ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ (Chikkodi Lok Sabha Result : ) ಕಾಂಗ್ರೆಸ್ನ ಪ್ರಿಯಾಂಕ ಜಾರಕಿಹೊಳಿ ಗೆದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುವಾಗ ಪಾಕಿಸ್ತಾನ ಪರ ಜೈಕಾರ ಕೂಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಮೀರ್ ನಾಯಕವಾಡಿ ಎಂದು ಗುರುತಿಸಲಾಗಿದೆ. 25 ವರ್ಷದ ಆತ ಹುಂಬತನದಿಂದ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದ. ಆ ತಕ್ಷಣವೇ ವಿಷಯ ಬಹಿರಂಗಗೊಂಡು ಆಕ್ರೋಶ ವ್ಯಕ್ತವಾಗಿತ್ತು.
ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ವಿಡಿಯೊ ಹಾಗೂ ಸ್ಥಳದಲ್ಲಿ ಹಾಜರಿದ್ದವರ ಸಾಕ್ಷಿಯನ್ನು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ಮಾಡುತ್ತಿದ್ದು ಪಾಕಿಸ್ತಾನಕ್ಕೆ ಜೈಕಾರ ಹಾಕಲು ಕಾರಣವೇನು ಎಂಬುದನ್ನು ವಿಚಾರಿಸುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿ’ಹೋಳಿ’; ಜೊಲ್ಲೆಗೆ ಸೋಲು
ರಾಜ್ಯದ ಗಮನ ಸೆಳೆದಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ (Chikkodi Election Result 2024) ಬಾರಿಸಿದೆ. ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಅವರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಯುವ ನಾಯಕಿ ಪ್ರಯಾಂಕಾ ಜಾರಕಿಹೊಳಿ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ಜತೆಗೆ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಅವರು 96,253 ಮತಗಳ ಅಂತರದಿಂದ ಜಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 6,80,179 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ 5,83,926 ಮತಗಳನ್ನು ಪಡೆದರು.
ಹಾಲಿ ಸಂಸದರೂ ಆಗಿರುವ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ತಪ್ಪಿಸಿ, ತಾವು ಟಿಕೆಟ್ ಗಿಟ್ಟಿಸಿಕೊಳ್ಳಲು ರಮೇಶ್ ಕತ್ತಿ ಅವರು ತಂತ್ರ ಹೆಣೆದರೂ ಅದು ಸಫಲವಾಗಿಲ್ಲ. ಬಳಿಕ ರಮೇಶ್ ಕತ್ತಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದರೂ, ಅದು ಸಫಲವಾಗಲಿಲ್ಲ. ಅಷ್ಟರಮಟ್ಟಿಗೆ, ಅಣ್ಣಾಸಾಹೇಬ್ ಜೊಲ್ಲೆ ಅವರು ಭಿನ್ನಮತವನ್ನು ತಡೆದಿದ್ದು, ಮೋದಿ ಅವರ ಅಲೆ, ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳೇ ಅವರಿಗೆ ಸಕಾರಾತ್ಮಕವಾಗಲಿವೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದರು. ಅಣ್ಣಾ ಸಾಹೇಬ್ ಜೊಲ್ಲೆ ಅವರ ಪತ್ನಿ ಶಶಿಕಲಾ ಜೊಲ್ಲೆ ಅವರು ಶಾಸಕಿ ಆಗಿರುವ ಕಾರಣ ಅವರ ಪ್ರಾಬಲ್ಯ ಜಾಸ್ತಿ ಇತ್ತು. ಇದೆಲ್ಲವನ್ನು ಪ್ರಿಯಾಂಕಾ ಜಾರಕಿಹೊಳಿ ಅವರು ಹಿಮ್ಮೆಟ್ಟಿ ನಿಂತಿದ್ದಾರೆ.
ಇದನ್ನೂ ಓದಿ: Chikkaballapur News : ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ
ಎಂಬಿಎ ಪದವೀಧರೆ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಅಪ್ಪ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಅನುಭವವು ಜತೆಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಅಪ್ಪನ ಗೆಲುವಾಗಿ ಓಡಾಟ ನಡೆಸಿದ್ದರು. ಇನ್ನು, ಚಿಕ್ಕೋಡಿಯಲ್ಲಿ ಲಿಂಗಾಯತ ಸಮುದಾದಯವರ ಮತಗಳೇ ನಿರ್ಣಾಯಕವಾಗಿದ್ದವು. ಸುಮಾರು 4.10 ಲಕ್ಷ ಲಿಂಗಾಯತ ಮತಗಳಿದ್ದು, ಪರಿಶಿಷ್ಟ ಜಾತಿ 1.65 ಲಕ್ಷ, ಪರಿಶಿಷ್ಟ ಪಂಗಡ 9೦, ಮುಸ್ಲಿಮರ 1.80 ಲಕ್ಷ ಮತಗಳು ಕೂಡ ನಿರ್ಣಾಯಕವಾಗಿದ್ದವು.