ದೇಶದ ಮೊದಲ ಹೈಬ್ರಿಡ್ ರಾಕೆಟ್ (Hybrid Rocket) ಮೂಲಕ ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹಗಳನ್ನು ಭಾನುವಾರ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕಳುಹಿಸಲಾಯಿತು. ಈ ಮೂಲಕ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-2023ಕ್ಕೆ ಚಾಲನೆ ದೊರೆಯಿತು. ಮಾರ್ಟಿನ್ ಫೌಂಡೇಶನ್, ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್‌ನ್ಯಾಷನಲ್ ಫೌಂಡೇಶನ್ ಮತ್ತು ಸ್ಪೇಸ್ ಜೋನ್ ಇಂಡಿಯಾ ಸಹಯೋಗದಲ್ಲಿ ಈ ಮಿಷನ್ ಕೈಗೊಳ್ಳಲಾಗಿದೆ. ಬಾಹ್ಯಾಕಾಶದಲ್ಲಿ ತನ್ನದೇ ಪ್ರಭಾವವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿರುವ ಭಾರತಕ್ಕೆ, ಈ ಮಿಷನ್ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ಸಂಪೂರ್ಣವಾಗಿ ವಿದ್ಯಾರ್ಥಿಗಳೇ ತಯಾರಿಸಿದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸುವ ಮೂಲಕ ಭಾರತವು ವಿಶಿಷ್ಟ ಸಾಧನೆಯನ್ನು ಮಾಡಿದೆ. ಜತೆಗೆ, ಮಕ್ಕಳಲ್ಲಿ ಈ ಮೂಲಕ ಬಾಹ್ಯಾಕಾಶದೆಡೆಗೆ ಆಸಕ್ತಿ ಬೆಳೆಸಲು, ಉತ್ತೇಜಿಸಲು ಮುಂದಾಗಿದೆ.
ಉಪಗ್ರಹಗಳ ವಿನ್ಯಾಸ ಮತ್ತು ಅವುಗಳನ್ನು ಸಿದ್ಧಪಡಿಸಲು 6ರಿಂದ 12 ತರಗತಿಯಲ್ಲಿ ಓದುತ್ತಿರುವ 5000 ಮಕ್ಕಳಿಗೆ ಅವಕಾಶವನ್ನು ನೀಡಲಾಗಿತ್ತು. ಹೀಗೆ ಅವಕಾಶ ಪಡೆದು 2000 ಮಕ್ಕಳು ತಯಾರಿಸಿದ 150 ಉಪಗ್ರಹಗಳನ್ನು ದೇಶದ ಮೊದಲ ಹೈಬ್ರಿಡ್ ರಾಕೆಟ್ ಮೂಲಕ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆ ಮೂಲಕ ಬಾಹ್ಯಾಕಾಶ ಸಾಧನೆಯ ಕ್ಷಿತಿಜದಲ್ಲಿ ಭಾರತವು ಮತ್ತೊಂದು ಸಾಧನೆಯನ್ನು ದಾಖಲಿಸಿದೆ. ಈ ಮಿಷನ್‌ನಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ. ಆ ಮೂಲಕ ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದ ಬಗ್ಗೆ ಆಸಕ್ತಿ ಹೆಚ್ಚಿಸುವುದು ಉದ್ದೇಶವಾಗಿತ್ತು.
ಶಾಲಾ ವಿದ್ಯಾರ್ಥಿಗಳ ಕೇಂದ್ರೀತ ಈ ಬಾಹ್ಯಾಕಾಶ ಯೋಜನೆಯನ್ನೇ ನೆಪವಾಗಿಟ್ಟು ನೋಡುವುದಾದರೆ, ಕಳೆದ ಎರಡುಮೂರು ದಶಕಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಆಕಾಶದ ಅಂಗಳದಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿದೆ. ಚಂದ್ರಯಾನ, ಮಂಗಳಯಾನಗಳ ಮೂಲಕ ಬಾಹ್ಯಾಕಾಶದಲ್ಲಿ ತಾನೂ ಜಾಗತಿಕ ಪ್ರತಿಸ್ಪರ್ಧಿ ಎಂಬುದನ್ನು ಈಗಾಗಲೇ ಭಾರತವು ಸಾಬೀತು ಮಾಡಿದೆ. ಭಾರತದ ಬಹು ನಿರೀಕ್ಷೆಯ ಗಗನಯಾನಕ್ಕೂ ಸಿದ್ಧತೆ ನಡೆದಿದ್ದು, ಈ ವರ್ಷವೇ ಅದು ಕೈಗೂಡುವ ಸಾಧ್ಯತೆಗಳಿವೆ. ಬಹುಶಃ ಕೊರೊನಾ ಸಾಂಕ್ರಾಮಿಕ ಎದುರಾಗದಿದ್ದರೆ ಇಷ್ಟೊತ್ತಿಗೆ ಗಗನಯಾನವೂ ಕೈಗೂಡಿರುತ್ತಿತ್ತು. ಎಷ್ಟೇ ಅಡೆತಡೆಗಳು, ಬೇರೆ ಬೇರೆ ರಾಷ್ಟ್ರಗಳ ತಾಂತ್ರಿಕ ಅಸಹಕಾರಗಳ ಮಧ್ಯೆಯೂ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಇಲ್ಲಿಯತನಕ ಅಗಾಧವಾಗಿಯೇ ಬೆಳೆದಿದೆ.
