Site icon Vistara News

ವಿಸ್ತಾರ ಸಂಪಾದಕೀಯ | ಮಕ್ಕಳ ಆತ್ಮಹತ್ಯೆ ಸರಣಿ ಕಳವಳಕಾರಿ

ಬೆಂಗಳೂರಿನಲ್ಲಿ 72 ಗಂಟೆಗಳ ಅವಧಿಯಲ್ಲಿ ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವುದಯ ಕಳವಳಕಾರಿ ಸಂಗತಿ. ಅದೂ ಕೂಡ ತೀರಾ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಚಿಂತಿಸುವಂತಾಗಿದೆ. ಕಾಪಿ ಮಾಡುವಾಗ ಸಿಕ್ಕಿಬಿದ್ದಿದ್ದಕ್ಕೆ ಒಬ್ಬ ವಿದ್ಯಾರ್ಥಿ ಅಪಾರ್ಟ್‌ಮೆಂಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲಸ ಮಾಡದ ಸೋಮಾರಿ ಎಂದು ಅಪ್ಪ ಬೈದದ್ದಕ್ಕೆ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ತನ್ನ ಮೊಬೈಲ್‌ಗೆ ಪಾಸ್‌ವರ್ಡ್ ಹಾಕಿ ಲಾಕ್‌ ಮಾಡಿದ್ದರಿಂದ ಬೇಸರಗೊಂಡ 19 ವರ್ಷದ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡವರ ಆತ್ಮಹತ್ಯೆಯೂ ಆತಂಕಕರವೇ. ಆದರೆ ಜೀವನ ಎಂದರೇನು ಎಂಬುದನ್ನು ಇನ್ನೂ ಸರಿಯಾಗಿ ನೋಡಿರದ ಮಕ್ಕಳು ಕ್ಷುಲ್ಲಕ ಕಾರಣಗಳಿಗೆ ಜೀವ ತೆರುತ್ತಿರುವುದು ನಾವೆಲ್ಲ ಗಂಭೀರವಾಗಿ ಚಿಂತಿಸಬೇಕಾದ ವಿಷಯ.

ರಾಜಧಾನಿಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಚಿಕ್ಕ ಪುಟ್ಟ ವಿಷಯಕ್ಕೂ ಸಾಯುವ ಯೋಚನೆ ಮಾಡುತ್ತಿರುವವರಲ್ಲಿ ವಿದ್ಯಾರ್ಥಿಗಳ ಸಹಿತ ಯುವಜನತೆಯೇ ಪಾಲೇ ಹೆಚ್ಚಿದೆ. ಆರೋಗ್ಯ ಇಲಾಖೆ ಸಂಗ್ರಹಿಸಿರುವ ಅಂಕಿ-ಅಂಶದಲ್ಲಿ ಈ ವಿಷಯ ತಿಳಿದುಬಂದಿದ್ದು, ದಿನಕ್ಕೆ ಸರಾಸರಿ 10 ಮಂದಿ, ತಿಂಗಳಿಗೆ 300 ಮಂದಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ. ಇದು ಬೆಂಗಳೂರಿನ ಟಾಪ್ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡುಬರುತ್ತಿರುವ ಪ್ರಕರಣಗಳು. ಇನ್ನುಳಿದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಅಂಕಿ ಅಂಶ ತೆಗೆದರೆ ಇನ್ನೂ ಹೆಚ್ಚಿರಬಹುದು. ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನದ ಪ್ರಕರಣಗಳನ್ನು ಪರಿಶೀಲಿಸಿದಾಗ ಕೆಲವು ಕಾರಣಗಳು ಅತ್ಯಂತ ಕ್ಷುಲ್ಲಕವೆನಿಸಿದರೂ, ಕೆಲವು ಸಾಮಾನ್ಯ ಸಂಗತಿಗಳನ್ನು ಗುರುತಿಸಬಹುದಾಗಿದೆ. ವಿದ್ಯಾರ್ಥಿಗಳ ಮೇಲೆ ಶಿಕ್ಷಕರಿಂದ ಹಾಗೂ ಪೋಷಕರಿಂದ ಉಂಟಾಗುತ್ತಿರುವ ಕಲಿಕಾ ಫಲಿತಾಂಶದ ಒತ್ತಡ, ಕಡಿಮೆ ಅಂಕ ಬಂದುದರಿಂದ ಹತಾಶೆ, ಮಾನಸಿಕ ಹಿಂಸೆ, ಮೊಬೈಲ್ ಗೀಳು ಕೂಡ ಆತ್ಮಹತ್ಯೆ ಯತ್ನಕ್ಕೆ ಕಾರಣಗಳಾಗಿ ಕಾಣಿಸಿಕೊಂಡಿವೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರುವ ಒತ್ತಡದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದ್ದು, ಇಂದು ಕೆಲವು ಶಾಲೆ- ಕಾಲೇಜುಗಳಲ್ಲೂ ಈ ಬಗ್ಗೆ ಕೌನ್ಸೆಲಿಂಗ್‌ ಲಭ್ಯವಿದೆ. ಒತ್ತಡದ ದುಷ್ಪರಿಣಾಮದ ಬಗ್ಗೆ ಕೆಲವರಲ್ಲಾದರೂ ಅರಿವು ಮೂಡಿದೆ. ಆದರೆ ಮಕ್ಕಳ ಆತ್ಮಹತ್ಯೆಯಲ್ಲಿ ಹೊಸದಾಗಿ ಕಳವಳ ಮೂಡಿಸಿರುವ ಅಂಶ ಎಂದರೆ ಮೊಬೈಲ್‌ ವ್ಯಸನ. ಕಳೆದೆರಡು ವರ್ಷಗಳ ಕೋವಿಡ್‌ ಹಿನ್ನೆಲೆಯ ಆನ್‌ಲೈನ್‌ ಕಲಿಕೆಯ ಪರಿಣಾಮ ಹೆಚ್ಚಾದ ಸ್ಕ್ರೀನ್‌ಟೈಮ್‌ ಹಾಗೂ ಅದರಿಂದಾಗಿ ಉಂಟಾದ ಮೊಬೈಲ್‌ ಗೀಳುಗಳು ಮಕ್ಕಳಲ್ಲಿ ಮುಂದುವರಿದಿವೆ. ಹೆಚ್ಚಿನ ಪೋಷಕರಲ್ಲಿ ಇಬ್ಬರೂ ದುಡಿಯಲು ಹೋಗುವುದರಿಂದ ಮಕ್ಕಳ ಕಡೆ ಗಮನ ಹರಿಸಲು ಸಮಯವಿಲ್ಲದಾಗಿದೆ. ಅಗ್ಗದ ದರದಲ್ಲಿ ಸಿಗುವ ಇಂಟರ್‌ನೆಟ್‌ ಮಕ್ಕಳಲ್ಲಿ ಉಂಟುಮಾಡಬಹುದಾದ ಅಗಾಧ ದುಷ್ಪರಿಣಾಮದ ಅರಿವು ಹೆಚ್ಚಿನ ಹೆತ್ತವರಿಗೆ ಇಲ್ಲ. ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮುಳುಗಿರುವ ಮಕ್ಕಳು ಏನು ನೋಡುತ್ತಾರೆ ಎಂಬ ತಿಳಿವಳಿಕೆ ಇರುವುದಿಲ್ಲ. ಕೆಲವೊಮ್ಮೆ ಪೋಷಕರೇ ತಮ್ಮ ಮೊಬೈಲ್‌ಗಳಲ್ಲಿ ಮುಳುಗಿಹೋಗಿ ಮಕ್ಕಳಿಗೆ ಕೆಟ್ಟ ಮಾರಿಯಾಗಿರುವುದು, ಅವರಿಗೆ ಸಮಯ ಕೊಡದೆ ತಮ್ಮ ಮಕ್ಕಳನ್ನು ತಾವೇ ಕೈಯ್ಯಾರೆ ಕೊಲ್ಲುವುದೂ ನಡೆಯುತ್ತಿದೆ. ಮೊಬೈಲ್‌ ಗೀಳು ಸೃಷ್ಟಿಯಾಗಿರುವ ಮಕ್ಕಳಿಂದ ಹಠಾತ್ತಾಗಿ ಅದನ್ನು ಕಿತ್ತುಕೊಂಡಾಗ ಉಂಟಾಗುವ ಶೂನ್ಯತೆಯೇ ಅವರಿಂದ ಆತ್ಮಹತ್ಯೆ ಯತ್ನವನ್ನು ಮಾಡಿಸುತ್ತದೆ. ಇದು ಬೆದರಿಕೆಯ ಅಸ್ತ್ರವಾಗಿಯೂ ಬಳಕೆಯಾಗುತ್ತದೆ.

