೀಲಂ ಅವರು ನೇಮಕಗೊಂಡಿದ್ದು, ಆ ಮೂಲಕ ಆಲಿಯಾ ನೀಲಂ (Chief Justice Aalia Neelum)ಅವರು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ (ಎಲ್‍ಹೆಚ್‍ಸಿ) ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನದ ಅಧ್ಯಕ್ಷರಾದ ಆಸಿಫ್ ಅಲಿ ಜರ್ದಾರಿ ಬುಧವಾರ ಅವರ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ.
ಆಲಿಯಾ ನೀಲಂ ಅವರ ನೇಮಕವನ್ನು ದೃಢಪಡಿಸಿದ ಪಾಕಿಸ್ತಾನದ ಕಾನೂನು ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದ್ದು, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಸಂವಿಧಾನದ 193 ನೇ ವಿಧಿಯ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಅಧ್ಯಕ್ಷರು ಲಾಹೋರ್ ಹೈಕೋರ್ಟ್‍ನ ನ್ಯಾಯಮೂರ್ತಿ ಮಿಸ್ ಆಲಿಯಾ ನೀಲಂ ನ್ಯಾಯಾಧೀಶರನ್ನು ತಮ್ಮ ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಸದರಿ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಸಂತೋಷಪಡುತ್ತಾರೆ” ಎಂದು ತಿಳಿಸಿದೆ. ಅಲ್ಲದೇ ಎಲ್‍ಹೆಚ್‍ಸಿಯ ಹಿರಿಯ ನ್ಯಾಯಾಧೀಶರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ ನೀಲಂ ಅವರ ಬಡ್ತಿಯನ್ನು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ ಪಾಕಿಸ್ತಾನದ ನ್ಯಾಯಾಂಗ ಆಯೋಗ (ಜೆಸಿಪಿ) ಕಳೆದ ವಾರ ಅನುಮೋದಿಸಿದೆ ಎಂದು ವರದಿಯಾಗಿದೆ.
2018ರಲ್ಲಿ ಬಲೂಚಿಸ್ತಾನ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾಯಮೂರ್ತಿ ಸಯೀದಾ ತಾಹಿರಾ ಸಫ್ದರ್ ಈ ಸಾಧನೆ ಮಾಡಿದ್ದರು. ಇದೀಗ ಎಲ್‍ಹೆಚ್‍ಸಿಯ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾದ ನೀಲಂ ಅವರು ಪಾಕಿಸ್ತಾನದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ. ಅಲ್ಲದೇ ನ್ಯಾಯಮೂರ್ತಿ ಆಯೇಷಾ ಎ ಮಲಿಕ್ ಅವರು 2021 ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್‍ನಲ್ಲಿ ನೇಮಕಗೊಂಡ ಮೊದಲ ಮಹಿಳಾ ನ್ಯಾಯಾಧೀಶರಾಗುವ ಮೂಲಕ ಪಾಕಿಸ್ತಾನದಲ್ಲಿ ಮಹಿಳೆಯ ಸಾಧನೆ ಎದ್ದು ಕಾಣುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ರೋಗಿಗಳನ್ನು ನೋಡಿಕೊಳ್ಳುವ ಬದಲು ಕೋತಿಮರಿ ಜೊತೆ ಆಟವಾಡಿದ ನರ್ಸ್‌ಗಳು! ಕೊನೆಗೆ ಆಗಿದ್ದೇನು?
ನವೆಂಬರ್ 12, 1966ರಂದು ಜನಿಸಿದ ನ್ಯಾಯಮೂರ್ತಿ ನೀಲಂ ಅವರು 1995 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್ಎಲ್‍ಬಿ ಪದವಿ ಪಡೆದರು ಮತ್ತು 1996 ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ನಂತರ ಅವರು 2008 ರಲ್ಲಿ ಸುಪ್ರೀಂ ಕೋರ್ಟ್ ವಕೀಲರಾಗಿ ನೋಂದಾಯಿಸಿಕೊಂಡರು. ನೀಲಂ ಅವರು 2013ರಲ್ಲಿ ಲಾಹೋರ್ ಹೈಕೋರ್ಟ್‍ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು ತಮ್ಮ ನ್ಯಾಯಯುತ ವಿಧಾನ ಮತ್ತು ಕಾನೂನು ಕುಶಲತೆಗೆ ಹೆಸರುವಾಸಿಯಾಗಿದ್ದಾರೆ ಎನ್ನಲಾಗಿದೆ.