ಸಂಶೋಧನೆ, ಪ್ರಯೋಗಗಳಿಗಾಗಿಯೇ ಇಸ್ರೋ ಈಗ ಉಪಗ್ರಹಗಳನ್ನು ಉಡ್ಡಯನ ಮಾಡುವುದಿಲ್ಲ. ಬದಲಿಗೆ, ವಾಣಿಜ್ಯಾತ್ಮಕವಾಗಿಯೂ ಇಸ್ರೋ ತನ್ನ ವಿಶಿಷ್ಟ ಲಾಂಚಿಂಗ್ ವೆಹಿಕಲ್(ರಾಕೆಟ್)ಗಳನ್ನು ಬಳಸುತ್ತಿದೆ. ಅಂದರೆ, ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ರಾಕೆಟ್‌ಗಳ ಮೂಲಕ ಕಕ್ಷೆಗೆ ಸೇರಿಸುತ್ತಿದೆ. ಈ ಮೂಲಕ ಕಮರ್ಷಿಯಲ್ ಆಗಿಯೂ ಲಾಭವನ್ನು ತಂದುಕೊಡುತ್ತಿದೆ. ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಚೀನಾದಂಥ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಕಡಿಮೆ ದುಡ್ಡಿನಲ್ಲಿ ಯಶಸ್ವಿಯಾಗುತ್ತಿವೆ. ಖಾಸಗಿ ಕಂಪನಿಗಳ ಉಪಗ್ರಹಗಳನ್ನು ಉಡ್ಡಯನ ಮಾಡಿ, ಇಸ್ರೋ ಸೈ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಬಹಳಷ್ಟು ರಾಷ್ಟ್ರಗಳು ಈಗ ಭಾರತವನ್ನು ಆಶ್ರಯಿಸುತ್ತಿವೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯೇ ಸರಿ.
ಭಾರತದ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋ ಮುಂದೆ ಗಗನಯಾನ ಜತೆಗೆ ಇನ್ನೂ ಹಲವಾರು ಯೋಜನೆಗಳಿವೆ. ಈ ಪೈಕಿ, ಆದಿತ್ಯ-ಎಲ್ 1, ಎಕ್ಸ್‌ರೇ ಪೋಲಾರಿಮಿಟರ್ ಸ್ಯಾಟ್‌ಲೈಟ್, ಚಂದ್ರಯಾನ-3, ನಿಸಾರ್, ಶುಕ್ರಯಾನ-1, ಮಂಗಳಯಾನ-2, ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಷನ್ ಮಿಷನ್, ಆ್ಯಸ್ಟ್ರೋಸ್ಯಾಟ್-2 ಪ್ರಮುಖವಾಗಿವೆ. ಈ ಪಟ್ಟಿ ನೋಡಿದರೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಷ್ಟೆಲ್ಲ ಮಹತ್ವಾಕಾಂಕ್ಷಿಯ ಯೋಜನೆಗಳನ್ನು ತನ್ನ ಮುಂದೆ ಹರವಿಟ್ಟುಕೊಂಡಿದೆ ಎಂಬುದು ವೇದ್ಯವಾಗುತ್ತದೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಗಮನಿಸಿದರೆ, ಇಸ್ರೋದ ಭವಿಷ್ಯದ ಮಿಷನ್‌ಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರಿಗೆ ಧನಬಲ!
ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್ ಮೂಲಕ ಭಾರತವು ಮತ್ತೊಂದು ಹಂತವನ್ನು ತಲುಪಿದೆ. ಈಗಿನಿಂದಲೇ ಮಕ್ಕಳಲ್ಲಿ ವಿಜ್ಞಾನ, ಬಾಹ್ಯಾಕಾಶ, ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸುವ ಮೂಲಕ, ಈ ಕ್ಷೇತ್ರದಲ್ಲಿ ಅವರಿಗೆ ಉದ್ಯೋಗ ಕಂಡುಕೊಳ್ಳಲು ದಾರಿ ತೋರಿಸುವ ಪ್ರಯತ್ನವಾಗಿದೆ. ಭವಿಷ್ಯದ ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಈಗಿನಿಂದಲೇ ಬುನಾದಿ ಕಲ್ಪಿಸಲಾಗುತ್ತಿದೆ. ಭವಿಷ್ಯದ ಯೋಜನೆಗಳು ಇನ್ನಷ್ಟು ಕ್ಲಿಷ್ಟಕರವೂ, ಸ್ಪರ್ಧಾತ್ಮಕವೂ ಆಗಿರಬಹುದಾಗಿದೆ. ಹಾಗಾಗಿ, ಈಗಿನಿಂದಲೇ ತಯಾರಿ ನಡೆಸುತ್ತಿರುವುದು ಅಭಿನಂದನಾರ್ಹವಾಗಿದೆ.