ಈ ನಿಟ್ಟಿನಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಕೌನ್ಸೆಲಿಂಗ್ ನಡೆಸುವ ಅಗತ್ಯ ಇದೆ. ಪೋಷಕರಿಗೂ ಇದರ ಅಗತ್ಯ ತುಂಬಾ ಇದೆ. ಸ್ಕ್ರೀನ್‌ ಟೈಮ್‌ ಎಷ್ಟಿದ್ದರೆ ಚೆನ್ನ, ಸುರಕ್ಷಿತ ಇಂಟರ್‌ನೆಟ್‌ ಬಳಕೆಯ ಸೂತ್ರಗಳೇನು, ಮೊಬೈಲ್‌ ವ್ಯಸನಕ್ಕೆ ಒಳಗಾಗಿರುವ ಮಕ್ಕಳನ್ನು ಅದರಿಂದ ಹೊರತರುವುದು ಹೇಗೆ, ಮೊಬೈಲ್‌ ಹೊರತುಪಡಿಸಿ ಪರ್ಯಾಯ ವ್ಯವಸ್ಥೆಯೇನು, ಮಕ್ಕಳಿಗೆ ಸಮಯ ಕೊಡುವುದು ಹಾಗೂ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ- ಇವೆಲ್ಲದರ ಬಗ್ಗೆಯೂ ಕೌನ್ಸೆಲಿಂಗ್‌ ಆಗಬೇಕಿದೆ. ಆರೋಗ್ಯ ಇಲಾಖೆ ಬಳಿ ಇರುವ ಮಾಹಿತಿಯಂತೆ, ಒಂದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿ ಮತ್ತೆ ಮತ್ತೆ ಪ್ರಯತ್ನ ಮಾಡಬಹುದು. ಹೀಗಾಗಿ ಅಂಥವರ ಬಗ್ಗೆ ಹೆಚ್ಚಿನ ನಿಗಾ ಮತ್ತು ಆಪ್ತ ಸಮಾಲೋಚನೆ ಅಗತ್ಯವಾಗಿದೆ. ಶಾಲೆ- ಕಾಲೇಜುಗಳು ಈ ಕುರಿತು ಆರೋಗ್ಯ ಇಲಾಖೆ ಹಾಗೂ ಮಾನಸಿಕ ಚಿಕಿತ್ಸಕರ ಜತೆ ನಿಕಟ ಸಂಪರ್ಕ ಹೊಂದಿರಬೇಕು. ಪೋಷಕರೂ ಸಮಯ ಮಿಂಚಿಹೋಗುವ ಮುನ್ನ ಎಚ್ಚೆತ್ತುಕೊಂಡು, ತಮ್ಮ ಮಕ್ಕಳ ಮನೋಲೋಕದ ಸಕಲ ಆಗುಹೋಗುಗಳನ್ನು ಗಮನಿಸಬೇಕಿದೆ.

ವಿಸ್ತಾರ ಟಿವಿಯಲ್ಲಿ ಬೆಳಗ್ಗೆ 8.27ಕ್ಕೆ ಪ್ರಸಾರವಾಗುವ ನ್ಯೂಸ್ ಮಾರ್ನಿಂಗ್ ವಿತ್ HPKಯಲ್ಲಿ ‘ವಿಸ್ತಾರ ಸಂಪಾದಕೀಯ’ ವಿಶ್ಲೇಷಣೆ ನೋಡಿ…

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸರ್ಕಾರಗಳ ಡಬಲ್ ಎಂಜಿನ್ ಬರೀ ಸದ್ದಾಗದಿರಲಿ

Exit mobile version